ರೈತರ ಸಮಸ್ಯೆಗಳಿಗೆ ನಿರಂತರ ಹೋರಾಟ ಅನಿವಾರ್ಯ: ಸುರೇಶ್ ಚಕ್ರವರ್ತಿ

| Published : Oct 31 2025, 03:15 AM IST

ರೈತರ ಸಮಸ್ಯೆಗಳಿಗೆ ನಿರಂತರ ಹೋರಾಟ ಅನಿವಾರ್ಯ: ಸುರೇಶ್ ಚಕ್ರವರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಸಮಸ್ಯೆಗಳ ಬಗ್ಗೆ ಹಲವಷ್ಟು ಬಾರಿ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಸುರೇಶ್‌ ಚಕ್ರವರ್ತಿ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ರೈತರ ಸಮಸ್ಯೆಗಳ ಬಗ್ಗೆ ಹಲವಷ್ಟು ಬಾರಿ ಸರ್ಕಾರದ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಹೇಳಿದರು.ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ಹೋರಾಟ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.ರೈತರು ಎದುರಿಸುತ್ತಿರುವ ಸಿ ಮತ್ತು ಡಿ, ಸೆಕ್ಷನ್ 4, ಡೀಮ್ಡ್ ಫಾರೆಸ್ಟ್ ಸಮಸ್ಯೆಗಳ ಬಗ್ಗೆ ಈಗಾಗಲೇ ಸಂಬಂಧಿಸಿದ ಜನಪ್ರತಿನಿಧಿಗಳು, ಅರಣ್ಯ, ಕಂದಾಯ ಇಲಾಖೆಯ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಹೋರಾಟದ ಸ್ವರೂಪ ಬದಲಿಸಿ, ನಿರಂತರ ಪ್ರತಿಭಟನೆ ನಡೆಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ನ. 3ರಂದು ಸೋಮವಾರಪೇಟೆಯ ಜೇಸೀ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಿ, ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಮತ್ತೊಮ್ಮೆ ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಯಿತು. ಇದರೊಂದಿಗೆ ಚಳಿಗಾಲದ ಅಧಿವೇಶನ ಸಂದರ್ಭ ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸಿ, ಸರ್ಕಾರದ ವಿರುದ್ಧ ಹೋರಾಟ ನಡೆಸಿ, ಅಧಿವೇಶನದ ಗಮನ ಸೆಳೆಯಲು ತೀರ್ಮಾನಿಸಲಾಯಿತು.ಡೀಮ್ಡ್ ಪಾರೆಸ್ಟ್ ಎಂದು ಅರಣ್ಯಾಧಿಕಾರಿಗಳು ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆಗಳನ್ನು ನೀಡುತ್ತಿಲ್ಲ. ಅರಣ್ಯ ಇಲಾಖೆಯವರು ಮುಕ್ಕೋಡ್ಲು ಗ್ರಾಮದ ಕಾಳಚಂಡ ನಾಣಿಯಪ್ಪ ಅವರ ಜಾಗಕ್ಕೆ ಅತಿಕ್ರಮಣ ಮಾಡಿ ಗಿಡಗಳನ್ನು ಕಡಿದಿದ್ದಾರೆ. ಇದೀಗ ಅರಣ್ಯ ಇಲಾಖೆಯಿಂದ ಸಂತ್ರಸ್ಥ ನಾಣಿಯಪ್ಪ ಅವರಿಗೆ ನೋಟೀಸ್ ಕೊಟ್ಟಿದ್ದಾರೆ. ಇಂತಹ ಉಪದ್ರವಗಳ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ಈವರೆಗೆ ಆಡಳಿತ ಮಾಡಿದ ಎಲ್ಲಾ ಪಕ್ಷದವರೂ ರೈತರಿಗೆ ಮೋಸ ಮಾಡಿದವರೇ ಆಗಿದ್ದಾರೆ. ಎಲ್ಲಾ ಪಕ್ಷದ ಶಾಸಕರು ವಿಧಾನ ಸೌಧದಲ್ಲಿ ಒಂದಾಗುತ್ತಾರೆ. ಹೋರಾಟ ಎಂದು ಬಂದರೆ ರಾಜಕೀಯ ಬಿಟ್ಟು ಬೀದಿಗೆ ಇಳಿಯಬೇಕು ಎಂದರು. ಇದೀಗ ಸಿ ಮತ್ತು ಡಿ ಜಾಗದ ಕೇಸ್ ಸುಪ್ರೀಂ ಕೋರ್ಟ್ ನಲ್ಲಿದೆ ಎಂದು ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ವಿಧಾನ ಸೌಧದಲ್ಲಿ ಯಾರೂ ರೈತರ ಪರ ಮಾತಾಡಿಲ್ಲ ಎಂದರು.ಸಮಿತಿಯ ಸಂಚಾಲಕ ದೀಪಕ್ ಮಾತನಾಡಿ, ಅಧಿಕಾರಿಗಳು ಅವರಿಗೆ ಬೇಕಾದ ದಾಖಲೆಗಳನ್ನು ಮಾಡಿಟ್ಟುಕೊಂಡಿದ್ದಾರೆ. ಹೋರಾಟದ ಮೂಲಕವೇ ಸರ್ಕಾರದ ಗಮನ ಸೆಳೆಯಬೇಕು. ಸದ್ಯದ ಮಟ್ಟಿಗೆ ನ್ಯಾಯಾಲಯದಲ್ಲಿ ಹೋರಾಟ ಮಾಡದೇ ಸಂಘಟನಾತ್ಮಕವಾಗಿ ಹೋರಾಟ ಮಾಡಿ ಸರ್ಕಾರದ ಮಟ್ಟದಲ್ಲಿ ಅಧಿಕಾರಿಗಳಿಗೆ ತಿಳುವಳಿಕೆ ನೀಡಬೇಕು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬೆಳೆಗಾರರ ಸಂಘದ ಅಧ್ಯಕ್ಷ ಎಡದಂಟೆ ಲವ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ರೈತ ಹೋರಾಟ ಸಮಿತಿ ಕಾರ್ಯದರ್ಶಿ ಕೂತಿ ದಿವಾಕರ್ ಸೇರಿದಂತೆ 50ಕ್ಕೂ ಅಧಿಕ ಗ್ರಾಮಗಳ ಗ್ರಾಮ ಸಮಿತಿ ಮುಖಂಡರು ಇದ್ದರು.