ಬಯಲು ಪ್ರದೇಶದಲ್ಲೂ ನಿರಂತರ ಮಳೆ: ಕೆರೆಕಟ್ಟೆಗಳಿಗೆ ನೀರು

| Published : Jul 26 2024, 01:30 AM IST

ಸಾರಾಂಶ

ಕಡೂರು, ಬಯಲು ಪ್ರದೇಶವಾದ ಕಡೂರು ತಾಲೂಕಲ್ಲಿ ನಿರಂತರ ಮಳೆ ಬೀಳುತ್ತಿದ್ದು ಕಡೂರು- ಬೀರೂರು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋನೆ ಮಳೆ ಮುಂದುವರಿದಿದೆ.

ತಾಲೂಕಿನಾದ್ಯಂತ ಈ ಬಾರಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆರೆಕಟ್ಟೆಗಳಿಗೆ ನೀರು

ಕನ್ನಡಪ್ರಭ ವಾರ್ತೆ, ಕಡೂರು

ಬಯಲು ಪ್ರದೇಶವಾದ ಕಡೂರು ತಾಲೂಕಲ್ಲಿ ನಿರಂತರ ಮಳೆ ಬೀಳುತ್ತಿದ್ದು ಕಡೂರು- ಬೀರೂರು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋನೆ ಮಳೆ ಮುಂದುವರಿದಿದೆ.ತಾಲೂಕಿನಾದ್ಯಂತ ಈ ಬಾರಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆರೆಕಟ್ಟೆಗಳಿಗೆ ನೀರು ಹರಿಯುತ್ತಿದೆ. 3 ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ರಾತ್ರಿ ಸ್ವಲ್ಪಮಟ್ಟಿಗೆ ಬಿಡುವು ನೀಡಿತ್ತು. ಆದರೆ ಗುರುವಾರ ಬೆಳಗಿನಿಂದ ಸಂಜೆವರೆಗೆ ಎಂದಿನಂತೆ ಬಂದಿತು. ಇದರಿಂದ ಜನ ಸಂಚಾರಕ್ಕೆ ಸ್ವಲ್ಪ ಮಟ್ಟಿಗೆ ತ್ರಾಸವಾಯಿತು.ಆದರೆ ರೈತರು ಹೇಳುವಂತೆ ರಾಗಿ ಮತ್ತು ಈರುಳ್ಳಿಗೆ ಮಳೆ ಬಿಡುವು ನೀಡಬೇಕಿತ್ತು. ಆದರೆ ಸ್ವಲ್ಪಮಟ್ಟಿಗೆ ತೊಡಕಾಗಿದೆ ಎನ್ನುತ್ತಾರೆ. ಈ ಮಳೆಗೆ ತಾಲೂಕಿನಲ್ಲಿ ಕೆಲವೆಡೆ ಮರಗಳು ಬಿದ್ದಿದ್ದು, ಮನೆಗಳು ಕುಸಿದಿವೆ. ತಾಲೂಕಿನ ಗೋ ಕಟ್ಟೆಗಳು, ಸಣ್ಣ ಮತ್ತು ದೊಡ್ಡ ಕೆರೆಗಳಿಗೂ ಸ್ವಲ್ಪ ಮಟ್ಟಿಗೆ ನೀರು ಬರುತ್ತಿದೆ. ಮಲೆನಾಡಿನಲ್ಲಿ ಚೆನ್ನಾಗಿ ಮಳೆಯಾಗಿ ಜೀವನದಿ ಮದಗದಕೆರೆಗೆ ಒಳಹರಿವು ಹೆಚ್ಚಾಗಿದೆ.ಹೊನ್ನಮ್ಮನ ಹಳ್ಳದಿಂದ ಬರುವ ನೀರು ಕಡೂರು ತಾಲೂಕಿನ ಗಡಿ ಎಮ್ಮೇ ದೊಡ್ಡಿಯ ಹಳೆಕೋಟೆ ಸಿದ್ದರ ಹಳ್ಳಿ ಮೂಲಕ ಕೆರೆಗೆ ಬರುತ್ತಿದೆ. ಸುಮಾರು 65 ಅಡಿ ಇರುವ ಮದಗದಕೆರೆ ವಿಸ್ತಾರವಾಗಿದೆ. ಕಳೆದ 3 ವರ್ಷಗಳ ಹಿಂದೆ ಕೆರೆಯ ಮರಗಿಂಡಿ ಯಲ್ಲಿ ಬಸಿ ನೀರು ಹಾಗು ಕೆರೆ ಕೆಳಗಿನ ತಡೆಗೋಡೆಯಲ್ಲಿ ನೀರು ಪೋಲಾಗುತ್ತಿದ್ದ ಕಾರಣ ಕೆರೆ ದುರಸ್ತಿ ಮಾಡಲಾಗಿತ್ತು.

