ಸಾರಾಂಶ
ಧಾರವಾಡ:
ಮುಂದಿನ 15 ದಿನಗಳಲ್ಲಿ ಜಿಲ್ಲೆಯಲ್ಲಿ ಡೆಂಘೀ ಶಂಕಿತ ಪ್ರಕರಣಗಳು ಕಡಿಮೆ ಆಗಿ, ಜ್ವರಪೀಡಿತರ ಸಂಖ್ಯೆ ಇಳಿಮುಖವಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪಬ್ಲಿಕ್ ನೆಗ್ಲಿಜೆನಸಿ ಆ್ಯಕ್ಟ್ ಕೆಳಗೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡೆಂಘೀ ಶಂಕಿತ ಪ್ರಕರಣಗಳ ಪರಿಶೀಲನೆ ಹಾಗೂ ಆರೋಗ್ಯ, ಕಂದಾಯ, ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಸಭೆ ಜರುಗಿಸಿದ ಅವರು, ಸಕಾಲಕ್ಕೆ ಸಾರ್ವಜನಿಕರಿಗೆ ಸ್ಪಂದಿಸದ, ಅಧಿಕಾರಿಗಳ ನಿರ್ಲಕ್ಷದಿಂದ ಜೀವ ಹಾನಿಯಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ಜಿಲ್ಲಾ ಆರೋಗ್ಯ ಅಧಿಕಾರಿ ಪ್ರತಿ ದಿನ ಡೆಂಘೀ ಪ್ರಕರಣಗಳ ಕುರಿತು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹಿಸಿ, ಜಿಲ್ಲಾಡಳಿತಕ್ಕೆ ಕಳುಹಿಸಬೇಕು ಎಂದರು.
ಡ್ರೈ ಡೆ ಮಾಡಿ:ಕೀಟಜನ್ಯ ರೋಗಗಳ ಪ್ರಕರಣಗಳ ನಿಯಂತ್ರಣದಲ್ಲಿ ಡ್ರೈ ಡೆ ಮಾಡುವುದು ಮುಖ್ಯ. ಗ್ರಾಮದ ನೀರು ಸರಬರಾಜು ವೇಳೆ ತಿಳಿದುಕೊಂಡು, ನೀರು ಸರಬರಾಜು ಆಗುವ 12 ಗಂಟೆ ಮೊದಲು ನೀರು ಸಂಗ್ರಹಿಸುವ ಪರಿಕರ ಚೆನ್ನಾಗಿ ತೊಳೆದು, ಒಣ ಅರಿವೆಯಿಂದ ಒರಸಿ ಇಡಬೇಕು. 12 ತಾಸುಗಳ ನಂತರ ನೀರು ಬಂದ ಮೇಲೆ ಮತ್ತೆ ಅವುಗಳಲ್ಲಿ ನೀರು ತುಂಬಬೇಕು. ಅರ್ಧ ಬಳಸಿ, ಉಳಿದ ನೀರಿನಲ್ಲಿ ಮತ್ತೆ ನೀರು ತುಂಬಬಾರದು. ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮನೆಯ ಸುತ್ತ ಯಾವುದೇ ರೀತಿಯ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಲು ಜಿಲ್ಲಾಧಿಕಾರಿ ತಿಳಿಸಿದರು.
ಮುಮ್ಮಿಗಟ್ಟಿ, ನರೇಂದ್ರ, ಬೇಲೂರ, ಧಾರವಾಡ ನಗರದ ಆದರ್ಶ ನಗರ, ನೆಹರುನಗರ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಂದ ಮನೆ-ಮನೆ ಸಮೀಕ್ಷೆ ಮಾಡಿ, ಆರೋಗ್ಯ ದಾಖಲಾತಿ ಮಾಡಬೇಕು. ಪ್ರತಿ ಮನೆಯಲ್ಲಿ ನೀರು ಸಂಗ್ರಹದ ಕುರಿತು ಕುಟುಂಬ ಸದಸ್ಯರಲ್ಲಿ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ಮುಮ್ಮಿಗಟ್ಟಿಯಲ್ಲಿ 3,200 ಮನೆಗಳ ಸಮೀಕ್ಷೆ ಮಾಡಬೇಕು. ಅಂದಾಜು ಎಂಟು ಸಾವಿರ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದರು.ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ಹೆಚ್ಚಳವಾದರೆ, ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ತಕ್ಷಣ ಸ್ಪಂದಿಸಲು ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆದು, ಚಿಕಿತ್ಸೆಗಾಗಿ ಬೆಡ್ ಮೀಸಲಿಡಬೇಕೆಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಅವರಿಗೆ ಸೂಚಿಸಿದರು. ಕಳೆದ ಜನವರಿಯಿಂದ ಜಿಲ್ಲೆಯಲ್ಲಿ 150 ಪಾಜಿಟಿವ್ ಡೆಂಘೀ ಪ್ರಕರಣ ದಾಖಲಾಗಿದ್ದು, ಎಲ್ಲರಿಗೂ ಸಕಾಲದಲ್ಲಿ ಚಿಕಿತ್ಸೆ ನೀಡಿ, ಗುಣಮುಖರಾಗಿದ್ದಾರೆ. ಮುಮ್ಮಿಗಟ್ಟಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಎಂಟು ಡೆಂಘೀ ಶಂಕಿತ ಪ್ರಕರಣ ಕಂಡುಬಂದಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಸಭೆಗೆ ಮಾಹಿತಿ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.