ಸಾರಾಂಶ
- ಮೂಡಬಿದರೆಯ ಹಿರಿಯ ಸಾಹಿತಿ ಡಾ.ರಾಮಕೃಷ್ಣ ಶಿರೂರು ಸಲಹೆ । ಕಾವ್ಯ ಕುಂಚ ಕವನ ಸಂಕಲನ ಬಿಡುಗಡೆ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಕವಿ, ಸಾಹಿತಿ ಬರೆಯುವುದಕ್ಕಿಂತಲೂ ಅಧ್ಯಯನದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಾಗ ಉತ್ತಮ ಆಲೋಚನೆ, ಹೊಸತನದ ವಿಷಯಗಳು ಹೊಳೆಯುತ್ತವೆ. ಆಗ ಸತ್ವಪೂರ್ಣವಾದ ಕವನ, ಸಾಹಿತ್ಯ ಹೊರಹೊಮ್ಮಲು ಸಾಧ್ಯ ಎಂದು ಮೂಡಬಿದರೆಯ ಹಿರಿಯ ಸಾಹಿತಿ, ಕವಿ ಡಾ.ರಾಮಕೃಷ್ಣ ಶಿರೂರು ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ನಡೆದ ಕಾವ್ಯ ಕುಂಚ ಐದನೇ ಭಾಗದ ಕವನ ಸಂಕಲನ ಮತ್ತು ಕುಂಚ ಕೈಪಿಡಿ ಲೇಖನಗಳ ಸಂಗ್ರಹದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.ಕವಿ, ಸಾಹಿತಿ, ಲೇಖಕ ಸದಾ ಹೊಸತನದ ಹುಡುಕಾಟದಲ್ಲಿರಬೇಕು. ಓದುಗರಿಗೆ ಹೊಸ ವಿಷಯಗಳ ಬಗ್ಗೆ ಬರಹದ ಮೂಲಕ ತಿಳಿಸಬೇಕು. ಗುಣಮಟ್ಟದ ವಿಮರ್ಶೆಗೆ ಒಳಗಾಗುವಂತೆ ರಚನೆ ಮಾಡಬೇಕು. ಆಗ ಎಲ್ಲರಂತೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ ಎಂದರು.
ಈಗ ಅನೇಕರು ಕವನ, ಲೇಖನ, ಕಾದಂಬರಿ ಏನೆಲ್ಲ ಬರೆಯುತ್ತಿದ್ದಾರೆ. ಆದರೆ, ಓದುಗರ ಮನ, ಸಾಹಿತ್ಯ ಕ್ಷೇತ್ರದಲ್ಲಿ ಶಾಶ್ವತವಾಗಿ ಇರುವಂತಹ ಕವನ, ಲೇಖನ ಕಾಣಸಿಗುವುದು ಬಹಳ ವಿರಳ. ಎಲ್ಲರಲ್ಲಿ ಒಂದಾಗದೇ ವಿಭಿನ್ನ, ವಿಶಿಷ್ಟವಾಗಿ ಬರೆಯುವ ಮೂಲಕ ಶಾಶ್ವತ ಹಾಗೂ ಗಟ್ಟಿಯಾಗಿ ಉಳಿಯುವ ಕೆಲಸ ಸಾಹಿತ್ಯ ಕ್ಷೇತ್ರದಲ್ಲಿ ಮಾಡಬೇಕು. ಅ ಮೂಲಕ ಕನ್ನಡದ ಸೇವೆ ಮಾಡಬೇಕು ಎಂದು ಹೇಳಿದರು.ಕೆಲವರು ಹಳಗನ್ನಡ ಓದುವುದಿಲ್ಲ ಎನ್ನುತ್ತಾರೆ. ರನ್ನ, ಪೊನ್ನ, ಪಂಪ, ಜನ್ನ ಮುಂತಾದವರು ಹೊಸಗನ್ನಡದ ಬಿ.ಎಂ. ಶ್ರೀಕಂಠಯ್ಯ, ರಾಷ್ಟ್ರಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ ಮುಂತಾದಂತಹ ಶ್ರೇಷ್ಠ ಕಾವ್ಯ ಪರಂಪರೆಯೇ ನಮ್ಮ ಮುಂದೆ ಇದೆ. ಅಂತಹವರು ಕವನ, ಲೇಖನಗಳ ಓದುವಂತಾಗಬೇಕು. ಅವರ ಸಾಹಿತ್ಯದ ಕೃಷಿಯನ್ನ ಸಮಗ್ರವಾಗಿ ಅವಲೋಕನ ಮಾಡುವ ಮೂಲಕ ಗಟ್ಟಿಯಾಗಿ ಬೆಳೆಯಬಹುದು ಎಂದು ತಿಳಿಸಿದರು.
ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸರ್ಕಾರ, ಪರಿಷತ್ತು, ವಿಶ್ವವಿದ್ಯಾಲಯ ಮಾಡುವಂತಹ ಕನ್ನಡದ ಕೆಲಸ ಮಾಡಿಕೊಂಡು ಬರುತ್ತಿದೆ. ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚಿನ ಅಂಕ ಪಡೆದಂತಹ 37 ಸಾವಿರದಷ್ಟು ಮಕ್ಕಳಿಗೆ ಪ್ರಶಸ್ತಿ ನೀಡಿರುವುದು. ಕನ್ನಡದ ಖ್ಯಾತ ದಿಗ್ಗಜರ ಮೂಲಕ ಪ್ರಶಸ್ತಿ ಪ್ರದಾನ ಮಾಡಿಸಿರುವುದು ನಿಜಕ್ಕೂ ಅಚ್ಚರಿ. ಅಂತಹ ಸಂಸ್ಥೆಯ ಕಾರ್ಯ ಚಟುವಟಿಕೆಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ರಾಯಚೂರಿನ ಯುವ ಸಾಹಿತಿ ನಾನಾಗೌಡ ಮಾಲಿ ಪಾಟೀಲ್ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿ, ಕವಿಗಳು ಇರುವುದನ್ನು ನೇರವಾಗಿ ಸಮಾಜಕ್ಕೆ ತಿಳಿಸಬೇಕು. ಹೊಸ ವಿಚಾರಗಳ ಚಿಂತನ, ಮಂಥನಕ್ಕೆ ಕಾರಣವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕವನ ಸಂಕಲನದ ಪ್ರಧಾನ ಸಂಪಾದಕ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಪ್ರಭಾ ರವೀಂದ್ರ, ಲಲಿತಾ ಕಲ್ಲೇಶ್, ಜ್ಯೋತಿ ಗಣೇಶ್ ಶೆಣೈ, ರಾಜಶೇಖರ ಬೆನ್ನೂರು, ವಿ.ಕೃಷ್ಣಮೂರ್ತಿ, ಕೆ.ಸಿ.ಉಮೇಶ್ ಇತರರು ಇದ್ದರು.- - - -2ಕೆಡಿವಿಜಿ36.ಜೆಪಿಜಿ:
ದಾವಣಗೆರೆಯಲ್ಲಿ ಕಲಾಕುಂಚದಿಂದ ಕವನ ಸಂಕಲನ ಮತ್ತು ಕುಂಚ ಕೈಪಿಡಿ ಲೇಖನಗಳ ಸಂಗ್ರಹದ ಪುಸ್ತಕವನ್ನು ನಾನಾಗೌಡ ಮಾಲಿ ಪಾಟೀಲ್ ಬಿಡುಗಡೆಗೊಳಿಸಿದರು. ಕವಿ ಡಾ.ರಾಮಕೃಷ್ಣ ಶಿರೂರು, ಕೃತಿಕಾರ ಸಾಲಿಗ್ರಾಮ ಗಣೇಶ್ ಶೆಣೈ, ಪ್ರಭಾ ರವೀಂದ್ರ, ಲಲಿತಾ ಕಲ್ಲೇಶ್, ಜ್ಯೋತಿ ಗಣೇಶ್ ಶೆಣೈ ಇತರರು ಇದ್ದರು.