ಸಾರಾಂಶ
ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ನಿತ್ಯ ಆಚರಣೆ ಮಾಡುವುದರಿಂದ ಲಾಭ ಹೊಂದಲು ಸಾಧ್ಯ.
ಕನ್ನಡಪ್ರಭ ವಾರ್ತೆ ಅಥಣಿ
ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸಲು, ಸಮತೋಲನವನ್ನು ಸೃಷ್ಟಿಸಲು ಬಹಳಷ್ಟು ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಯೋಗ ಪ್ರಭಾರಿ ಯೋಗಾಚಾರ್ಯ ಭವರಲಾಲ ಆರ್ಯ ಹೇಳಿದರು.ಪಟ್ಟಣದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ 30 ದಿನಗಳವರೆಗೆ ಜರುಗಿದ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ನಿತ್ಯ ಆಚರಣೆ ಮಾಡುವುದರಿಂದ ಲಾಭ ಹೊಂದಲು ಸಾಧ್ಯ. ವಿವಿಧ ರೋಗಗಳ ನಿವಾರಣೆಗೆ ಯೋಗದ ಮಹತ್ವ ಜನಜಾಗ್ರತೆ ಮೂಡಿಸುವುದು ಅವಶ್ಯವಾಗಿದೆ. ಅಥಣಿಯಲ್ಲಿ ಜರುಗುವ ಯಾವುದೇ ಯೋಗ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರ ಭರವಸೆಯಂತೆ ಬರುವ 21 ಜೂನ್ ವಿಶ್ವಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ತಿಳಿಸಿದರು.
ಯೋಗ ಪ್ರಭಾರಿ ಕಿರಣ್ ಮನೋಳ್ಕರ್ ಮಾತನಾಡಿ ಪತಂಜಲಿ ಯೋಗ ಪೀಠ, ಯೋಗ ಋಷಿ ಸ್ವಾಮಿ ರಾಮದೇವಜಿ ಮಹಾರಾಜರ ಪ್ರೇರಣೆಯಿಂದ ಮಾರ್ಗದರ್ಶನದಲ್ಲಿ ಅಥಣಿ ಪಟ್ಟಣದಲ್ಲಿ ಸಹಯೋಗ ಶಿಕ್ಷಕರ ತರಬೇತಿ ಶಿಬಿರ ಯಶಸ್ವಿಯಾಗಿ ಜರುಗಿದ್ದು, ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.ಭವರಲಾಲ ಆರ್ಯ ನೇತೃತ್ವದಲ್ಲಿ ಯೋಗ ಪ್ರಾತ್ಯಕ್ಷಿಕೆ ಜರುಗಿತು. ದೇಶ ಕಾಯುವ ಸೈನಿಕರ ಅರೋಗ್ಯಕ್ಕಾಗಿ ಅವರ ಶ್ರೇಯಸ್ಸಿಗಾಗಿ ಅಗ್ನಿಹೋತ್ರ ಯಜ್ಞ ಕೈಗೊಂಡು ಹಾರೈಸಲಾಯಿತು.
ಈ ವೇಳೆ ಪತಂಜಲಿ ಯೋಗ ಸಮಿತಿ ರಾಜ್ಯ ಸಮಿತಿ ಪರವಾಗಿ ಸಮಾಜ ಸೇವಕ ರಫಿಕ್ ಡಾಂಗೆ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 170 ಜನರು ಯೋಗ ಶಿಕ್ಷಕ ತರಬೇತಿ ಪ್ರಮಾಣ ಪತ್ರ ಪಡೆದುಕೊಂಡು ತಮ್ಮ ಅನುಭವ ಹಂಚಿಕೊಂಡರು. ಪತಂಜಲಿ ಯೋಗ ಪೀಠದ ತಾಲೂಕು ಪ್ರಭಾರಿ ಎಸ್.ಕೆ.ಹೊಳೆಪ್ಪನವ ಸ್ವಾಗತಿಸಿದರು. ಚಿಕ್ಕೋಡಿ ಪತಂಜಲಿ ಯೋಗ ಪೀಠದ ಜಿಲ್ಲಾ ಪ್ರಭಾರಿ ಶಿವಾನಂದ ಮಾಲಗಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಗುರು ಎ.ಬಿ.ಪಾಟೀಲ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2025ರ ಪ್ರಶಸ್ತಿ ಪುರಸ್ಕೃತ, ಸಾಹಿತಿಗಳಾದ ಅಪ್ಪಾಸಾಹೇಬ ಅಲಿಬಾದಿ, ಹುಕ್ಕೇರಿ ಪ್ರಭಾರಿ ಬಾಲಕೃಷ್ಣ ಕೋಳೇಕರ್, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ, ಡಾ.ವಿನಾಯಕ ಚಿಂಚೋಳಿಮಠ, ಶಿವಾನಂದ ಬುರ್ಲಿ, ರಾವಸಾಬ್ ಬಿರಾದಾರ ಪಾಟೀಲ, ಶಂಕರ ಮಟ್ಟೇಪ್ಪನವರ, ಅಶೋಕ ