ಸಾರಾಂಶ
ರಾಮನಗರ: ಸಾಲ ಮನ್ನಾ ಮನೋಭಾವನೆಯಿಂದ ರೈತರು ಹೊರ ಬಂದು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ಸಕಾಲದಲ್ಲಿ ಹಿಂದಿರುಗಿಸಬೇಕು. ಇದರಿಂದ ಕೃಷಿಕರ ಜೊತೆಗೆ ಬ್ಯಾಂಕ್ ಗಳು ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ ಎಂದು ಬೆಂಗಳೂರು ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬಿಡಿಸಿಸಿ ಬ್ಯಾಂಕ್ ವತಿಯಿಂದ ರಾಮನಗರ ಮತ್ತು ಬಿಡದಿ ಶಾಖೆಯ ಕೃಷಿ ಸಹಕಾರ ಸಂಘಗಳ ವ್ಯಾಪ್ತಿಯ ರೈತರಿಗೆ ಬೆಳೆ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಯಾವುದೇ ಸಹಕಾರ ಬ್ಯಾಂಕ್ ಗಳಲ್ಲಿ ಕಳೆದ 8 ತಿಂಗಳಿಂದ ರೈತರಿಗೆ ಕೆಸಿಸಿ ಬೆಳೆ ಸಾಲ ವಿತರಣೆ ಮಾಡಿಲ್ಲ. ಆದರೆ, ಕೃಷಿಕರ ಹಿತದೃಷ್ಟಿಯಿಂದ ಬಿಡಿಸಿಸಿ ಬ್ಯಾಂಕ್ ಅಪೆಕ್ಸ್ ಬ್ಯಾಂಕಿನಿಂದ ಹೆಚ್ಚುವರಿ ಬಡ್ಡಿಗೆ 113 ಕೋಟಿ ರು. ಸಾಲ ಪಡೆದು ರೈತರಿಗೆ ವಿತರಣೆ ಮಾಡುತ್ತಿದೆ. ರಾಮನಗರ ಜಿಲ್ಲಾ ರೈತರಿಗೆ ಹೆಚ್ಚಿನ ಪಾಲು ಲಭಿಸಿದ್ದು, 75 ಕೋಟಿ ರು. ಸಾಲ ವಿತರಿಸಲಾಗುತ್ತಿದೆ. ಸಾಲ ಸದ್ಬಳಸಿಕೊಂಡು, ಸಕಾಲದಲ್ಲಿ ಹಿಂತಿರುಗಿಸಿದರೆ ಬೇರೆ ರೈತರಿಗೂ ಅನುಕೂಲವಾಗುತ್ತದೆ ಎಂದು ಹೇಳಿದರು.ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ಸಾಲಸೌಲಭ್ಯ ಕಲ್ಪಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕರಾದ ಬಾಲಕೃಷ್ಣ ಮತ್ತು ಇಕ್ಬಾಲ್ ಹುಸೇನ್ ಶ್ರಮ ಕಾರಣವಾಗಿದೆ. ರಾಮನಗರ ಮತ್ತು ಬಿಡದಿ ವ್ಯಾಪ್ತಿಯ ರೈತರಿಗೆ 13 ಕೋಟಿ ಬೆಳೆ ಸಾಲ ಹಾಗೂ 1.40 ಕೋಟಿ ರು. ಮಹಿಳಾ ಸ್ವ ಸಹಾಯ ಸಂಘಗಳಿಗೆ ನೀಡಲಾಗುತ್ತಿದೆ. ಹರೀಸಂದ್ರ ಬಳಿ 3 ಎಕರೆ ಜಾಗ ರಸಗೊಬ್ಬರ ಗೋದಾಮು ನಿರ್ಮಿಸಲು ಮಂಜೂರಾಗಿದೆ. ಆದರೆ, ಮಾರ್ಕೆಟಿಂಗ್ ಫೆಡರೇಷನ್ ಅವರಿಗೆ ಜಾಗ ಹಸ್ತಾಂತರವಾಗದ ಕಾರಣ ಇನ್ನು ಗೋದಾಮು ನಿರ್ಮಾಣ ಸಾಧ್ಯವಾಗಿಲ್ಲ ಎಂದರು.
ವಿವಿಧ ಖಾಸಗಿ ಸಂಘಗಳು ಮಹಿಳೆಯರಿಗೆ ಸಾಲ ನೀಡಿ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುತ್ತಿವೆ. ಆದರೆ, ಮಹಿಳೆಯರು ಖಾಸಗಿ ಸಂಘಗಳು ವಿಧಿಸುವ ಬಡ್ಡಿಗೂ, ಬಿಡಿಸಿಸಿ ಬ್ಯಾಂಕ್ ಬಡ್ಡಿಯನ್ನು ತಾಳೆ ಮಾಡಿ ನೋಡಬೇಕು. ಮಹಿಳೆಯರು ಸಾಲ ಪಡೆದು ಆರ್ಥಿಕ ಸದೃಢರಾಗುವ ಮೂಲಕ ಬ್ಯಾಂಕ್ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.ಮಾಜಿ ಶಾಸಕ ಕೆ.ರಾಜು ಮಾತನಾಡಿ, ದೇಶದಲ್ಲಿ ಹಿಂದಿನಿಂದಲೂ ರೈತರ ಹೆಸರಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಯಾರೂ ರೈತರನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲೇ ಇಲ್ಲ. ರೈತರು ಸಾಲ ಪಡೆದರೂ ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಮಟ್ಟಕ್ಕೆ ಬಂದು ತಲುಪಿದ್ದಾರೆ. ತಜ್ಞರು ರೈತರಿಗೆ ಸಬ್ಸಿಡಿ ಮತ್ತು ಸಾಲ ಮನ್ನಾ ಸೌಲಭ್ಯ ನೀಡಬಾರದೆಂದು ಸಲಹೆ ನೀಡುತ್ತಲೇ ಇದ್ದಾರೆ. ಕೇಂದ್ರ ಸರ್ಕಾರ ಸಹ ಕೃಷಿ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ನೀಡುವ ಚಿಂತನೆ ಮಾಡುತ್ತಿದೆ. ಖಾಸಗಿ ವಲಯದಲ್ಲಿರುವ ಜರ್ಮನಿ, ಫ್ರಾನ್ಸ್, ಅಮೆರಿಕಾದಂತಹ ದೇಶದಲ್ಲಿಯೂ ರೈತರ ಆತ್ಮಹತ್ಯೆ ತಪ್ಪಿಲ್ಲ. ಆದ್ದರಿಂದ ಮೊದಲು ರೈತರನ್ನು ಸದೃಢರನ್ನಾಗಿ ಮಾಡಬೇಕಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್, ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಎಂ.ಕೆ.ಧನಂಜಯ, ಪಾರ್ಥಸಾರಥಿ, ಆಂಜನಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಸಹಕಾರಿಗಳಾದ ಗಂಗಾಧರಗೌಡ, ಅಂಜನಾಪುರ ವಾಸು ನಾಯ್ಕ, ಕುಮಾರಸ್ವಾಮಿ ಇತರರಿದ್ದರು. 7ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್ ಬಿಡದಿ ಸೊಸೈಟಿಗೆ ಬೆಳೆ ಸಾಲ ವಿತರಣೆ ಮಾಡಿದರು.