ಸಾರಾಂಶ
ಹಾವೇರಿ: ಸರ್ಕಾರಿ ನೌಕರರು ಯಾರನ್ನೂ ಮೆಚ್ಚಿಸಲು ಕೆಲಸ ಮಾಡಬಾರದು. ಆತ್ಮವಂಚನೆಗೊಳಗಾಗದೆ ಆತ್ಮ ಸಾಕ್ಷಿಗನುಗುಣವಾಗಿ, ಆತ್ಮತೃಪ್ತಿಗಾಗಿ ಕೆಲಸ ಮಾಡಬೇಕು. ಜನರ ಕಷ್ಟಕ್ಕೆ ಸ್ಪಂದಿಸಿ, ಪ್ರಾಮಾಣಿಕವಾಗಿ, ಬದ್ಧತೆಯಿಂದ, ಕಳಕಳಿಯಾಗಿ ಕೆಲಸ ಮಾಡಬೇಕು. ಆಗ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದರು. ನಗರದ ಜಿಲ್ಲಾ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸ್ನೇಹಿ ಆಡಳಿತ ಕಾರ್ಯಾಗಾರ ಹಾಗೂ ಹಾವೇರಿ ಜಿಲ್ಲಾ ಶಾಖೆ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಎಲ್ಲ ಕಡೆಗಳಲ್ಲಿ ಗೌರವ ತಂದುಕೊಡುವ ವೃತ್ತಿ ಯಾವುದಾದರೂ ಇದ್ದರೆ ಅದು ಸರ್ಕಾರಿ ಸೇವೆ, ಸಾರ್ವಜನಿಕ ಸೇವೆ. ಸರ್ಕಾರ ನೌಕರರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಅದಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಸರ್ಕಾರ ಕೊಡುವ ಸಂಬಳಕ್ಕೆ ಪ್ರಾಮಾಣಿಕವಾಗಿ ಜಾಗ್ರತೆಯಿಂದ ದುಡಿದು ಜನರ ಪ್ರೀತಿಗೆ ಪಾತ್ರರಾದರೆ ನಮಗೆ ಗೌರವ ಹೆಚ್ಚಾಗುತ್ತದೆ. ಆಗ ನಮ್ಮ ಬದುಕಿಗೆ ಅರ್ಥ ಬರುತ್ತದೆ ಎಂದರು.ಸರ್ಕಾರಿ ನೌಕರರ ಕಾರ್ಯವೈಖರಿಯಿಂದ ಸರ್ಕಾರ ಸಾಕಷ್ಟು ಆದಾಯವನ್ನು ಗಳಿಸುತ್ತಿದೆ. ರಾಜ್ಯದ ಸುಸ್ಥಿತಿಗೆ ನೌಕರರ ಕೊಡುಗೆ ಅಪಾರವಾಗಿದೆ. ಈಗಾಗಲೇ ಹಲವಾರು ಮಹತ್ವಪೂರ್ಣ ಬೇಡಿಕೆಗಳಾದ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ, ಕ್ಯಾನ್ಸರ್‌ಗೊಳಗಾದ ಮಹಿಳೆಯರಿಗೆ ಆರು ತಿಂಗಳು ವೇತನಸಹಿತ ರಜೆ ಸೇರಿದಂತೆ ಹಲವಾರು ಆದೇಶಗಳು ಜಾರಿಯಲ್ಲಿವೆ. ಮುಂದಿನ ದಿನಗಳಲ್ಲಿ ನೌಕರರ ಒಪಿಎಸ್ ಬೇಡಿಕೆಯನ್ನು ಈಡೇರಿಸಲು ಪ್ರಯತ್ನ ಮಾಡಲಾಗಿದೆ. ಶೀಘ್ರದಲ್ಲಿಯೇ ಅದನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು. ಹಾಗೆಯೇ ಜಿಲ್ಲೆಯ ಸರ್ಕಾರಿ ನೌಕರರ ಕಲ್ಯಾಣಕ್ಕಾಗಿ ಕೆಲವು ಕೆಲಸಗಳು ಆಗಬೇಕಿದೆ. ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಈಡೇರಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಉತ್ತಮ ಆಡಳಿತ ಹೊಂದಿರುವ ದೇಶಗಳಲ್ಲಿ ಆರ್ಥಿಕತೆ ಸುಧಾರಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಹಾಗೂ ಸಂವಿಧಾನದ ಆಶೋತ್ತರಗಳನ್ನು, ಅನುಷ್ಠಾನ ಮಾಡುವ ಮಹತ್ವದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದರು.