ಡಾ.ಕೆ. ಸುಧಾಕರ್ ಫೌಂಡೇಷನ್, ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೆಂಪೇಗೌಡ ಜಯಂತಿ, ನನ್ನ ಜನ್ಮ ದಿನ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಉತ್ತೇಜಿಸುವ ಒಂದು ಭಾಗವಾಗಿ ಡಾ.ಕೆ. ಸುಧಾಕರ್ ಫೌಂಡೇಷನ್ ಮತ್ತು ಶ್ರೀ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಜೂನ್ 27 ರ ಸಂಜೆ 4 ಗಂಟೆಗೆ ಕೆಂಪೇಗೌಡ ಜಯಂತಿ ಮತ್ತು ನನ್ನ ಜನ್ಮ ದಿನದ ಅಂಗವಾಗಿ ಗುಣಾತ್ಮಕ ವ್ಯಾಸಂಗಕ್ಕೆ ನೆರವಾಗಲು ಪ್ರತಿ ವಿದ್ಯಾರ್ಥಿಗೆ ರು. 5000 ಪ್ರೋತ್ಸಾಹಧನ ನೀಡಲು ಉದ್ದೇಶಿಸಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಸಂಸದರ ಗೃಹ ಕಚೇರಿಯಲ್ಲಿ ನಗರದ ಸಂಸದರ ಗೃಹಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕ್ಯೂಆರ್ ಕೋಡ್‌ನ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ದ್ವಿತೀಯ ಪಿಯು ಓದುತ್ತಿರುವ ಹಾಗೂ ಉತ್ತೀರ್ಣರಾಗಿರುವ ಮತ್ತು ಪದವಿ ವ್ಯಾಸಂಗ ಮಾಡುತ್ತಿರುವ, ಬಿ.ಎಡ್, ಬಿ.ಪಿ.ಎಡ್, ಸ್ನಾತ್ತಕೋತ್ತರ ಪದವಿ, ಕಾನೂನು ಶಿಕ್ಷಣ, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಕ್ಷೇತ್ರದ ವಿದ್ಯಾರ್ಥಿಗಳು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ತಮ್ಮ ವಿವರಗಳೊಂದಿಗೆ ನಿಗದಿತ ನಮೂನೆಯಲ್ಲಿ ಜೂನ್ 20ರೊಳಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಈಗಾಗಲೇ 9 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಇಂದು ನಾನು ನಿಮ್ಮ ಮುಂದೆ ಸಂಸದನಾಗಿ, ಮಾಜಿ ಸಚಿವನಾಗಿ ಅಥವಾ ರಾಜಕಾರಣಿಯಾಗಿ ನಿಂತಿಲ್ಲ. ಈ ಮಣ್ಣಿನ ಮಗನಾಗಿ, ಚಿಕ್ಕಬಳ್ಳಾಪುರದ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದದಿಂದ ಬೆಳೆದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಿಂತಿದ್ದೇನೆ. ಚುನಾವಣೆ ಬಂದಾಗ ಮಾತ್ರ ಜನರ ಮನೆ ಬಾಗಿಲು ತಟ್ಟುವವರನ್ನು ನಾವು ನೋಡಿದ್ದೇವೆ. ಆದರೆ ನನ್ನ ಬದುಕಿನ ಪಯಣ ಹಾಗಲ್ಲ. ಪದವಿಗೂ ಮುನ್ನವೇ ಆರಂಭವಾದ ಸೇವೆ ಇದು. ಜನರ ಮೇಲಿನ ಒಲವಿಗಾಗಿ ವೋಟಿಗಾಗಿ ಅಲ್ಲ, ಮತಕ್ಕಾಗಿ ಅಲ್ಲ ಜನರ ಮೇಲಿನ ಬದ್ಧತೆಗಾಗಿ, ನನ್ನ ಆತ್ಮಸಾಕ್ಷಿಯ ಸಂತೃಪ್ತಿಗಾಗಿ ಎಂದು ತಿಳಿಸಿದರು.


