ಧಾರವಾಡ:

ಕಲಘಟಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ 17 ವಾರ್ಡ್‍ಗಳಿಗೆ 24/7 ಕುಡಿಯುವ ನೀರು ಸರಬರಾಜು ಮಾಡುವ ನಿರಂತರ ನೀರು ಯೋಜನೆ ಜೂ. 15ರಿಂದ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಬೇಸಿಗೆಯಲ್ಲಿ ಕುಡಿಯುವ ನೀರು, ಜಾನುವಾರು ಮೇವು ಹಾಗೂ ಅಕಾಲಿಕ ಮಳೆಯಿಂದ ಆಗಿರುವ ಹಾನಿ ಮತ್ತು ಪರಿಹಾರ ಕೈಗೊಂಡಿರುವ ಕುರಿತು ಪರಿಶೀಲಿಸಿ ಮಾತನಾಡಿದರು.

ಕಲಘಟಗಿ ಪಪಂ ವ್ಯಾಪ್ತಿಯಲ್ಲಿ 19 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ನಿತ್ಯ 3 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುತ್ತಿದೆ. 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ₹ 35.38 ಕೋಟಿ ವೆಚ್ಚದ ನಿರಂತರ ನೀರು ಯೋಜನೆ ಕಾಮಗಾರಿಯು ಮೇ 18, 2024ರಂದು ಆರಂಭವಾಗಿದ್ದು, ಏ. 24, 2026ಕ್ಕೆ ಮುಕ್ತಾಯವಾಗುವ ಒಪ್ಪಂದವಾಗಿತ್ತು. ಗುತ್ತಿಗೆದಾರ ವಿಸ್ತರಣಾ ಅವಧಿ ಪಡೆದು, ಪ್ರಸ್ತಕ ತಿಂಗಳು ಕಾಮಗಾರಿ ಮುಕ್ತಾಯಗೊಳ್ಳುತ್ತಿದ್ದು ಜೂ. 15ರಿಂದ ಆರಂಭಿಸಲಾಗುವುದು ಎಂದರು.

ಅಣ್ಣಿಗೇರಿ, ನವಲಗುಂದ, ಕುಂದಗೋಳ ಪಟ್ಟಣದಲ್ಲೂ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, 24/7 ನೀರು ಪೂರೈಸಲಾಗುವುದು ಎಂದ ಅವರು, ವರದಿ ಪ್ರಕಾಣ ಜಿಲ್ಲೆಯ ಎಲ್ಲ ಪಟ್ಟಣಗಳ ಬಹುತೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕೆಲವೆಡೆ ತಾಂತ್ರಿಕ ಕಾರಣಗಳಿದ್ದು, ಅವುಗಳನ್ನು ಪರಿಹರಿಸಿ ಸುಗಮ ಮತ್ತು ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಸಚಿವರು ಸೂಚಿಸಿದರು.


ವ್ಯವಸ್ಥೆ ಸುಧಾರಣೆ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸುಧಾರಣೆಗೊಂಡಿದೆ. ಇಂತಹ ಬೇಸಿಗೆ ಸಮಯದಲ್ಲಿಯೂ ಪಾಲಿಕೆ ವ್ಯಾಪ್ತಿಯಲ್ಲಿ 4ರಿಂದ 5 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಹಿಂದೆ 8, 10, 15 ದಿನಗಳಿಗೆ ಇದ್ದ ಸರಬರಾಜು ವ್ಯವಸ್ಥೆ ಈಗ 4 ದಿನಕ್ಕೆ ಬಂದಿದೆ. ಆದಷ್ಟು ಶೀಘ್ರ ಅವಳಿ ನಗರದಲ್ಲಿ ನಿರಂತರ ನೀರು ಯೋಜನೆ ಆರಂಭವಾಗಲಿದೆ ಎಂದರು.ಬೀಜ-ಗೊಬ್ಬರು ದಾಸ್ತಾನು ಇರಲಿ:

ಮುಂಗಾರು ಹಂಗಾಮು ಆಗಮಿಸುತ್ತಿದ್ದು ಬೇಡಿಕೆ ತಕ್ಕಷ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಅವಳಿ ನಗರದ ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳ ಉನ್ನತೀಕರಣಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದರು.

16 ಗ್ರಾಮಕ್ಕೆ ಕೊಳವೆಬಾವಿ ನೀರು:

ಧಾರವಾಡ, ಹುಬ್ಬಳ್ಳಿ ಮತ್ತು ಕಲಘಟಗಿ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ, ಮುಗದ, ಮನಗುಂಡಿ, ಲೋಕೂರು ಮತ್ತು ಹುಬ್ಬಳ್ಳಿ ತಾಲೂಕಿನ ನೂಲ್ವಿ, ಅದರಗುಂಚಿ, ಕುರ್ಡಿಕೆರೆ, ಛಬ್ಬಿ ಹಾಗೂ ಕಲಘಟಗಿ ತಾಲೂಕಿನ ನೆಲ್ಲಹರವಿ ತಾಂಡ, ಬಿ. ಹುಲಿಕಟ್ಟಿ, ದ್ಯಾಮನಕೊಂಡ, ಮುಕ್ಕಲ, ಹಿರೇ ಹುನಸಿಕಟ್ಟಿ, ಕುಡಲಗಿ ಗ್ರಾಮಗಳು ಸೇರಿದಂತೆ ಒಟ್ಟು 16 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಎಡಿಸಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.