ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿಗೆ ಶುಕ್ರವಾರ ೪ ಮೀಟರ್ ಎತ್ತರದ ಗೇಟು ಅಳವಡಿಸುವ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ಅಣೆಕಟ್ಟಿನಲ್ಲಿ ನೀರು ಭರ್ತಿಯಾಗಿ, ಹೆಚ್ಚುವರಿ ನೀರು ಹರಿದು ಹೋಗತೊಡಗಿದೆ.
೫೦ ಕೋಟಿ ರು.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಅಣೆಕಟ್ಟಿನ ಗೇಟು ಅಳವಡಿಸುವ ಕಾರ್ಯ ನವೆಂಬರ್‌ನಲ್ಲಿ ನಡೆಸಬೇಕಾಗಿದ್ದು, ಸತತವಾಗಿ ಸುರಿಯುತ್ತಿದ್ದ ಹಿಂಗಾರು ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣಕ್ಕೆ ಗೇಟು ಅಳವಡಿಕೆಯನ್ನು ವಿಳಂಬಿಸಲಾಗಿತ್ತು. ಅಂತೆಯೇ ಡಿ.೧೫ರಂದು ಗೇಟು ಅಳವಡಿಕೆಯ ಕಾರ್ಯ ಪೂರ್ಣಗೊಂಡ ಬಳಿಕ ಅಣೆಕಟ್ಟಿನಲ್ಲಿ ಒಂದು ದಿನದ ಅವಧಿಯಲ್ಲಿಯೇ ಅಣೆಕಟ್ಟು ಭರ್ತಿಗೊಂಡು ೪ ಮೀಟರ್ ವರೆಗೆ ನೀರು ಸಂಗ್ರಹಗೊಂಡಿದೆ.ಅಂತರ್ಜಲ ವೃದ್ಧಿ ಹಾಗೂ ಬಹುಗ್ರಾಮ ಕುಡಿಯುವ ಯೋಜನೆಯನ್ನಾಧರಿಸಿ ಸಣ್ಣ ನೀರಾವರಿ ಇಲಾಖೆಯ ಮೂಲಕ ನಿರ್ಮಾಣಗೊಂಡ ಈ ಅಣೆಕಟ್ಟಿನಿಂದ ೪ ಕಿ.ಮೀ. ವರೆಗೆ ಹಿನ್ನೀರು ಸಂಗ್ರಹವಾಗುವ ಪ್ರಾರಂಭಿಕ ನಿರೀಕ್ಷೆ ಹೊಂದಲಾಗಿತ್ತು. ಆದರೆ ಪ್ರಸಕ್ತ ಅಣೆಕಟ್ಟಿನಿಂದ ಸುಮಾರು ೬ ಕಿ.ಮೀ. ವರೆಗೆ ಹಿನ್ನೀರು ಸಂಗ್ರಹವಾಗಿದ್ದು, ನಿರೀಕ್ಷಿತ ಪ್ರದೇಶಕ್ಕಿಂತ ಹೆಚ್ಚಿನ ಪ್ರದೇಶಕ್ಕೆ ಪ್ರಯೋಜನವಾಗಲಿದೆ. ನದಿ ಪಾತ್ರದ ಕೃಷಿ ಭೂಮಿಗೆ ಸೊಗಸಾಗಿ ನೀರು ಲಭಿಸಲಿದ್ದು, ಸುತ್ತಮುತ್ತಲ ಪ್ರದೇಶದ ಕೆರೆ ಬಾವಿಗಳು ಮಳೆಗಾಲದಲ್ಲಿ ಇರುವ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಿದೆ. ಒಟ್ಟಾರೆ ಬಿಳಿಯೂರು ಅಣೆಕಟ್ಟಿನಿಂದಾಗಿ ಅಂತರ್ಜಲ ಹೆಚ್ಚಳವಾಗಿ ಕೃಷಿಕ ಸಮುದಾಯಕ್ಕೆ ಸಂತಸ ಮೂಡಿದೆ.
ಜಲಾಧಿವಾಸವಾಗಲಿರುವ ಉದ್ಭವಲಿಂಗ-ಸಂಗಮ ಕ್ಷೇತ್ರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಮೂರು ಮಖೆ ಜಾತ್ರೆಗಳಲ್ಲಿ ಅನಾದಿ ಕಾಲದಿಂದಲೂ ಪೂಜಿಸಿಕೊಂಡು ಬರಲಾಗುತ್ತಿದ್ದ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವ ಲಿಂಗ ಅಣೆಕಟ್ಟಿನ ಹಿನ್ನೀರಿನಿಂದಾಗಿ ವರ್ಷ ಪೂರ್ತಿ ಜಲಧಿವಾಸವಾಗಲಿದ್ದು, ಶಿವರಾತ್ರಿ ಸಹಿತ ಮೂರು ಮಖೆ ಜಾತ್ರೆಗಳಲ್ಲಿ ಭಕ್ತರ ಪೂಜೆಗೆ ಅವಕಾಶವಿಲ್ಲದಂತಾಗಿದೆ. ಮಾತ್ರವಲ್ಲದೆ, ಮಖೆ ಜಾತ್ರೆಯು ಮತ್ತು ಆ ಸಮಯದ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹುತೇಕ ನದಿ ಒಡಲಿನ ವಿಶಾಲ ಸ್ಥಳದಲ್ಲಿ ನಡೆಯುತ್ತಿದ್ದು, ಇದೀಗ ಅಣೆಕಟ್ಟಿನ ಹಿನ್ನೀರಿನಿಂದಾಗಿ ಎಲ್ಲವೂ ಅತಂತ್ರವಾಗಿದೆ. ದಿನದ ಸಾಯಂಕಾಲದ ಹೊತ್ತು ಮರಳಿನಾಟವಾಡಲು ನದಿಗಿಳಿಯುತ್ತಿದ್ದ ಮಕ್ಕಳಿಗೂ ನಿರಾಸೆಯನ್ನು ಮೂಡಿಸಿದೆ. ಜೊತೆಗೆ ಈ ಹಿನ್ನೀರು ಬೋಟಿಂಗ್‌ನಂಥ ಜಲಕ್ರೀಡೆಗಳನ್ನು ಉತ್ತೇಜಿಸಲು ಕಾರಣವಾಗಬಹುದಾಗಿದೆ.
ನದಿಗೆ ಕಸ ಎಸೆಯುವ ಪ್ರಮಾಣ ಅಗಣಿತ-ಶುಕ್ರವಾರ ಅಣೆಕಟ್ಟಿಗೆ ಗೇಟು ಅಳವಡಿಸಿದ ಕಾರಣ ನೀರಿನ ಹರಿಯುವಿಕೆಗೆ ತಡೆಯುಂಟಾಗಿ ನೀರಿನ ಹರಿವು ಸ್ತಂಭಗೊಂಡಿತ್ತು. ಈ ವೇಳೆ ಸೇತುವೆಯಿಂದ ನದಿಗೆ ಎಸೆಯಲಾದ ತ್ಯಾಜ್ಯಗಳು ನಿಂತ ನೀರಿನಲ್ಲಿ ತೇಲುವಂತಾಗಿ ಒಂದು ದಿನದ ಅವಧಿಯಲ್ಲಿ ಎಷ್ಟು ಪ್ರಮಾಣದಲ್ಲಿ ತ್ಯಾಜ್ಯ ಎಸೆಯಲ್ಪಡುತ್ತದೆ ಎನ್ನುವುದು ಅನಾವರಣವಾಯಿತು.