ಮದಗದ ಕೆರೆ ತುಂಬಿದಲ್ಲಿ ತಾಲೂಕಿನ ಸುಮಾರು 32 ಸರಣಿ ಕೆರೆಗಳಿಗೆ ಅಂದರೆ, ಚಿಕ್ಕಂಗಳ ಕೆರೆ ಸೇರಿದಂತೆ ತಾಲೂಕಿನ ಪ್ರಮುಖ ಕೆರೆಗಳಿಗೆ ನೀರು ಹರಿಯಲಿದೆ. ಕೆರೆ ತುಂಬಿ ಕೋಡಿ ಬೀಳಲು ಸುಮಾರು ಐದು ಅಡಿ ನೀರು ಮಾತ್ರ ಬರಬೇಕಿದೆ. ಮಂಗಳವಾರ ಅಥವಾ ಶುಕ್ರವಾರ ಸಾಂಪ್ರದಾಯಿಕವಾಗಿ ಕೋಡಿ ಬೀಳುತ್ತದೆ ಎಂಬ ನಂಬಿಕೆ ಇದೆ.ಮಳೆ ಕಾರಣ ರೈತರ ಕೃಷಿ ಚಟುವಟಿಕೆಗಳಿಗೂ ಚಾಲನೆ ಸಿಕ್ಕಿದೆ ಮತ್ತು ತಾಲೂಕಿನ ಕೆರೆಕಟ್ಟೆಗಳು ಅಲ್ಲಲ್ಲಿ ತುಂಬುತ್ತಿವೆ. ಜೊತೆ ಯಲ್ಲಿ ಎಣ್ಣೆ ಕಾಳಿನ ಬೆಳೆಗಳ ಬಿತ್ತನೆ ಕಾರ್ಯವೂ ಆರಂಭವಾಗಿದೆ.-- ಬಾಕ್ಸ್ ಸುದ್ದಿಗೆ---

ನಿರಂತರ ಮಳೆ ಹಿನ್ನಲೆ ಮೊದಲ ಬಾರಿಗೆ ಕಡೂರು ತಾಲೂಕಿನ ಸರಕಾರಿ ಶಾಲೆಗಳಿಗೆ ಗುರುವಾರ ಒಂದು ದಿನ ರಜೆ ಘೋಷಣೆ ಮಾಡಲಾಗಿತ್ತು. ಮಲೆನಾಡು ಪ್ರದೇಶಗಳಲ್ಲಿ ಮಳೆ ಪ್ರಮಾಣ ಹೆಚ್ಚಾದಲ್ಲಿ ಶಾಲೆಗಳಿಗೆ ರಜೆ ನೀಡುವುದು ಸಾಮಾನ್ಯ. ಆದರೆ ಈ ಬಾರಿ ಬರ ಪೀಡಿತ ತಾಲೂಕಿನಲ್ಲಿ ಹೆಚ್ಚಿನ ಮಳೆಯಿಂದ ರಜೆ ಘೋಷಣೆ ಮಾಡಲಾಗಿದೆ.

--

ವಿದ್ಯುತ್ ಸಂಪರ್ಕ ಅಸ್ತವ್ಯಸ್ತ

ಕನ್ನಡಪ್ರಭ ವಾರ್ತೆ: ಕಡೂರುತಾಲೂಕಿನಲ್ಲಿ ಬರುತ್ತಿರುವ ನಿರಂತರ ಸೋನೆ ಮಳೆ ಹಾಗೂ ಗಾಳಿ ವೇಗಕ್ಕೆ ಮರಗಳು ಬಿದ್ದು ಕಡೂರು ಸೇರಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಯಿತು.

