ನಿಯಮಾನುಸಾರ, ಪಾರದರ್ಶಕ ಚುನಾವಣೆಗೆ ಸಹಕರಿಸಿ: ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ

| Published : Mar 07 2024, 01:48 AM IST

ನಿಯಮಾನುಸಾರ, ಪಾರದರ್ಶಕ ಚುನಾವಣೆಗೆ ಸಹಕರಿಸಿ: ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಮತ್ತು ಕಾನೂನು ಬಾಹೀರ ಚಟುವಟಿಕೆಗಳು ಹಾಗೂ ಸಂಶಯಾತ್ಮಕ ವಸ್ತುಗಳು ಸಾಗಾಣಿಕೆಯಾಗದಂತೆ ಮುಂಜಾಗೃತಾ ಕ್ರಮವಾಗಿ ಗಡಿ ಭಾಗದ ಚೆಕ್‌ ಪೋಸ್ಟ್‌ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ಡಿಸಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಶೀಘ್ರವೇ ಘೋಷಣೆಯಾಗಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ನಿಯಮಾನುಸಾರ, ಪಾರದರ್ಶಕವಾಗಿ ನಡೆಸಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಚುನಾವಣಾ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯು ಗಡಿ ಭಾಗದಲ್ಲಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಮತ್ತು ಕಾನೂನು ಬಾಹೀರ ಚಟುವಟಿಕೆಗಳು ಹಾಗೂ ಸಂಶಯಾತ್ಮಕ ವಸ್ತುಗಳು ಸಾಗಾಣಿಕೆಯಾಗದಂತೆ ಮುಂಜಾಗೃತಾ ಕ್ರಮವಾಗಿ ಗಡಿ ಭಾಗದ ಚೆಕ್‌ ಪೋಸ್ಟ್‌ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದರು.

ಲೋಕಸಭೆ ಚುನಾವಣೆಯಲ್ಲಿ 85 ವರ್ಷ ಮೇಲ್ಮಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಈ ರೀತಿಯ ಮತದಾನಗಳನ್ನು ಅತ್ಯಂತ ಭದ್ರತೆ ಮತ್ತು ನಿಯಮಾನುಸಾರವಾಗಿ ಮಾಡಲಾಗುವುದು. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯುವವರೆಗೂ ಮತದಾರರ ಪಟ್ಟಿಗೆ ಮತದಾರರ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಗೆ 90 ಲಕ್ಷದವರೆಗೆ ಆಯಾ ಪಕ್ಷದ ಅಭ್ಯರ್ಥಿಯು ಖರ್ಚು ಮಾಡಬಹುದಾಗಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸಲು 25 ಸಾವಿರ ರು.ಗಳನ್ನು ಮುಂಗಡ ಠೇವಣಿಯಾಗಿ ಇಡತಕ್ಕದ್ದು, ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯಿರ್ಥಿಗಳು 12,500 ರು. ಠೇವಣಿ ಇಡಬೇಕಾಗಿರುತ್ತದೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಜಕೀಯ ಪಕ್ಷಗಳು ನಿಯಮಾನುಸಾರವಾಗಿ ನಡೆಸುವಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚುನಾವಣೆ ಶಾಖೆಯ ಶಿರಸ್ತೆದಾರ ರಿಶಿಕೇಶ, ವಿಷಯ ನಿರ್ವಾಹಕರಾದ ರಮೇಶ, ಪ್ರಭು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇದ್ದರು.