ವಿವಾಹಕ್ಕೆ ಕನ್ಯೆ ಸಿಗುತ್ತಿಲ್ಲ. ನಮಗೆ ಕಾಲ ಕಳೆಯಲು ಮಠ ಕಟ್ಟಿಸಿಕೊಡಿ ಎಂದು ಯುವಕರ ಗುಂಪೊಂದು ಗ್ರಾಮ ಪಂಚಾಯ್ತಿಗೆ ವಿಚಿತ್ರ ಬೇಡಿಕೆ ಇಟ್ಟಿರುವ ಪ್ರಸಂಗ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಮದಲ್ಲಿ ಜರುಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ವಿವಾಹಕ್ಕೆ ಕನ್ಯೆ ಸಿಗುತ್ತಿಲ್ಲ. ನಮಗೆ ಕಾಲ ಕಳೆಯಲು ಮಠ ಕಟ್ಟಿಸಿಕೊಡಿ ಎಂದು ಯುವಕರ ಗುಂಪೊಂದು ಗ್ರಾಮ ಪಂಚಾಯ್ತಿಗೆ ವಿಚಿತ್ರ ಬೇಡಿಕೆ ಇಟ್ಟಿರುವ ಪ್ರಸಂಗ ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಮದಲ್ಲಿ ಜರುಗಿದೆ.ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಯುವಕರ ಈವಿಚಿತ್ರ ಬೇಡಿಕೆಯಿಂದಾಗಿ ಸ್ಥಳದಲ್ಲಿದ್ದ ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಪಂ ಜನಪ್ರತಿನಿಧಿಗಳು ಒಂದು ಕ್ಷಣ ಅಚ್ಚರಿಗೆ ಒಳಗಾದರು.
ಈ ವೇಳೆ ಗ್ರಾಮದ ಯುವಕ ಪ್ರಸನ್ನ ನೇತೃತ್ವದಲ್ಲಿ ಸುಮಾರು 30 ರಿಂದ 40 ವರ್ಷ ವಯಸ್ಸಿನ 30ಕ್ಕೂ ಹೆಚ್ಚು ಯುವಕರು ನಾವುಗಳು ಅವಿವಾಹಿತರಾಗಿದ್ದು, ವಿವಾಹವಾಗಲು ನಮಗೆ ಕನ್ಯೆ ಸಿಗುತ್ತಿಲ್ಲ. ಹೀಗಾಗಿ ದೇವರ ಧ್ಯಾನ ಮಾಡಿಕೊಂಡು ಕಾಲ ಕಳೆಯಲು 30 ರಿಂದ 40 ಅಳತೆಯ ನಿವೇಶನ ನೀಡಿ ಮಠವನ್ನು ಕಟ್ಟಿಸಿ ಕೊಡಿ ಎಂದು ಗ್ರಾಪಂ ಅಧ್ಯಕ್ಷ ಸುನೀತಾ ಅವರಿಗೆ ಯುವಕರ ಗುಂಪು ಮನವಿ ಸಲ್ಲಿಸಿತು.ನಾವುಗಳು ಕೃಷಿಕರಾಗಿದ್ದು, ನಮಗೆ ಹೆಣ್ಣು ಕೊಡಲು ಮುಂದೆ ಬರುವ ಹುಡುಗಿಯರ ಪೋಷಕರು ಆಸ್ತಿ ಪಾಸ್ತಿಗಿಂತ ಹೆಚ್ಚಾಗಿ ಬೆಂಗಳೂರಿನಲ್ಲಿ ನೌಕರಿ ಹೊಂದಿರಬೇಕು. ಇಂಥವರಿಗೆ ಮಾತ್ರ ಹೆಣ್ಣು ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಯುವಕರು ಅಳಲು ತೋಡಿಕೊಂಡರು.
ಅವಿವಾಹಿತರಾಗಿರುವ ನಾವೆಲ್ಲರೂ ಬೇಸತ್ತು ದೇವರ ನಾಮಸ್ಮರಣೆ ಮಾಡಿಕೊಂಡು ಕಾಲ ಕಳೆಯಲು ಮಠ ಕಟ್ಟಿಸಿ ಕೊಡಿ ಎಂಬ ಬೇಡಿಕೆಯನ್ನು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಅರ್ಜಿ ಸ್ವೀಕಾರ ಮಾಡಿದ ಗ್ರಾಪಂ ಅಧ್ಯಕ್ಷ ಸುನಿತಾ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆದು ನಂತರ ತಮ್ಮ ಬೇಡಿಕೆ ಕುರಿತಂತೆ ತಹಸೀಲ್ದಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಆಶ್ವಾಸನೆ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ತಾಪಂ ರಾಮಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಪಂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.