ಸಾರಾಂಶ
ಗದಗ: ಉತ್ತರ ಕರ್ನಾಟಕ ಜನರ ಜೀವನಾಡಿಯಾಗಿರುವ ಕಳಸಾ ಬಂಡೂರಿ, ಮಹದಾಯಿ ಅನುಷ್ಠಾನವಾಗುವವರೆಗೂ ಕರವೇ ನಿರಂತರ ಹೋರಾಟ ಮುಂದುವರಿಸಲಿದೆ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಯಾವುದೇ ಹೋರಾಟ ಕೈಗೆತ್ತಿಕೊಂಡರು ಅದಕ್ಕೊಂದು ತಾರ್ಕಿಕ ಅಂತ್ಯ ನೀಡುವವರೆಗೆ ಹಿಂದಡಿ ಇಟ್ಟಿಲ್ಲ ಈ ವಿಷಯದಲ್ಲಿಯೂ ಯೋಜನೆ ಅನುಷ್ಠಾನ ಆಗುವವರೆಗೂ ನಿದ್ರಿಸುವುದಿಲ್ಲ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಸಂಜೆ ಗದಗ ನಗರದಲ್ಲಿ ಮಹದಾಯಿ, ಕಳಸಾ ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ನರಗುಂದದಿಂದ ಗದಗ ನಗರದವರೆಗೆ ಸಾವಿರಾರು ಕಾರ್ಯಕರ್ತರು ಹಾಗೂ ರೈತ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.ನಾಡಿನ ನೆಲ ಜಲ ಭಾಷೆಗೆ ಸಂಬಂಧಿಸಿದಂತೆ ನಮ್ಮ ವೇದಿಕೆ ವತಿಯಿಂದ ಅನೇಕ ಹೋರಾಟ ನಡೆಸಲಾಗಿದೆ. ಈ ವೇಳೆ ಪೊಲೀಸರ ಲಾಠಿ ಏಟು ತಿಂದಿದ್ದೇವೆ, ಯಾವುದಕ್ಕೂ ಜಗ್ಗದೇ ಮುಂದೆ ನಡೆದಿದ್ದೇವೆ. ಅನೇಕ ಸಂದರ್ಭದಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಅದೇ ರೀತಿ, ಕಳಸಾ ಬಂಡೂರಿ, ಮಹದಾಯಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಪಾದಯಾತ್ರೆ ನಡೆಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ಕೂಡಲೇ ಗಮನ ನೀಡಬೇಕು ಇಲ್ಲವಾದರೆ ಮುಂದಿನ ಹೋರಾಟದ ರೂಪುರೇಷೆಗಳೇ ಬೇರೆ ಸ್ವರೂಪ ಪಡೆದುಕೊಳ್ಳಲಿವೆ. ಕಳಸಾ ಬಂಡೂರಿ ಜಾರಿಗೆ ಅನೇಕ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ.ಆದರೂ, ಯೋಜನೆ ನನೆಗುದಿಗೆ ಬಿದ್ದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಇವರತ್ತ ಅವರು, ಅವರತ್ತ ಇವರು ಬೆರಳು ತೋರಿಸುತ್ತಾ ಬಂದಿದ್ದಾರೆಯೇ ಹೊರತು, ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ನಡೆಸಿಲ್ಲ ಎಂದು ಕಿಡಿಕಾರಿದರು.
ಯೋಜನೆ ಅನುಷ್ಠಾನ ವಿಷಯವಾಗಿ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿ ಹೆಚ್ಚಿನ ಗಮನ ಹರಿಸುವಂತೆ ವಿನಂತಿಸಲಾಗಿದೆ. ಒಂದು ತಿಂಗಳೊಳಗಾಗಿ ಪ್ರಗತಿ ಕಾಣದಿದ್ದರೆ ಸಂಸದರು, ಕೇಂದ್ರ ಸಚಿವರ ಮನೆ ಮುಂದೆ ಧರಣಿ ಕೂರಲಾಗುವುದು. ಉತ್ತರ ಕರ್ನಾಟಕ ಸಹ್ಯಾದ್ರಿ ಎನಿಸಿರುವ ಕಪ್ಪತ್ತಗುಡ್ಡದಲ್ಲಿನ ಔಷಧೀಯ ಸಸ್ಯಗಳ ಸಂರಕ್ಷಣೆಗೆ ಕ್ರಮವಹಿಸಬೇಕು. ಕಪ್ಪತ್ತಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಇಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನರಗುಂದದಿಂದ ಪ್ರಾರಂಭವಾಗಿರುವ ಪಾದಯಾತ್ರೆ ಶಲವಡಿ ಮಾರ್ಗವಾಗಿ ಶುಕ್ರವಾರ ಗದಗ ನಗರಕ್ಕೆ ಬಂದಿದ್ದು, ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು, ರೈತ ಮುಖಂಡರು ಭಾಗವಹಿಸಿದ್ದರು. ಪಾದಯಾತ್ರೆ ಮಾಡುವ ವೇಳೆ ಅನೇಕ ಕಡೆಗಳಲ್ಲಿ ಜನರು ಬಯಲು ಶೌಚಕ್ಕೆ ತೆರಳುತ್ತಿದ್ದುದನ್ನು ನೋಡಿ ಬೇಸರವಾಯಿತು. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಕ್ರಮವಹಿಸಬೇಕು.