ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ದಾನಿಗಳ ಕೊಡುಗೆ ಅಪಾರ: ಡಾ.ಪ್ರಭಾಕರ ಕೋರೆ

| Published : Jan 12 2025, 01:17 AM IST

ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ದಾನಿಗಳ ಕೊಡುಗೆ ಅಪಾರ: ಡಾ.ಪ್ರಭಾಕರ ಕೋರೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಂಡಾಗಲೇ ಸಮಾಜದ ಉದ್ಧಾರವಾಗುವುದು. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ದಾನಿಗಳ ಕೊಡುಗೆ ಅಪಾರವಾದದ್ದು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಶಿಕ್ಷಣ ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಂಡಾಗಲೇ ಸಮಾಜದ ಉದ್ಧಾರವಾಗುವುದು. ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ದಾನಿಗಳ ಕೊಡುಗೆ ಅಪಾರವಾದದ್ದು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಪಟ್ಟಣದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಡಾ.ಸಂಪತ್ ಕುಮಾರ ಸಿದ್ದರಾಮಪ್ಪ ಶಿವಣಗಿ ಆಂಗ್ಲ ಮಾಧ್ಯಮ ಶಾಲೆಯ ನಾಮಕರಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಥಣಿ ಶಿವಯೋಗಿಗಳ ಪಾವನ ಕ್ಷೇತ್ರ, ಪುಣ್ಯದ ನಾಡು, ಅನೇಕ ತ್ಯಾಗಿಗಳ ಮತ್ತು ದಾನಿಗಳ ಬೀಡಾಗಿದೆ. ಶೈಕ್ಷಣಿಕ, ಆರ್ಥಿಕವಾಗಿ ಸಮೃದ್ಧಿ ಹೊಂದಿರುವ ಅಥಣಿಯಲ್ಲಿ ಅನೇಕ ಜನ ದಾನಿಗಳು ಕೆಎಲ್ಇ ಸಂಸ್ಥೆ ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ದುಡಿಮೆಯ ಸಂಪತ್ತನ್ನು ದಾನ ರೂಪವಾಗಿ ನೀಡಿದ್ದಾರೆ. ಅದರ ಫಲವಾಗಿ ಇಂದು ಲಕ್ಷಾಂತರ ಮಕ್ಕಳು ಶಿಕ್ಷಣ ಪಡೆದು ವಕೀಲರಾಗಿ, ವೈದ್ಯರಾಗಿ, ಉದ್ಯಮಿಗಳಾಗಿ, ಉನ್ನತ ಮಟ್ಟದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಥಣಿ ಮೂಲದ ಅಮೆರಿಕದಲ್ಲಿ ವೈದ್ಯರಾಗಿರುವ ಡಾ.ಸಂಪತ್‌ಕುಮಾರ ಶಿವಣಗಿ ಶ್ರೇಷ್ಠ ದಾನಿಗಳು, ಅವರ ದಾನಕೊಡುವ ಮನಸ್ಸು ತುಂಬಾ ದೊಡ್ಡದು. ಬೆಳಗಾವಿ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ದಾನ ನೀಡಿದ್ದಾರೆ. ಈಗ ಅಥಣಿಯ ವಿದ್ಯಾವರ್ಧಕ ಸಂಸ್ಥೆಗೆ ತಮ್ಮ ದುಡಿಮೆಯ ಸಂಪತ್ತನ್ನು ದಾನ ಮಾಡುವ ಮೂಲಕ ವಿಶೇಷ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿದರು. ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಪ್ರಕಾಶ ಮಹಾಜನ ಪರಿಚಯಿಸಿದರು. ಅತಿಥಿಗಳಾಗಿ ಡಾ.ಉದಯಾ ಸಂಪತ್ ಕುಮಾರ್ ಶಿವಣಗಿ, ಸಂಸ್ಥೆಯ ಕಾರ್ಯದರ್ಶಿ ಓಂಕಾರೆಪ್ಪ ಸಾವಡಕರ್, ಸದಸ್ಯರಾದ ಶ್ರೀಶೈಲ ಸಂಕ‌, ವಿಜಯಕುಮಾರ ಬುರ್ಲಿ, ಅಶೋಕ ಬುರ್ಲಿ, ಸುನೀಲ ಶಿವಣಗಿ, ಪ್ರಧಾನ ಗುರುಗಳಾದ ಪಿ.ಡಿ. ಚನ್ನಗೌಡರ, ಎಂ.ಎಸ್. ದೇಸಾಯಿ, ಎಂ.ಬಿ. ಬಿರಾದಾರ, ಆಡಳಿತಾಧಿಕಾರಿ ಹನುಮಂತ ಗುಡೋಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

----

ಸುಮಾರು ೫೦ ವರ್ಷದಿಂದ ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಯಾವತ್ತಿದ್ದರೂ ನನ್ನ ಪಾಲಿಗೆ ತಾಯ್ನಾಡು ಶ್ರೇಷ್ಠವಾಗಿದೆ‌, ಅಮೆರಿಕ ನನ್ನ ಕರ್ಮ ಭೂಮಿಯಾಗಿದ್ದರೂ ಭಾರತ ಹಾಗೂ ಕರ್ನಾಟಕ ನನ್ನ ಜನ್ಮಭೂಮಿಯಾಗಿದೆ. ತಾಯ್ನಾಡಿಗೆ ಎಷ್ಟೇ ದಾನ ಕೊಟ್ಟರೂ ಕಡಿಮೆಯೇ. ಭಾರತ ಪ್ರತಿಯೊಂದು ರಂಗದಲ್ಲಿ ಅಭಿವೃದ್ಧಿ ಹೊಂದಬೇಕು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಇನ್ನೂ ಅಭಿವೃದ್ಧಿಯಾಗಬೇಕು.

-ಡಾ.ಸಂಪತ್‌ಕುಮಾರ ಶಿವಣಗಿ, ವೈದ್ಯರು