ಭವಿಷ್ಯದ ಭಾರತಕ್ಕಾಗಿ ಯುವ ಸಮೂಹದಲ್ಲಿ ಮಠಗಳು ಸ್ಫೂರ್ತಿ ತುಂಬಬೇಕು. ಸಮಾಜಕ್ಕೆ ಕರ್ನಾಟಕದ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಈ ಮಠಗಳ ಸೇವೆ ವಿಶ್ವವ್ಯಾಪಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ/ಮಳವಳ್ಳಿ

ಭವಿಷ್ಯದ ಭಾರತಕ್ಕಾಗಿ ಯುವ ಸಮೂಹದಲ್ಲಿ ಮಠಗಳು ಸ್ಫೂರ್ತಿ ತುಂಬಬೇಕು. ಸಮಾಜಕ್ಕೆ ಕರ್ನಾಟಕದ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಈ ಮಠಗಳ ಸೇವೆ ವಿಶ್ವವ್ಯಾಪಿಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುತ್ತೂರು ಮಠದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವ ಉದ್ಘಾಟಿಸಿ ‘ಎಲ್ಲರಿಗೂ ನಮಸ್ಕಾರ’ ಎನ್ನುವ ಮೂಲಕ ಕನ್ನಡಲ್ಲಿಯೇ ಭಾಷಣ ಆರಂಭಿಸಿದ ಅವರು, ಇಂದಿನ ಕ್ಷಿಪ್ರ ಬದಲಾವಣೆ ಮತ್ತು ಅನಿಶ್ಚಿತತೆಯ ಕಾಲದಲ್ಲಿ ಯುವ ಸಮೂಹದಲ್ಲಿ ನೈತಿಕ ನಾಯಕತ್ವ ಗುಣಗಳು ಮೂಡಬೇಕು. ಭಾರತದಲ್ಲಿ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಮಾನವೀಯತೆ ಒಟ್ಟಾಗಿ ಸಾಗಬೇಕು ಎಂದು ಸಲಹೆ ನೀಡಿದರು.

ಸುತ್ತೂರು ಮಠದ ಕಾರ್ಯಕ್ಕೆ ಮೆಚ್ಚುಗೆ:ಧರ್ಮ, ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸುತ್ತೂರು ಸಂಸ್ಥಾನ ಮಠ ಈ ಹಿಂದಿನಿಂದಲೂ ನಿರಂತರವಾಗಿ ಶ್ರಮಿಸುತ್ತಿದೆ. ಸುತ್ತೂರು ಮಠದ ಜೆಎಸ್‌ಎಸ್ ಮಹಾವಿದ್ಯಾಪೀಠವು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿದೇಶದಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳನ್ನು ಆರಂಭಿಸಿದೆ. ಸುತ್ತೂರು ಮಠದ ಪೀಠಾಧಿಪತಿ ರಾಜೇಂದ್ರ ಶ್ರೀಗಳು ಶಿಕ್ಷಣದ ಬಗ್ಗೆ ಸಾಕಷ್ಟು ದೂರದೃಷ್ಠಿ ಇಟ್ಟುಕೊಂಡಿದ್ದರು. ಆ ಸೇವೆಯ ಪರಂಪರೆಯನ್ನು ಮಠದ ಪೀಠಾಧ್ಯಕ್ಷರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಸಾನಿಧ್ಯವಹಿಸಿದ್ದ ಸೂತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಿವರಾತ್ರೀಶ್ವರ ಶಿವಯೋಗಿಗಳು ಲೋಕ ಕಲ್ಯಾಣಕ್ಕಾಗಿ ಮಾಡಿದ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಅವರ ಹಾದಿಯಲ್ಲಿ ಬಂದ ಶ್ರೀಮಠದ ಎಲ್ಲಾ ಸ್ವಾಮೀಜಿಗಳು ಮಠವನ್ನು ಮುನ್ನಡೆಸಿದ್ದಾರೆ. ಮಳವಳ್ಳಿಯಲ್ಲಿ ಜಯಂತಿ ಮಹೋತ್ಸವ ನಡೆಯುವುದಕ್ಕೆ ಹಾಗೂ ರಾಷ್ಟ್ರಪತಿ ಸಮಾರಂಭಕ್ಕೆ ಬರುವುದಕ್ಕೆ ಕುಮಾರಸ್ವಾಮಿ ಅವರೇ ಕಾರಣ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ತಮ್ಮ ಮನೆಯ ಕಾರ್ಯಕ್ರಮದಂತೆ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ರೂಪಿಸಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಮಳವಳ್ಳಿ ಸಮೀಪದ ಮಾರೇಹಳ್ಳಿ ಬಳಿ ನಿರ್ಮಿಸಿದ್ದ ಹೆಲಿಪ್ಯಾಡ್‌ಗೆ ಆಗಮಿಸಿದ ರಾಷ್ಟ್ರಪತಿ ಅವರನ್ನು ಸುತ್ತೂರು ಶ್ರೀಗಳು, ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.ಎಚ್‌ಡಿಕೆಗೆ ರಾಷ್ಟ್ರಪತಿ, ರಾಜ್ಯಪಾಲ ಶುಭಾಶಯ:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವೇದಿಕೆ ಮೇಲೆ ಭಾಷಣ ಮಾಡುವಾಗಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರಿ ‘ನಿಮಗೆ ಭಗವಂತ ಒಳ್ಳೆಯದನ್ನುಂಟು ಮಾಡಿ ಉತ್ತಮ ಆರೋಗ್ಯವನ್ನು ನೀಡಲಿ’ ಎಂದು ಹಾರೈಸಿದರು. ಹಾಗೇ ರಾಜ್ಯಪಾಲ ಥಾವರಚಂದ್ ಗೆಹಲೋತ್ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೂ ಸಹ ತಮ್ಮ ಭಾಷಣದಲ್ಲಿ ಸಚಿವರಿಗೆ ಹುಟ್ಟುಹಬ್ಬದ ಶುಭ ಕೋರಿ ಆಶೀರ್ವದಿಸಿದರು. ಶುಭ ಕೋರಿದ ಎಲ್ಲರಿಗೂ ಎಚ್‌ಡಿಕೆ ವೇದಿಕೆಯಲ್ಲಿಯೇ ಧನ್ಯವಾದ ಅರ್ಪಿಸಿದರು.