ಸಾರಾಂಶ
ಮಳೆಯಿಂದಾಗಿ ಮಂಗಳವಾರ ರಾತ್ರಿ ಕೆಲಹೊತ್ತು ಗೋಪನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ರಾತ್ರಿಯೇ ಹೆಸ್ಕಾಂ ಸಿಬ್ಬಂದಿ ಸಮಸ್ಯೆ ಸರಿಪಡಿಸಿದರು.
ಹುಬ್ಬಳ್ಳಿ: ವಾಯುಭಾರ ಕುಸಿತದಿಂದ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದ್ದು, ಕೆಲವೊಮ್ಮೆ ಜೋರು ಪಡೆಯುವ, ಮತ್ತೆ ಕೆಲಹೊತ್ತು ಜಿಟಿಜಿಟಿಯಾಗಿ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಮಂಗಳವಾರ ರಾತ್ರಿಯಿಂದಲೇ ಆಗಾಗ ಜಿಟಿಜಿಟಿ ಮಳೆಯಾಗುತ್ತಿತು. ರಾತ್ರಿ ವೇಳೆ ಕೆಲಕಾಲ ಜೋರಾಗಿ ಸುರಿದು ದಿನವಿಡೀ ಜಿಟಿಜಿಟಿಯಾಗಿ ಮುಂದುವರಿದಿತ್ತು.ಮಳೆಯಿಂದಾಗಿ ಮಂಗಳವಾರ ರಾತ್ರಿ ಕೆಲಹೊತ್ತು ಗೋಪನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ರಾತ್ರಿಯೇ ಹೆಸ್ಕಾಂ ಸಿಬ್ಬಂದಿ ಸಮಸ್ಯೆ ಸರಿಪಡಿಸಿದರು.
49ನೇ ವಾರ್ಡಿನ ವಿದ್ಯಾನಗರ ರಾಜೀವನಗರದ ಮನೋಜ್ ಹೈಟ್ಸ್, 30ನೇ ವಾರ್ಡಿನ ವಿದ್ಯಾನಗರದ ರೇಣುಕಾನಗರ 5ನೇ ಕ್ರಾಸಿನ ಗಾಂಧಿನಗರ, ಕೇಶ್ವಾಪುರದ ಬೆಳವಣಿಕಿ ಕಾಲನಿ, ವಿದ್ಯಾನಗರದ ಆದರ್ಶ ಕಾಲೇಜು, ಮಂಜುನಾಥ ನಗರದ ಹನುಮಾನ್ ಗುಡಿಯ ಹಿಂಭಾಗ ಮತ್ತು ಗೋಕುಲ ರಸ್ತೆಯ ಸುಚಿರಾಯು ಆಸ್ಪತ್ರೆಯ ಬಳಿ ಗಿಡಗಳು ಬಿದ್ದಿದ್ದವು. ಪಾಲಿಕೆ ಸಿಬ್ಬಂದಿ ಅವುಗಳನ್ನು ತೆರವು ಮಾಡಿದರು.ಮಳೆಯಿಂದ ತರಕಾರಿ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಪರದಾಡುವಂತಾಯಿತು. ಜನರೂ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಯಿತು. ಅನಿವಾರ್ಯ ಕಾರ್ಯಗಳಿಂದ ಹೊರಬಂದವರು ಮಳೆಯಲ್ಲಿ ನೆನೆಯುತ್ತಲೆ ತಮ್ಮ ಕಾರ್ಯ ಮುಗಿಸಿಕೊಳ್ಳುವಂತಾಯಿತು. ಮಂಗಳವಾರ ಸುರಿದ ಮಳೆಯಿಂದ ನೀರಿನಲ್ಲಿ ಹರಿದು ಬಂದಿದ್ದ ಕಸ ತೆರವು ಮಾಡಲು ಪಾಲಿಕೆ ಸಿಬ್ಬಂದಿ ಹರಸಾಹಸ ಪಡುವಂತಾಯಿತು. ಚರಂಡಿಗಳಲ್ಲಿ ಸಿಲುಕಿದ ತ್ಯಾಜ್ಯ ತೆರವು ಕಾರ್ಯ ದಿನವೀಡಿ ನಡೆದೇ ಇತ್ತು. ಪೌರಕಾರ್ಮಿಕರ ಕೆಲಸಕ್ಕೂ ವರುಣ ಆಗಾಗ ತಡೆಯೊಡ್ಡುತ್ತಿದ್ದ.
ಧಾರವಾಡದಲ್ಲಿಯೂ ತೀವ್ರ ಮೋಡ ಮುಸುಕಿದ ವಾತಾವರಣ. ಬೆಳಗಿನಿಂದ ಜಿಟಿ ಜಿಟಿ ಮಳೆ. ಇಷ್ಟು ದಿನಗಳ ಕಾಲ ಬಿರು ಬಿಸಿಲಿನಿಂದ ಬೇಯುತ್ತಿದ್ದ ಧಾರವಾಡ ಜನ ಬುಧವಾರ ಅಕ್ಷರಶಃ ತಂಪು ವಾತಾವರಣ ಅನುಭವಿಸಿದರು.