36 ಸಾವಿರ ಕೋಟಿ ರೂಪಾಯಿ ಬಾಕಿ ಪಾವತಿಗೆ ಆಗ್ರಹ । ರಾಜ್ಯದ 30 ಸಾವಿರ ಗುತ್ತಿಗೆದಾರರು ಭಾಗಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಾಕಿ ಇರುವ ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರು ಮಾರ್ಚ್ 6 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದಲೂ 36 ಸಾವಿರ ಕೋಟಿ ರು ಕಾಮಗಾರಿ ಬಿಲ್ ಬಾಕಿ ಇದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಲವಾರು ಸಾರಿ ಭೇಟಿಯಾಗಿ ಮನವಿ ಮಾಡಲಾಗಿದ್ದು ಈ ವರೆಗೆ ಸ್ಪಂದಿಸಿಲ್ಲ. ಹಾಗಾಗಿ ಪ್ರತಿಭಟನೆಗೆ ಇಳಿಯುವುದು ಅನಿವಾರ್ಯ ಎಂದರು.

ಲೋಕೋಪಯೋಗಿ ಇಲಾಖೆಯಲ್ಲಿ 8300 ಕೋಟಿ ರು. ಜಲಸಂಪನ್ಮೂಲ ಇಲಾಖೆಯಲ್ಲಿ 13 ಸಾವಿರ ಕೋಟಿ ರು, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ 3200 ಕೋಟಿ ರು, ವಸತಿ ಮತ್ತು ವಕ್ಫ್ ನಲ್ಲಿ ಮೂರು ಸಾವಿರ ಕೋಟಿ, ಸಣ್ಣ ನೀರಾವರಿ 330,0 ಕಾರ್ಮಿಕ ಇಲಾಖೆಯಲ್ಲಿ 2 ಸಾವಿರ ಕೋಟಿ, ಬಿಬಿಎಂಪಿ.ಯಲ್ಲಿ 1600 ಕೋಟಿ ಸೇರಿದಂತೆ ಒಟ್ಟು 36 ಸಾವಿರ ಕೋಟಿ ಬಾಕಿ ಇದೆ.ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಮನೆ, ಬಂಗಾರ ಅಡವಿಟ್ಟು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಹಲವರು ಬಾಕಿ ಭಾರ ತಡೆದುಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಹಾದಿ ತುಳಿದಿದ್ದಾರೆಂದರು.

ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿದ್ದಾಗ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರಿಂದ ಕಮಿಷನ್ ಪಡೆಯುವುದಿಲ್ಲ, ಬಾಕಿ ಪಾವತಿ ಮಾಡುತ್ತೇನೆಂದು ಹೇಳಿದ್ದರು. ಆದರೆ ಪರಿಸ್ಥಿತಿ ಕಳೆದ ಸರ್ಕಾರಕ್ಕಿಂತ ಭೀಕರವಾಗಿದೆ.ಕಮಿಷನ್ ಮಿತಿ ಮೀರಿದೆ. ತಾವು ಈಗಾಗಲೇ 19 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಎಲ್ಲಕಡೆ ಗುತ್ತಿಗೆದಾರರು ನೋವು ತೋಡಿಕೊಳ್ಳುತ್ತಿದ್ದಾರೆ. ಎಲ್ಲ ಗುತ್ತಿಗೆದಾರರು ಪ್ರತಿಭಟನೆಗೆ ಸಾಥ್ ಕೊಡುತ್ತಾರೆ ಎಂದರು.


ರಾಜ್ಯದಲ್ಲಿ ಹೊಸ ಬಗೆಯ ಮಧ್ಯವರ್ತಿಗಳ ಹಾವಳಿ ಶುರವಾಗಿದೆ. ಬೆಂಗಳೂರಿನಲ್ಲಿ ಖಾಸಗಿ ಕಚೇರಿಗಳ ತೆರೆದು ಕಾಮಗಾರಿಗೆ ಸಂಬಂಧಿಸಿದಂತೆ ವ್ಯವಹಾರಗಳನ್ನು ಕುದುರಿಸಿಕೊಂಡು ಕಾಮಗಾರಿಗಳನ್ನು ಯಾರಿಗೆ ನೀಡಬೇಕೆಂಬುದನ್ನು ನಿರ್ಧರಿಸುತ್ತಾರೆ. ಕೆಲ ಇಲಾಖೆ ಹೊರತು ಪಡಿಸಿ ಬಹುತೇಕ ಕಡೆ ಇಂತಹ ವ್ಯವಸ್ಥೆ ಇದೆ. ಕೆಟ್ಟ ಪರಿಸ್ಥಿತಿಯಲ್ಲಿ ಮುಷ್ಕರದ ಹಾದಿ ಹಿಡಿಯುತ್ತಿದ್ದೇವೆ ಎಂದರು.

ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆಯಲ್ಲಿ ಮೈನಿಂಗ್ ದಂಧೆ ಎಗ್ಗಿಲ್ಲದ ನಡೆಯುತ್ತಿದೆ. ಕೆಲವು ಶಾಸಕರು, ಸಚಿವರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಕಾಮಗಾರಿಯ ಬಿಲ್‌ಗಳು ಬಾಕಿಯಿರುವುದಕ್ಕೆ ಸಂಬಂಧಿಸಿದಂತೆ ನೂರು ಪುಟಗಳ ದಾಖಲೆಯನ್ನು ಮುಖ್ಯಮಂತ್ರಿಗೆ ಕೊಟ್ಟಿದ್ದೇವೆ. ಮಾನವೀಯತೆಯಿಂದಲಾದರೂ ಸಿದ್ದರಾಮಯ್ಯನವರು ನಮ್ಮ ಜೊತೆ ಮಾತುಕತೆ ನಡೆಸಬಹುದಿತ್ತು. ರಾಜ್ಯದಲ್ಲಿ ಒಂದುವರೆ ಲಕ್ಷ ಗುತ್ತಿಗೆದಾರರಿದ್ದು, ಏಪ್ರಿಲ್‌ನಿಂದ ಕುಟುಂಬ ಸಮೇತ ಅನಿರ್ಧಿಷ್ಠಾವಧಿ ಮುಷ್ಕರ ನಡೆಸುವುದಾಗಿ ಆರ್.ಮಂಜುನಾಥ್ ಎಚ್ಚರಿಸಿದರು.

ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಲ್ಲೇಶಪ್ಪ, ಉಪಾಧ್ಯಕ್ಷರುಗಳಾದ ಎಲ್.ಮಹೇಶ್, ವೈ.ತಿಪ್ಪೇಸ್ವಾಮಿ, ಕೆ.ಕರಿಯಪ್ಪ, ಜಿ.ದೇವೇಂದ್ರಪ್ಪ, ಬಲರಾಮರೆಡ್ಡಿ, ನಿರಂಜನಮೂರ್ತಿ, ರಂಗಸ್ವಾಮಿ, ಶ್ರೀನಿವಾಸ್, ದೇವರಾಜ್, ತಿಮ್ಮರಾಜ್, ಅಜ್ಚಪ್ಪ, ತಕ್ಕಡಿ ಸುರೇಶ್ ಇದ್ದರು.