ಇಲ್ಲಿನ ಗಣೇಶನಗರ ರಸ್ತೆ ಅಗೆದು ಗುತ್ತಿಗೆದಾರ ನಾಪತ್ತೆಯಾಗಿದ್ದು, ಓಡಾಡಲು ತೀವ್ರ ತೊಂದರೆ ಉಂಟಾಗಿದೆ. ಹೀಗಾಗಿ ಸ್ಥಳೀಯರು ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ ಶಿರಸಿ
ಇಲ್ಲಿನ ಗಣೇಶನಗರ ರಸ್ತೆ ಅಗೆದು ಗುತ್ತಿಗೆದಾರ ನಾಪತ್ತೆಯಾಗಿದ್ದು, ಓಡಾಡಲು ತೀವ್ರ ತೊಂದರೆ ಉಂಟಾಗಿದೆ. ಹೀಗಾಗಿ ಸ್ಥಳೀಯರು ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನಗರೋತ್ಥಾನ-4ನೇ ಹಂತದಲ್ಲಿ ಮಂಜೂರಾದ ಈ ರಸ್ತೆಗೆ ಕಳೆದ 2 ತಿಂಗಳ ಹಿಂದೆ ಭೂಮಿಪೂಜೆ ನೆರವೇರಿಸಿ, ನಂತರ ರಸ್ತೆಯನ್ನು ಅಗೆದಾಗ ಕುಡಿಯುವ ನೀರಿನ ನಳ ಸಂಪರ್ಕದ ಪೈಪ್‌ಗಳು ತುಂಡಾಗಿ, ಸ್ವಲ್ಪ ವಿಳಂಬವಾಗಿತ್ತು. ಅಂತೂ ಕಾಮಗಾರಿ ಆರಂಭಗೊಂಡು ಜೆಲ್ಲಿಕಲ್ಲು, ಕ್ರಷರ್ ಪೌಡರ್ ಹಾಕಿ ಗುತ್ತಿಗೆದಾರ ಕೆಲಸ ಸ್ಥಗಿತಗೊಳಿಸಿದ್ದಾನೆ. ಇದರಿಂದ ರಸ್ತೆಯಲ್ಲಿ ಓಡಾಡಲು ತೀವ್ರ ಸಮಸ್ಯೆ ಎದುರಿಸುತ್ತಿರುವುದು ಮಾತ್ರವಲ್ಲದೇ ಗಣೇಶನಗರ ಭಾಗದ ಸಾರ್ವಜನಿಕರು ಧೂಳಿನಿಂದ ರೋಗಕ್ಕೆ ತುತ್ತಾಗಿದ್ದಾರೆ. ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ನಗರಸಭೆ ಮಾಜಿ ಸದಸ್ಯ ಪ್ರದೀಪ ಶೆಟ್ಟಿ ಮಾತನಾಡಿ, ಗಣೇಶನಗರದ ಅಂದಾಜು1300 ಮೀಟರ್ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ದಾವಣಗೆರೆ ಮೂಲದ ಗುತ್ತಿಗೆದಾರ ಹನುಮಂತ ನಾಯ್ಕ ರಸ್ತೆ ಅಗೆದು ಓಡಿಹೋಗಿದ್ದಾನೆ. ರಸ್ತೆ ಅಗೆದಾಗ ತುಂಡಾದ ಪೈಪ್‌ಗಳ ಜೋಡಣೆಯಾಗಿ 20 ದಿನ ಕಳೆದರೂ ರಸ್ತೆ ಆರಂಭಗೊಳಿಸಿಲ್ಲ. ಸಂಚಾರ ವ್ಯವಸ್ಥೆ ತೀರಾ ಹದಗೆಟ್ಟಿದೆ. ವಾಹನ ಸವಾರರು ಕಣ್ಣೀರು ಹಾಕಿ ಸಂಚಾರ ಮಾಡುತ್ತಿದ್ದಾರೆ. ಶೀಘ್ರದಲ್ಲಿ ರಸ್ತೆ ಆರಂಭಗೊಳಿಸದಿದ್ದರೆ ಸಾಮೂಹಿಕವಾಗಿ ಎಲ್ಲರೂ ಬೀದಿಗೆ ಬಂದು ರಸ್ತೆಯನ್ನು ಅಗೆದು ಹಾಕಲಾಗುತ್ತದೆ ಎಂದು ಎಚ್ಚರಿಸಿದರು.ಸ್ಥಳೀಯ ಮುಖಂಡ ಅನಂತ ನಾಯ್ಕ ಮಾತನಾಡಿದರು.
ನಗರಸಭೆ ಪೌರಾಯಕ್ತ ಪ್ರಕಾಶ ಚೆನ್ನಪ್ಪನವರ್ ಸ್ಥಳೀಯರ ಮನವೊಲಿಸಿ, ಗಣೇಶನಗರ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರನನ್ನು ನಿರಂತರ ಸಂಪರ್ಕಿಸಿ, ರಸ್ತೆ ಕಾಮಗಾರಿ ಆದಷ್ಟು ಶೀಘ್ರ ಪ್ರಾರಂಭಿಸುವಂತೆ ಸೂಚನೆ ನೀಡುತ್ತಿದ್ದೇವೆ. ಕೆಲ ಬಾರಿ ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಗುತ್ತಿಗೆದಾರನ ನಿರ್ಲಕ್ಷ್ಯದ ಕುರಿತು ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ. ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರನ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ನಮ್ಮ ಎದುರಿನಲ್ಲಿಯೇ ಗುತ್ತಿಗೆದಾರನಿಗೆ ದೂರವಾಣಿ ಕರೆ ಮಾಡುವಂತೆ ಪಟ್ಟುಹಿಡಿದಾಗ, ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಎರಡು ದಿನದಲ್ಲಿ ಕಾಮಗಾರಿ ಆರಂಭಗೊಳಿಸಿ, ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸಲಾಗುತ್ತದೆ ಎಂದಾಗ ಪ್ರತಿಭಟನೆ ಮೊಟಕುಗೊಳಿಸಿದರು.ನಾಗರಾಜ ಶೆಟ್ಟಿ, ಗಣೇಶ ಆಚಾರಿ, ಸಂಕೇತ ಶೆಟ್ಟಿ, ನಾಗೇಶ ಗೋಸಾವಿ, ಕೃಷ್ಣ ಶೆಟ್ಟಿ, ಆಟೋ ಬಾಳಾ, ಕೃಷ್ಣ ಗಾಂವಕರ, ಉಮೇಶ ನಾಯ್ಕ, ಅವಿನಾಶ ನಾಯ್ಕ, ಅಭಿಷೇಕ ದೇವಾಡಿಗ ಸೇರಿ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.