ಪಟ್ಟಣದ ಹರುವನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದ ದೊಡ್ಡ ಆಲದ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದು ತಂಗಲಿ ಎಂವಿಎಸ್ಎಸ್ ಘಟಕ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಂಡಿತು. ಮರ ತೆರವುಗೊಳಿಸಲು ಅಡ್ಡಿಯಾಗಿ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೂ ವಿದ್ಯುತ್ ಬಾರದೆ ಮಲ್ಲೇಶ್ವರ, ಮಚ್ಚೇರಿ, ತಂಗಲಿ, ಮಲ್ಲಿದೇವಿಹಳ್ಳಿ ಸೇರಿ ಸುಮಾರು 35 ಗ್ರಾಮಗಳಲ್ಲಿ ತೊಂದರೆಯುಂಟಾಯಿತು.

ಗುರುವಾರ ಬೆಳಿಗ್ಗೆ ಕ್ರೇನ್ ಸಹಾಯದಿಂದ ಮರ ತೆರವಿಗೆ ಮೆಸ್ಕಾಂ ಗ್ರಾಮಾಂತರ ಜೆಇ ಆರ್.ಎಸ್.ಬಸವರಾಜು ಮತ್ತು ಸಿಬ್ಬಂದಿ ಶ್ರಮಿಸಿದರು.

ಪಟ್ಟಣದ ಉಳುಕಿನಕಲ್ಲು ಬಳಿ ಬುಧವಾರ ಮಧ್ಯಾನ್ಹ ಹೆದ್ದಾರಿ ಪಕ್ಕದ ಆಲದ ಮರಕ್ಕೆ ವಿದ್ಯುತ್ ಸ್ಪರ್ಶಿಸಿದ್ದರಿಂದ ಬೆಂಕಿ ಹೊತ್ತಿಕೊಂಡ ಘಟನೆ ನಡೆಯಿತು. ಕೂಡಲೇ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಪೊಲೀಸರು ಹೆದ್ದಾರಿ ಬಂದ್ ಮಾಡಿದರು. ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಿದರು. ಗುರುವಾರ ವಲಯ ಅರಣ್ಯಾಧಿಕಾರಿ ರಜಾಕ್ ಸಾಬ್ ನಡಾಫ್, ಮೆಸ್ಕಾಂ ಜೆಇ ಎಚ್. ಚಂದ್ರಪ್ಪ ಹಾಗೂ ಸಿಬ್ಬಂದಿ ಶ್ರಮಿಸಿ ಮರ ತೆರವುಗೊಳಿಸಿದರು.

ಬುಧವಾರ ಸಂಜೆಯಿಂದ ಸ್ಥಗಿತವಾದ ವಿದ್ಯುತ್ ಗುರುವಾರ ಮಧ್ಯಾಹ್ನವಾದರೂ ಬಾರದೆ ಮೊಬೈಲ್ ನೆಟ್ವರ್ಕ್ ಸಹ ಸ್ಥಗಿತವಾಗಿ ಕಚೇರಿಗಳಲ್ಲಿ ದೈನಂದಿನ ಕಾರ್ಯಗಳಿಗೆ ತೊಡಕುಂಟಾಯಿತು. ಕೆಲ ಸಮಯ ಕಾರ್ಯ ನಿರ್ವಹಿಸಿದ ಕಂಪ್ಯೂಟರ್ ಗಳು ನಂತರ ಸ್ಥಗಿತಗೊಂಡವು. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಯಾವುದೇ ನೊಂದಣಿ ಸಾಧ್ಯ ವಾಗದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.25ಕಕೆಡಿಯು2.ಬಿದ್ದ ಆಲದ ಮರವನ್ನು ತೆರವುಗೊಳಿಸುತ್ತಿರುವುದು. 25ಕೆಕೆಡಿಯು2ಎ. ವಿದ್ಯುತ್ ತಂತಿ ತಗುಲಿ ಮರದ ಪೊಟರೆಯಲ್ಲಿ ಬೆಂಕಿ ಹತ್ತಿರುವುದು..

25ಕಕೆಡಿಯು1. ಮದಗದ ಕೆರೆ .