ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಅನಿಮಿಯ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಶಿಕ್ಷಕರು,ಅಂಗನವಾಡಿ,ಆಶಾ ಕಾರ್ಯಕರ್ತರ ಮೂಲಕ ಸಮುದಾಯಕ್ಕೆ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ಅಪೌಷ್ಟಿಕತೆ ತಡೆಯುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಅರಾಭಿಕೊತ್ತನೂರು ಗ್ರಾ.ಪಂ ಪಿಡಿಒ ಶಾಲಿನಿ ತಿಳಿಸಿದರು.ತಾಲೂಕಿನ ಅರಾಭಿಕೊತ್ತನೂರು ಗ್ರಾಪಂ ಸಭಾಂಗಣದಲ್ಲಿ ಅನಿಮಿಯ ಮುಕ್ತ ಗ್ರಾಪಂಗಾಗಿ ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗಾಗಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ರಕ್ತಹೀನತೆ ಬಾಧೆ ಹೆಚ್ಚುಪ್ರಪಂಚದಾದ್ಯಂತ ೨ ಶತಕೋಟಿ ಜನರನ್ನು ಅನಿಮಿಯಾ ಬಾಧಿಸುತ್ತಿದೆ ಅದರಲ್ಲೂ ಮಕ್ಕಳು ಹೆಚ್ಚಾಗಿ ರಕ್ತಹೀನತೆ ಸಮಸ್ಯೆಗೆ ತುತ್ತಾಗುತ್ತಿದ್ದು, ಮಕ್ಕಳ ಅರಿವಿನ ಬೆಳವಣಿಗೆ, ಶಕ್ತಿ, ಸಾಮರ್ಥ್ಯ, ಆರೋಗ್ಯದ ಮೇಲೆ ಗಂಭೀರ ಪರಿನಾಮ ಬೀರುತ್ತಿದೆ, ಇದರಿಂದ ಮಕ್ಕಳ ಮೆದುಳಿನ ಬೆಳವಣಿಗೆ ತೀವ್ರವಾಗಿ ಕುಂಠಿತಗೊಳ್ಳುತ್ತಿದ್ದು,ಇದನ್ನು ನಂತರ ಬದಲಾಯಿಸಲು ಸಹಾ ಸಾಧ್ಯವಿಲ್ಲ ಎಂಬುದು ಆತಂಕಕಾರಿ ಎಂದರು.
ಗ್ರಾ.ಪಂ ಅಧ್ಯಕ್ಷ ರೇಣುಕಾಂಭ ಮುನಿರಾಜು, ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಹಾನಿಯುಂಟು ಮಾಡುವ ಅನಿಮಿಯಾ ತಡೆಗೆ ಸಮಾಜದ ಪ್ರತಿಯೊಬ್ಬರೂ ಸಹಕರಿಸಬೇಕು, ಮನೆಯಲ್ಲಿ ಸೊಪ್ಪು,ತರಕಾರಿ ಸೇರಿದಂತೆ ಕಬ್ಬಿಣಾಂಶಭರಿತ ತರಕಾರಿ,ತಿಂಡಿ ತಿನ್ನಬೇಕು ಎಂದರು.ಜಂತುಹುಳುಗಳಿಂದ ರಕ್ತಹೀನತೆಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಹಾಗೂ ಐಟಿಸಿ ಮಿಷನ್ ಜಿಲ್ಲಾ ಸಂಯೋಜಕಿ ಸರಸ್ವತಿ ಮಾತನಾಡಿ, ಮಕ್ಕಳಲ್ಲಿ ಪೌಷ್ಟಿಕಾಂಶಭರಿತ ಆಹಾರ ಸಿಗದೇ ಹಾಗೂ ಜಂತುಹುಳುಗಳಿಂದಲೂ ರಕ್ತಹೀನತೆಗೆ ಕಾರಣವಾಗಿದೆ, ಆದ್ದರಿಂದಲೇ ಸರ್ಕಾರ ಶಾಲಾ ಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಅಲ್ಬೆಂಡೋಜಲ್ ಜಂತುಹುಳು ನಿವಾರಣಾ ಮಾತ್ರೆ ನೀಡುತ್ತಿದೆ ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಮಾ.೩ ರಿಂದ ೬ ರವರೆಗೂ ಪೋಲಿಯೋ ಲಸಿಕಾ ಅಭಿಯಾನ ನಡೆಯುತಿದ್ದು, ಬೂತ್‌ಗಳಿಗೆ ಹೋಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಅರಿವು ಮೂಡಿಸಿ ಎಂದರು. ಅನುದಾನ ಪೂರ್ಣ ಬಳಸಿಕೊಳ್ಳಿಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸೌಮ್ಯಲತಾ ಮಾತನಾಡಿ, ಮೌಲ್ಯಾಂಕನ ಪರೀಕ್ಷೆ ಸಿದ್ದತೆಗಳು ಮತ್ತು ಪರೀಕ್ಷೆ ನಡೆಸುವ ಕುರಿತು ಮಾರ್ಗದರ್ಶನ ನೀಡಿ, ಶಿಕ್ಷಣ ಇಲಾಖೆ ನೀಡಿರುವ ಅನುದಾನವನ್ನು ಆರ್ಥಿಕ ವರ್ಷದ ಅಂತ್ಯದೊಳಗೆ ಬಳಸಿಕೊಳ್ಳಿ, ಮತಗಟ್ಟೆಗಳಿರುವ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ಇಲ್ಲವಾದರೆ ಮಾಹಿತಿ ನೀಡಿ, ನೀರು,ಶೌಚಾಲಯ, ವಿದ್ಯುತ್ ಮತ್ತಿತರ ಸೌಲಭ್ಯಗಳ ಕುರಿತು ದೃಢೀಕರಿಸಿಕೊಳ್ಳಿ ಎಂದು ಎಲ್ಲ ಶಾಲೆಗಳ ಮುಖ್ಯಶಿಕ್ಷಕರಿಗೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಮಾಲೂರು ತಾಲೂಕು ಸಂಯೋಜಕ ವಿಜಯಕುಮಾರ್, ಆರೋಗ್ಯ ಸಮುದಾಯ ಅಧಿಕಾರಿಗಳಾದ ಕಾರ್ತಿಕಾ, ಕ್ರಿಸ್ಟೀನಾ, ಗ್ರಾ.ಪಂ ಕಾರ್ಯದರ್ಶಿ ಪ್ರಮೀಳಾ, ಐಟಿಸಿ ತಾಲ್ಲೂಕು ಸಂಯೋಜಕರಾದ ರವಿತೇಜ, ಸೌಮ್ಯ, ಮುಖ್ಯಶಿಕ್ಷಕರಾದ ಕೃಷ್ಣಮೂರ್ತಿ ಇದ್ದರು.