ಸಾರಾಂಶ
ಯನಗುಂದಾ ಗ್ರಾಮದ ಹಾಗೂ ಔರಾದ್ ತಾಲೂಕಿನ ವಿವಿಧ ಕ್ಷೇತ್ರದ 10 ಜನ ಸಾಧಕರಿಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಶಾಲೆಯ ಮಕ್ಕಳಿಂದ ಸುಮಾರು 20ಕ್ಕೂ ಅಧಿಕ ಗೀತೆಗಳ ಮೇಲೆ ನೃತ್ಯಗಳು, ನಾಟಕ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕನ್ನಡಪ್ರಭ ವಾರ್ತೆ ಔರಾದ್
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಿಕ್ಷಕರ ದೂರದೃಷ್ಟಿ, ಮಕ್ಕಳ ಪರಿಶ್ರಮ ಮತ್ತು ಪಾಲಕ ಪೋಷಕರ ಸಹಕಾರ ಅಗತ್ಯ ಎಂದು ಹಿರಿಯ ಮುಖಂಡ ಗುಂಡಯ್ಯ ಸ್ವಾಮಿ ಅಭಿಪ್ರಾಯಪಟ್ಟರು.ತಾಲೂಕಿನ ಯನಗುಂದಾ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರ ಕಾಣಿಕೆ ಅತ್ಯಮೂಲ್ಯವಾಗಿರುತ್ತದೆ. ಮಕ್ಕಳಿಲ್ಲದೆ ಪಾಲಕರಿಲ್ಲ, ಪಾಲಕರಿಲ್ಲದೆ ಶಿಕ್ಷಕರಿಲ್ಲ, ಶಿಕ್ಷಕರಿಲ್ಲದೆ ಶಾಲೆ ಇಲ್ಲ ಎಂಬುದನ್ನು ನಾವೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಪಂಡರಿ ಆಡೆ ಮಾತನಾಡಿ, ಯನಗುಂದಾ ಶಾಲೆಯು ತಾಲೂಕಿನ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಇಲ್ಲಿ ಕಲಿಯುವ ಮಕ್ಕಳು ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎಂದರು.ಡಯೆಟ್ ಉಪನ್ಯಾಸಕ ಲಕ್ಷ್ಮಣ ತುರೆ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಘುಳೆ, ಎಕಲಾರ ಶಾಲೆ ಶಿಕ್ಷಕ ದಾಸ ಸಾಹಿತ್ಯ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಬಿ.ಎಂ ಅಮರವಾಡಿ, ಸುಂದಾಳ ಗ್ರಾಪಂ ಅಧ್ಯಕ್ಷ ಮಾರುತಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಾಗೂ ತಾಲೂಕಿನ ವಿವಿಧ ಕ್ಷೇತ್ರದ 10 ಜನ ಸಾಧಕರಿಗೆ ಗೌರವಿಸಲಾಯಿತು. ಶ್ರೀಪತರಾವ ಚಿಟಗೀರೆ, ಮುಖ್ಯಶಿಕ್ಷಕ ಗೌತಮ ಶಿಂಧೆ, ಸಿಆರ್‌ಪಿ ರಮೇಶ ಢೋಣೆ, ಹುಲಗೊಂಡ್, ಜಗನ್ನಾಥ ಮೂಲಗೆ, ಭೀಮಸಿಂಗ್ ಠಾಕೂರ, ಅಶೋಕ ಪಿಟ್ಲೆ, ಸಂಜುರೆಡ್ಡಿ, ಮಲ್ಲಿಕಾರ್ಜುನ ಟಂಕಸಾಲೆ, ಲಕ್ಷ್ಮಣರೆಡ್ಡಿ ಗಂಗಾಪೂರೆ, ಅಲಿಸಾಬ ಜಾಲಹಳ್ಳಿ, ನರಸಪ್ಪ ಕರಂಜೆ, ಸುಜಾತಾ ಟಂಕಸಾಲೆ, ಕಸ್ತೂರಿ, ಪೂಜಾ ಸ್ವಾಮಿ ಸೇರಿದಂತೆ ಇನ್ನಿತರರಿದ್ದರು.ಶಾಲೆಯ ಮಕ್ಕಳಿಂದ ಸುಮಾರು 20ಕ್ಕೂ ಅಧಿಕ ಗೀತೆಗಳ ಮೇಲೆ ನೃತ್ಯಗಳು, ನಾಟಕ, ಏಕಪಾತ್ರಾಭಿನಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.