ನಿರಂತರ ಸೇವೆ:

2007ರಿಂದ 2016ರವರೆಗೆ ನಿರಂತರವಾಗಿ 9 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್‌ ವಿತರಣೆ ಮಾಡಿ ಶಿಕ್ಷಣಕ್ಕೆ ನೆರವಾಗಲಾಯಿತು. ಕ್ಷೇತ್ರದಾದ್ಯಂತ ಅಸಹಾಯಕ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಿ ಸ್ವಾವಲಂಬಿ ಬದುಕಿಗೆ ಆಸರೆಯಾಗಲಾಯಿತು. ಪ್ರತಿ ವರ್ಷ ಸರ್ಕಾರಿ ಶಾಲೆ ಮತ್ತು ಕಾಲೇಜುಗಳ 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳವರೆಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು.ಮಹಿಳಾ ಸಬಲೀಕರಣದ ಮಹಾ ಅಭಿಯಾನ:

ಕ್ಷೇತ್ರದಾದ್ಯಂತ 3,000 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ರಚಿಸಿ, ಪ್ರತಿ ಸಂಘಕ್ಕೆರು. 5,000 ಸಹಾಯಧನ ನೀಡಲಾಯಿತು. 2016ರಿಂದ 2023ರವರೆಗೆ 300 ಕೋಟಿಗೂ ಅಧಿಕ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಯಿತು ಎಂದರು.

ಕೋವಿಡ್ ಸಮಯದ ಮಾನವೀಯ ಸೇವೆ:

ಕೋವಿಡ್ ಸಂದರ್ಭದಲ್ಲಿ ಇಡೀ ಜಗತ್ತೇ ಮುಚ್ಚಿಹೋಗಿದ್ದಾಗ ಜನರ ಜೊತೆ ನಿಂತದ್ದು ಯಾವುದೇ ವೋಟಿಗಾಗಿ ಅಲ್ಲ. ಅದು ಕೇವಲ ಮಾನವೀಯತೆಗಾಗಿ. ಕೋವಿಡ್ ಅವಧಿಯಲ್ಲಿ ಎರಡು ವರ್ಷಗಳ ಕಾಲ 75 ಸಾವಿರ ಮನೆಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಲಾಯಿತು ಎಂದರು.

ಆರೋಗ್ಯ ಕ್ಷೇತ್ರದಲ್ಲಿ ದಾಖಲೆ:

ಕ್ಷೇತ್ರದ ಇತಿಹಾಸದಲ್ಲೇ ಅತಿ ದೊಡ್ಡ ಆರೋಗ್ಯ ಮೇಳ ಆಯೋಜಿಸಿ ಗಿನ್ನಿಸ್ ದಾಖಲೆ ನಿರ್ಮಿಸಲಾಯಿತು. 2000ಕ್ಕೂ ಹೆಚ್ಚು ರೋಗಿಗಳಿಗೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಶಿಫಾರಸು ಮತ್ತು ನೆರವು ನೀಡಲಾಯಿತು. 10 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ಕಣ್ಣಿನ ಮತ್ತು ದಂತ ಚಿಕಿತ್ಸಾ ಸೇವೆ ಒದಗಿಸಲಾಯಿತು. ಶಾಂತ ಮೊಬೈಲ್ ಕ್ಲಿನಿಕ್ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸಲಾಯಿತು.

ಕುಡಿಯುವ ನೀರು ಮತ್ತು ಮೂಲಸೌಕರ್ಯ:

ಕ್ಷೇತ್ರದಾದ್ಯಂತ 60ಕ್ಕೂ ಹೆಚ್ಚು ಅಮೃತಗಂಗೆ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಯಿತು.ಇವು ಇಂದಿಗೂ ಸಾವಿರಾರು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿವೆ ಎಂದರು.

