ಒಂದೇ ಸಂಸ್ಥೆಗೆ ಗುತ್ತಿಗೆ: ಕಾರ್ಮಿಕರ ಸಂಘ ಆಕ್ಷೇಪ

| Published : Feb 15 2024, 01:15 AM IST

ಸಾರಾಂಶ

ದಾವಣಗೆರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಹೊರ ಗುತ್ತಿಗೆ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಿ.ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ತೋಳಹುಣಸೆಯ ಶಿವಗಂಗೋತ್ರಿ ದಾವಣಗೆರೆ ವಿಶ್ವ ವಿದ್ಯಾನಿಲಯದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸುಮಾರು 200-250 ವಿವಿಧ ಹುದ್ದೆಗಳಿಗೆ ಟೆಂಡರ್ ಕರೆದಿದ್ದು, ಈ ಟೆಂಡರ್ ಪ್ರಕ್ರಿಯೆಯೇ ಪಾರದರ್ಶಕವಾಗಿಲ್ಲ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಹೊರ ಗುತ್ತಿಗೆ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಡಿ.ಹನುಮಂತಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ವಿವಿಯಲ್ಲಿ 2009ರಿಂದ ಇಲ್ಲಿವರೆಗೂ ಕೇವಲ ಒಂದೇ ಏಜೆನ್ಸಿಗೆ ನಿರಂತರವಾಗಿ ಟೆಂಡರ್ ನೀಡಲಾಗುತ್ತಿದ್ದು, ರಾಜ್ಯ ಸರ್ಕಾರದ ಆದೇಶಗಳನ್ನೆಲ್ಲಾ ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆಯನ್ನು ದಾವಿವಿ ಮಾಡಿಕೊಂಡು ಬಂದಿದೆ ಎಂದರು.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದ ಮೂಲ ಉದ್ದೇಶ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಸ್ಪರ್ಧಾತ್ಮಕವಾಗಿರಬೇಕು ಎಂಬುದಾಗಿದೆ. ಆದರೆ, ಈ ಮೂಲ ಉದ್ದೇಶವನ್ನೇ ದಾವಿವಿ ಉಲ್ಲಂಘಿಸುತ್ತಿದೆ. ಸುಮಾರು 200-250 ಸಿಬ್ಬಂದಿ ಸೇವೆ ಟೆಂಡರ್‌ನಲ್ಲಿ ಭಾಗವಹಿಸಲು ಫಾರಂ-ಸಿ ಕಾರ್ಮಿಕ ಇಲಾಖೆ ನೋಂದಣಿಯಲ್ಲಿ ಕನಿಷ್ಟ 2ಸಾವಿರ ಸಿಬ್ಬಂದಿ ಸೇವೆಗೆ ನೋಂದಣಿ ಪಡೆದಿರುವಂತೆ ಕೇಳಲಾಗಿದೆ. ಈ ಹಿಂದೆ ವಿವಿಯಲ್ಲಿ ಸೇವೆ ನೀಡಿದ ಅನುಭವ ಮಾತ್ರ ಪರಿಗಣಿಸುವ ಷರತ್ತು ವಿಧಿಸಲಾಗಿದೆ. ಇತರೆ ಸರ್ಕಾರಿ ಇಲಾಖೆಗಳಲ್ಲಿ ಮಾನವ ಸಂಪನ್ಮೂಲ ಸೇವೆ ಒದಗಿಸಿದ ಸೇವೆ ಪರಿಗಣಿಸುವುದಿಲ್ಲವೆಂಬ ಷರತ್ತು ಹಾಕಲಾಗಿದೆ ಎಂದು ಅವರು ದೂರಿದರು.

ಸರ್ಕಾರದ ಸಾರ್ವಜನಿಕ ವಿಶ್ವ ವಿದ್ಯಾನಿಲಯಗಳಲ್ಲಿ ಅತೀ ಹೆಚ್ಚು ಮಾನವ ಸಂಪನ್ಮೂಲ ಸೇವೆ ಪೂರೈಸಿರುವ ಸಂಸ್ಥೆಯನ್ನು ಪರಿಗಮಿಸುವುದಾಗಿ ತಿಳಿಸಲಾಗಿದೆ. ಕೆಟಿಟಿಪಿ ಕಾಯ್ದೆ ಅಧ್ಯಾಯ-5ರ 17(ಬಿ)ಯಲ್ಲಿ ₹2 ಕೋಟಿಗಳಿಗಿಂತ ಹೆಚ್ಚು ಮೌಲ್ಯದ ಟೆಂಡರ್‌ಗಳಿಗೆ ಟೆಂಡರ್ ಸಲ್ಲಿಸಲು ಕನಿಷ್ಟ ಕಾಲಾವಕಾಶ 60 ದಿನ ಇರಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದರೆ, ಟೆಂಡರನ್ನು ಕೇವಲ 17 ದಿನಕ್ಕೆ ಮಾತ್ರ ಕಾಲಾವಕಾಶ ನೀಡಲಾಗಿದೆ. ಬೇರೆ ಟೆಂಡರದಾರರು ಭಾಗವಹಿಸಲು ದಾಖಲೆ ಹೊಂದಿಸಿಕೊಳ್ಳಲು ಸಮಯಾವಕಾಶ ಸಿಗಬಾರದೆಂಬ ಉದ್ದೇಶದಿಂದ ಈ ರೀತಿ ಅಲ್ಪಾವದಿ ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ಟೆಂಡರ್‌ನಲ್ಲಿ ಭದ್ರತಾ ಸಿಬ್ಬಂದಿ ಪೂರೈಸಲು ತಿಳಿಸಲಾಗಿದೆ. ಆದರೆ, ಪೊಲೀಸ್ ಇಲಾಖೆ ನೋಂದಣಿಯನ್ನೇ ಕೇಳಿರುವುದಿಲ್ಲ. ಭದ್ರತಾ ಸಿಬ್ಬಂದಿ ಪೂರೈಸುವ ಸಂಸ್ಥೆಗಳು ಕಡ್ಡಾಯವಾಗಿ ಪೊಲೀಸ್ ಇಲಾಖೆಯಲ್ಲಿ ನೋಂದಣಿ ಹೊಂದಿರಬೇಕು. ಟೆಂಡರ್ ಪ್ರತಿ ವರ್ಷ ಕರೆದರೂ ಸಹ ಅನೇಕ ಸಿಬ್ಬಂದಿ ಬದಲಾದರೂ ಏಜೆನ್ಸಿ ಮಾತ್ರ 2009ರಿಂದ ಇಲ್ಲಿವರೆಗೂ ಬದಲಾಗಿಲ್ಲ. ಒಂದೇ ಏಜೆನ್ಸಿಗೆ ಯಾಕೆ ದಾವಿವಿ ಮಣೆ ಹಾಕುತ್ತಿದೆಯೆಂಬ ಬಗ್ಗೆಯೂ ಸಾಕಷ್ಟು ಅನುಮಾನಗಳು ಕಾಡುತ್ತಿವೆ. 2009ರಿಂದ 2013ರ ಅವಧಿಯಲ್ಲಿ ನೌಕರರ ಭವಿಷ್ಯ ನಿಧಿ ವಂಚಿಸಿರುವ ಬಗ್ಗೆ ಭವಿಷ್ಯ ನಿಧಿ ಇಲಾಖೆಯವರು ಇದೇ ಏಜೆನ್ಸಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಹಾಗಿದ್ದರೂ, ಅದೇ ಏಜೆನ್ಸಿಗೆ ಮುಂದುವರಿಸುತ್ತಿರುವುದು ಅನುಮಾನಕ್ಕೆ ಆಸ್ಪದ ಮಾಡಿಕೊಡುತ್ತಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಪಿ.ತಿಪ್ಪೇರುದ್ರಪ್ಪ, ಸಹ ಕಾರ್ಯದರ್ಶಿ ಜೆ.ಡಿ.ಕೃಷ್ಣಮೂರ್ತಿ ಇತರರು ಇದ್ದರು.

ದಾವಣಗೆರೆ ವಿವಿ ಕರೆದಿರುವ ಎಲ್ಲಾ ಷರತ್ತುಗಳು ಕೇವಲ ಒಂದು ಸಂಸ್ಥೆಗೆ ಅನುಕೂಲ ಮಾಡಿಕೊಡುವಂತೆ ಇವೆ. ಪ್ರಸ್ತುತ ಈಗ ಸೇವೆ ಒದಗಿಸುತ್ತಿರುವ ಬಿಕೆಆರ್ ಸರ್ವೀಸ್ಸ್‌ ಏಜೆನ್ಸಿಯು ಕಳೆದ ಒಂದೂವರೆ ದಶಕದಿಂದಲೂ ದಾವಿವಿಯಲ್ಲಿ ನಿರಂತರ ಗುತ್ತಿಗೆ ಪಡೆಯುತ್ತಿದೆ. ಪ್ರತಿ ಸಲ ಟೆಂಡರ್ ಕರೆದಾದರೂ ಇದೇ ಏಜೆನ್ಸಿಗೆ ಅನುಕೂಲ ಮಾಡಿಕೊಡುವ ಷರತ್ತು ವಿಧಿಸಿ, ಟೆಂಡರ್ ಕರೆಯಲಾಗುತ್ತದೆ. ಅಂತಿಮವಾಗಿ ಅದೇ ಏಜೆನ್ಸಿಗೆ ಗುತ್ತಿಗೆ ನೀಡಲಾಗುತ್ತಿದೆ. ಇದಂತೂ ಒಳ್ಳೆಯ ಬೆಳವಣಿಗೆಯಲ್ಲ. ತಕ್ಷಣವೇ ನಿಯಮಾನುಸಾರ ಟೆಂಡರ್ ಕರೆಯಬೇಕು.

- ಡಿ.ಹನುಮಂತಪ್ಪ ರಾಜ್ಯಾಧ್ಯಕ್ಷ,