ಸಾರಾಂಶ
ಮುದಗಲ್‌ನ ಉಳಿಮೇಶ್ವರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯೋಧ್ಯೆಯ ಶ್ರೀರಾಮ ದೇವಸ್ಥಾನಕ್ಕೆ ಸೈಕಲ್ ಮೇಲೆ ತೆರಳಿದ ಯುವಕ ಮಲ್ಲಿಕಾರ್ಜುನನಿಗೆ ಬೋವಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುದಗಲ್: ಇತ್ತೀಚೆಗೆ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆಂದು ತೆರಳಿದ್ದ ಉಳಿಮೇಶ್ವರ ಗ್ರಾಮದ ಯುವಕ ಮಲ್ಲಿಕಾರ್ಜುನನಿಗೆ ಬೋವಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುದಗಲ್‌ನ ಉಳಿಮೇಶ್ವರ ಗ್ರಾಮದಲ್ಲಿ ಬೋವಿ ಸಮಾಜದ ಆರಾಧ್ಯ ದೇವಿ ಶ್ರೀ ಸತ್ಯಮ್ಮ ದೇವಿ ದೇವಸ್ಥಾನದ ಜೀರ್ಣೊದ್ಧಾರ ಮತ್ತು ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಧಾರ್ಮಿಕ ಸಭೆಯಲ್ಲಿ ಅಯೋಧ್ಯೆಯಲ್ಲಿ ಇತ್ತೀಚೆಗೆ ಜರುಗಿದ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಗ್ರಾಮದ ಯುವಕ ಮಲ್ಲಿಕಾರ್ಜುನನ್ನು ಸಭೆಯಲ್ಲಿ ಸನ್ಮಾನಿಸುತ್ತಿದ್ದಂತೆ ನೆರೆದ ಜನಸ್ತೋಮ ಮತ್ತು ವೇದಿಕೆ ಮೇಲಿದ್ದ ಸಂತರು, ಉಜ್ಜಯನಿ ಮಹಾಕಾಲಿಯ ಬ್ರಾಹ್ಮಣರ ತಂಡ ಮತ್ತು ಮುಖಂಡರು ಜೈ ಶ್ರೀ ರಾಮ ಘೋಷಣೆ ಕೂಗಿ ಯುವಕನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ, ಅಯೋಧ್ಯೆ ಶ್ರೀರಾಮನ ದರ್ಶನಕ್ಕಾಗಿ ಉಳಿಮೇಶ್ವರ ಗ್ರಾಮದಿಂದ ಸೈಕಲ್ ಮೂಲಕ ಯಾತ್ರೆ ಬೆಳೆಸಿದ ನನಗೆ ಸಾಕಷ್ಟು ಅಡೆ ತಡೆ, ಸಂಕಷ್ಟಗಳು ಎದುರಾದವು. ಶ್ರೀರಾಮ ನನಗೆ ಅದನ್ನೆಲ್ಲ ಎದುರಿಸುವ ಶಕ್ತಿ ಕೊಟ್ಟ ಪರಿಣಾಮ ಎಲ್ಲ ಸಂಕಷ್ಟಗಳನ್ನು ಎದುರಿಸಿ ಕೊನೆಗೆ 15 ದಿನ ತಡವಾಗಿಯಾದರೂ ಅಯೋಧ್ಯೆಗೆ ತಲುಪಿ ರಾಮಲಲ್ಲಾ ದರ್ಶನ ಪಡೆದ ಹೆಮ್ಮೆ, ಸಂತಸ ನನಗಿದೆ ಎಂದರು.