ಹಲವಾರು ವಾರ್ಡ್​ಗಳಿಗೆ ನಿರಂತರ ನೀರು ಪೂರೈಕೆಗಾಗಿ ಪೈಪ್​ಗಳನ್ನು ಅಳವಡಿಸಲಾಗಿದ್ದರೂ, ಅಲ್ಲಿ 3-4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈ ಎಲ್ಲ ವಾರ್ಡ್​ಗಳಿಗೆ ಮಾರ್ಚ್​ನಿಂದ ನಿರಂತರ ನೀರು ಪೂರೈಸಲಾಗುವುದು.

ಹುಬ್ಬಳ್ಳಿ:

ಮಾರ್ಚ್‌ನಿಂದ ಹು-ಧಾ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್​ಗಳಿಗೆ ನಿರಂತರ ನೀರು ಪೂರೈಸಲಾಗುವುದು ಎಂದು ಮೇಯರ್​ ಜ್ಯೋತಿ ಪಾಟೀಲ ಹೇಳಿದರು.

ಬುಧವಾರ ಮಹಾನಗರ ಪಾಲಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋನ್​ ಇನ್​ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕುರಿತು ಚರ್ಚಿಸಲು ಫೆ. 10ರಂದು ವಿಶೇಷ ಸಾಮಾನ್ಯ ಸಭೆ ಆಯೋಜಿಸಲಾಗಿದೆ ಎಂದರು.

ಹಲವಾರು ವಾರ್ಡ್​ಗಳಿಗೆ ನಿರಂತರ ನೀರು ಪೂರೈಕೆಗಾಗಿ ಪೈಪ್​ಗಳನ್ನು ಅಳವಡಿಸಲಾಗಿದ್ದರೂ, ಅಲ್ಲಿ 3-4 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಈ ಎಲ್ಲ ವಾರ್ಡ್​ಗಳಿಗೆ ಮಾರ್ಚ್​ನಿಂದ ನಿರಂತರ ನೀರು ಪೂರೈಸಲಾಗುವುದು. ಇನ್ನುಳಿದ ವಾರ್ಡ್​ಗಳಲ್ಲಿ ಪೈಪ್​ ಅಳವಡಿಕೆ ಕಾಮಗಾರಿ ನಡೆಯುತ್ತಿದೆ ಎಂದರು.

ಈಗಾಗಲೇ ಎಲ್​ ಆ್ಯಂಡ್​ ಟಿ ಕಂಪನಿ ಹುಬ್ಬಳ್ಳಿ-ಧಾರವಾಡದಲ್ಲಿ 24 ಒವರ್​ ಹೆಡ್​ ಟ್ಯಾಂಕ್​ಗಳನ್ನು ನಿರ್ಮಿಸುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಅಮ್ಮಿನಬಾವಿಯಿಂದ ಹುಬ್ಬಳ್ಳಿಗೆ ಪ್ರತ್ಯೇಕ ಪೈಪ್​ ಅಳವಡಿಕೆ ಕಾಮಗಾರಿ ಬಹುತೇಕ ರ್ಪೂಣಗೊಂಡಿದ್ದು, ರಾಯಾಪುರ ಬಳಿ 17.6 ಕಿಮೀ ವರೆಗಿನ ಅಲ್ಪಮಟ್ಟಿನ ಕಾಮಗಾರಿ ಬಾಕಿ ಇದೆ. ಅಮ್ಮಿನಬಾವಿಯಿಂದ 18 ಎಂಎಲ್​ಡಿ ನೀರು ನೇರವಾಗಿ ಧಾರವಾಡಕ್ಕೆ ಹಾಗೂ 25 ಎಂಎಲ್​ಡಿ ನೀರು ಹುಬ್ಬಳ್ಳಿಗೆ ಪೂರೈಕೆಯಾಗಲಿದೆ ಎಂದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ₹ 324 ಕೋಟಿ ನೀರಿನ ಕರ ಬಾಕಿ ಇದೆ. ಇದರಲ್ಲಿ ಗೃಹ ಬಳಕೆಯದ್ದೇ ₹170 ಕೋಟಿ ಬಾಕಿ ಇದೆ. ಈ ಎಲ್ಲ ಬಾಕಿ ಹಣ ಪಾವತಿಗೆ ಒನ್​ ಟೈಮ್​ ಸೆಟ್ಲಮೆಂಟ್​ (ಒಟಿಎಸ್​) ಯೋಜನೆ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಪಿಜಿ ಹಾಸ್ಟೆಲ್​, ಕೋಚಿಂಗ್​ ಸೆಂಟರ್​, 24/7 ಗ್ರಂಥಾಲಯಗಳಿಗೆ ಪೂರೈಕೆ ಮಾಡುವ ನೀರಿಗೆ ವಾಣಿಜ್ಯ ದರದಡಿ ಶುಲ್ಕ ಆಕರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ವಚ್ಛ ಸಂಡೆ ಯೋಜನೆ ಅಡಿ ಒಂದೊಂದು ವಾರ್ಡ್​ನಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲು ಈ ಹಿಂದೆಯೇ ನಿರ್ಧರಿಸಲಾಗಿತ್ತು. ಆದಷ್ಟು ಶೀಘ್ರ ಈ ಯೋಜನೆ ಜಾರಿಗೊಳಿಸಲಾಗುವುದು. ಎಲ್​ಇಡಿ ಬೀದಿ ದೀಪಗಳ ಪ್ರಾತ್ಯಕ ಅಳವಡಿಕೆ ನಡೆಯುತ್ತಿದೆ. ಯಾವ ಪ್ರದೇಶದಲ್ಲಿ ಎಷ್ಟು ವ್ಯಾಟ್​ನ ದೀಪ ಅಳವಡಿಸಬೇಕು ಎಂಬ ಪ್ರಯೋಗ ನಡೆಯುತ್ತಿದೆ. ಈ ಎಲ್ಲ ವಾರ್ಡ್​ಗಳಲ್ಲಿ ಎಲ್​ಇಡಿ ಬೀದಿದೀಪ ಅಳವಡಿಸಲಾಗುವುದು ಎಂದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ 25 ಕರೆಗಳು ಬಂದಿದ್ದು, 35 ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪ ಆಯುಕ್ತ ವಿಜಯಕುಮಾರ ಸೇರಿದಂತೆ ಇತರರು ಇದ್ದರು.