ಜಿಪಂ ಸಿಇಒ ರುಚಿ ಬಿಂದಲ್ ಮಾತನಾಡಿ, ಪ್ರಜಾಸ್ನೇಹಿ ಆಡಳಿತ ಪ್ರಕಾರವೇ ಕೆಲಸ ಮಾಡಬೇಕು. ಕೆಲಸದಲ್ಲಿ ಸಮಯಕ್ಕೆ ನಿರ್ಬಂಧ ಇರುವುದಿಲ್ಲ. ನೌಕರರು ದಿನದ 24 ತಾಸುಗಳು ಕೆಲಸದಲ್ಲಿ ತೊಡಗಿಕೊಳ್ಳಬೇಕು. ನೌಕರರು ತಾವು ಏನು ಕೆಲಸ ಮಾಡುತ್ತಿದ್ದೇವೆ ಎನ್ನುವುದರ ಬಗ್ಗೆ ಅವರಲ್ಲಿ ತೃಪ್ತಿ ಇರಬೇಕು. ಆಗ ಮಾತ್ರ ಜಿಲ್ಲೆಯ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ನೌಕರರ ಕೆಲಸವಾಗಿದೆ. ಜನರ ಕಷ್ಟಗಳಿಗೆ ಪಾಲುದಾರರಾಗಿ ಜನರ ಕಷ್ಟಗಳನ್ನು ಅರಿತು ಕಚೇರಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ಕಾಲ ಕಾಲಕ್ಕೆ ಮಾಡಿಕೊಡಿ. ಜನರನ್ನು ವಿನಾಕಾರಣ ಅಲೆದಾಡಿಸಬೇಡಿ. ಉತ್ತಮವಾಗಿ ಕಾರ್ಯನಿರ್ವಹಸಿ, ಜನರ ಪ್ರೀತಿಗೆ ಪಾತ್ರರಾಗಿ ಎಂದರು.ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ ಮಾತನಾಡಿ, ಜಿಲ್ಲೆಯ ಸರ್ಕಾರಿ ನೌಕರರು ನಿಷ್ಠಾವಂತರಾಗಿ, ಕ್ರಿಯಾಶೀಲರಾಗಿ, ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದರಿಂದ ಜಿಲ್ಲೆಯ ರಾಜಕಾರಣಿಗಳಿಗೆ ಒಳ್ಳೆಯ ಹೆಸರು ಬರುತ್ತಿದೆ ಎಂದರು.ಧಾರವಾಡ ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಮಾತನಾಡಿದರು. ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ, ಉಪವಿಭಾಗಾಧಿಕಾರಿ ಚನ್ನಪ್ಪ, ಗೌರವಾಧ್ಯಕ್ಷ ಎಸ್. ಬಸವರಾಜು ಇತರರು ಇದ್ದರು. Contribution of government employees to good governance is immense: C.S. Shadakshari
ಹಾವೇರಿ ಸುದ್ದಿ, ಸಿ.ಎಸ್. ಷಡಾಕ್ಷರಿ, ಸರ್ಕಾರಿ ನೌಕರರು, Haveri News, C.S. Shadakshari, Government Employeesಎಲ್ಲ ಕಡೆಗಳಲ್ಲಿ ಗೌರವ ತಂದುಕೊಡುವ ವೃತ್ತಿ ಯಾವುದಾದರೂ ಇದ್ದರೆ ಅದು ಸರ್ಕಾರಿ ಸೇವೆ, ಸಾರ್ವಜನಿಕ ಸೇವೆ. ಸರ್ಕಾರ ನೌಕರರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಅದಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಬೇಕಾಗಿದೆ.