ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ ದೇಶದ ಅಭಿವೃದ್ಧಿಗೆ ಮುಳ್ಳಾಗಿರುವ ಮಾನವ ಕಳ್ಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ಪಾಲಿನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಹೇಳಿದರು.ಕೆಜಿಎಫ್ ತಾಲೂಕು ನ್ಯಾಯಾಲಯಗಳ ಪ್ರಾಧಿಕಾರಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಶ್ರೀ ಭಗಾವನ್ ಮಹಾವೀರ್ ಜೈನ್ ಕಾಲೇಜಿನಿಂದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.ಮಕ್ಕಳ ಭವಿಷ್ಯಕ್ಕೆ ಕಾಳಜಿ ವಹಿಸಿ
೧೪ ವರ್ಷದೊಳಗಿನ ಸುಮಾರು ೩೬ ಕೋಟಿ ಮಕ್ಕಳು ನಮ್ಮ ದೇಶದಲ್ಲಿದ್ದಾರೆ, ಅವರ ಬದುಕು, ಭವಿಷ್ಯ ರೂಪಿಸಲು ಎಲ್ಲರೂ ಕಾಳಜಿವಹಿಸಬೇಕು, ಮಕ್ಕಳು ಹುಟ್ಟಿದಾಗಿನಿಂದ ಕೊನೆಯವರೆಗೆ ಅವರು ಜವಾಬ್ದಾರಿಯುವ ಪ್ರಜೆಗಳನ್ನಾಗಿ ರೂಪಿಸಿಲು ವಿವಿಧ ಹಂತದಲ್ಲಿ ಅವರ ಬದುಕಿನಲ್ಲಿ ಬರುವ ಪ್ರತಿಯೊಬ್ಬರೂ ಹೊಣೆಗಾರಾಗಿರುತ್ತಾರೆ. ಪೋಷಕರು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು, ನಂತರ ಶಾಲೆಗಳಲ್ಲಿ ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಬೇಕು ಮಕ್ಕಳನ್ನು ಮುಂದೆ ಸರಿದಾರಿಯಲ್ಲಿ ಸಾಗಲು ಸಮಾಜವೂ ನಿರ್ಣಾಯಕವಾಗಿ ನೆರವಾಗಬೇಕೆಂದು ತಿಳಿಸಿದರು.ಮಕ್ಕಳು ಮತ್ತು ಮಹಿಳೆಯರನ್ನು ವಿದೇಶಕ್ಕೆ ಮಾರಾಟ ಮಾಡಲಾಗುತ್ತಿದೆ, ಸಮಾಜಘಾತುಕ ಶಕ್ತಿಗಳು ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಹಣ ಸಂಪಾದಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.ಮಕ್ಕಳಿಗೆ ಅರಿವು ಮೂಡಿಸಿ
ಹಿರಿಯ ನ್ಯಾಯಾಧೀಶರಾದ ಮುಜಫರ್ ಎ.ಮಾಂಜರಿ ಮಾತನಾಡಿ, ಸಾಮಾಜಿಕ ಪಿಡುಗಾಗಿರುವ ಮಾನವ ಕಳ್ಳ ಸಾಗಾಣಿಕೆ ಅಪರಾಧ. ಇತ್ತೀಚೆಗೆ ಮಕ್ಕಳು ಮತ್ತು ಮಹಿಳೆಯರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದ್ದು, ಇದರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಅತ್ಯಗತ್ಯ, ಮಕ್ಕಳು ಮತ್ತು ಮಹಿಳೆಯರನ್ನು ಜೀತ ಕಾರ್ಮಿಕ ಮತ್ತು ಬಾಲ ಕಾರ್ಮಿಕರಾಗಿ ದುಡಿಸಿಕೊಳ್ಳಲು ಮತ್ತು ಭಿಕ್ಷಾಟನೆ ಮಾಡಿಸುವ ಉದ್ದೇಶದಿಂದ ಮಾನವ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ ಎಂದರು.ಮಾನವ ಕಳ್ಳ ಸಾಗಾಣಿಕೆ ಬಗ್ಗೆ ತಿಳಿದು ಬಂದರೆ ಮಹಿಳಾ ಸಹಾಯವಾಣಿ ಹಾಗೂ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡುವ ಮೂಲಕ ಅವರನ್ನು ರಕ್ಷಿಸಬೇಕು, ಪ್ರತಿ ವರ್ಷ ಜು.೩೦ರಂದು ಮಾನವ ಕಳ್ಳ ಸಾಗಾಣಿಕೆ ದಿನ್ನಾವನ್ನಾಗಿ ಆಚರಣೆ ಮಾಡಿದರೆ ಸಾಲದು ಎಂದರು.ಸಾಮಾಜಿಕ ಪಿಡುಗು ತಡೆಗಟ್ಟಿಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯ ದೊಡ್ಡ ಸಾಮಾಜಿಕ ಪಿಡುಗು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪಿಡುಗಿಗೆ ಬಲಿಪಶುವಾಗುತ್ತಿದ್ದಾರೆ, ಅಪಹೃತ ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ, ಇಂತಹ ಹೀನ ಕೃತ್ಯ ತಪ್ಪಿಸುವುದು ನಾಗರಿಕ ಸಮಾಜದ ಜವಾಬ್ದಾರಿ, ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್‌ರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ರೇಖಾಸೇಥಿ ಮಾತನಾಡಿ, ಮಕ್ಕಳು ದೇಶದ ಆಸ್ತಿ, ಆದ ಕಾರಣ ದುಶ್ಚಟಗಳಿಂದ ದೂರ ಉಳಿದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಲ್ಕು ಗೋಡೆಗಳ ಮಧ್ಯ ಇರುವ ನ್ಯಾಯಾಧೀಶರು ನಮ್ಮ ಕಾಲೇಜಿಗೆ ಬಂದು ಮಕ್ಕಳಿಗೆ ತಿಳಿವಳಿಕೆ ನೀಡುತ್ತಿರುವುದು ಸಂತಸ ತಂದಿದೆ, ಮಕ್ಕಳು ನೀವು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ದೇಶದ ಭವಿಷ್ಯ ರೂಪಿಸಬೇಕೆಂದು ಕರೆ ನೀಡಿದರು.
ಜನಜಾಗೃತಿ ಮೂಡಿಸಲು ಜಾಥಾ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನ್ಯಾಯಾಲಯದ ಆವರಣದಿಂದ ಜಾಥಾ ಹೊರಟು ನಗರದ ಸೂರಜ್‌ಮಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ೨ನೇ ಅಪರ ಸಿವಿಲ್ ನ್ಯಾಯಾಧೀಶರಾದ ಮಂಜು.ಎಂ., ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್, ಕಾರ್‍ಯದರ್ಶಿ ನಾಗರಾಜ್, ವಕೀಲ ಪರಮೇಶ್ವರ್, ವೃತ್ತ ನೀರೀಕ್ಷಕ ನವೀನ್‌ರೆಡ್ಡಿ, ತ್ಯಾಗರಾಜ್ ಇದ್ದರು.