ಸಾಂಪ್ರದಾಯಿಕ ವೃತ್ತಿಗಳಿಗೆ ಬೆಂಬಲ:

ಸವಿತಾ ಸಮಾಜದ 400 ಕುಟುಂಬಗಳಿಗೆ ಆಧುನಿಕ ಸೆಲೂನ್ ಕಿಟ್‌ಗಳನ್ನು ವಿತರಿಸಲಾಗಿದೆ. ಮಡಿವಾಳ ಸಮುದಾಯಕ್ಕೆ 1,000ಕ್ಕೂ ಹೆಚ್ಚು ಐರನ್ ಬಾಕ್ಸ್‌ಗಳನ್ನು ವಿತರಿಸಲಾಗಿದೆ. ಆಟೋ ಚಾಲಕರಿಗಾಗಿ ಆಟೋ ನಿಲ್ದಾಣಗಳನ್ನು ಸ್ಥಾಪಿಸಿ, ಪ್ರತಿ ಚಾಲಕನಿಗೆ ಮೂರು ಟೈರ್‌ಗಳನ್ನು ಉಚಿತವಾಗಿ ನೀಡಲಾಗಿದೆ ಎಂದರು.

ಕ್ರೀಡೆ, ಸಂಸ್ಕೃತಿ ಮತ್ತು ಧಾರ್ಮಿಕ ಸೇವೆ:

ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಗ್ರಾಮ, ಪಂಚಾಯಿತಿ, ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಿ, ಕ್ರಿಕೆಟ್‌ ಮತ್ತು ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಗಿದೆ. ಕ್ಷೇತ್ರದ ಎಲ್ಲಾ ಗ್ರಾಮಗಳ ದೇವಾಲಯಗಳ ನಿರ್ಮಾಣ ಮತ್ತು ಜೀರ್ಣೋದ್ಧಾರಕ್ಕೆ ನೆರವು ನೀಡಲಾಗಿದೆ ಎಂದರು.

ನನ್ನ ಜೀವನದಲ್ಲಿ ಶಾಸಕ ಸ್ಥಾನ ಬಂದಿತು. ಸಚಿವ ಸ್ಥಾನ ಬಂದಿತು. ಇಂದು ಸಂಸದನಾಗಿದ್ದೇನೆ. ನಾಳೆ ಯಾವ ಹುದ್ದೆಯೂ ಇಲ್ಲದಿರಬಹುದು. ಆದರೆ ಒಂದು ವಿಷಯ ಮಾತ್ರ ಎಂದಿಗೂ ಬದಲಾಗುವುದಿಲ್ಲ. ಚಿಕ್ಕಬಳ್ಳಾಪುರದ ಜನರ ಮೇಲಿನ ನನ್ನ ಪ್ರೀತಿ. ಈ ಮಣ್ಣಿನ ಮೇಲಿನ ನನ್ನ ಋಣ. ಜನಸೇವೆಯ ಮೇಲಿನ ನನ್ನ ಬದ್ಧತೆ. ಚಿಕ್ಕಬಳ್ಳಾಪುರ ನನ್ನ ಕ್ಷೇತ್ರ ಮಾತ್ರವಲ್ಲ. ಅದು ನನ್ನ ಕುಟುಂಬ ಎಂದು ಭಾವುಕರಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ. ಮಾಜಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಚಿಮುಲ್ ನಿರ್ಧೇಶಕ ಕೆ.ವಿ.ನಾಗರಾಜ್,ಕೆ ವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಜೈ ಫೌಂಢೇಶನ್ ಅಧ್ಯಕ್ಷ ಡಾ.ಜಯಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ ಮುಖಂಡರಾದ ರಾಮಸ್ವಾಮಿ, ಶಿವಕುಮಾರ್, ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಅರುಣ್, ಪಾಪುತೇಜ, ,ಯತೀಶ್, ಕೃಷ್ಣಾರೆಡ್ಡಿ ಇದ್ದರು.

ಸಿಕೆಬಿ-1 ಸುದ್ದಿಗೊಷ್ಠಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಕ್ಯೂಆರ್ ಕೋಡ್ ನ ಪೋಸ್ಟರ್ ಬಿಡುಗಡೆ ಮಾಡಿದರು.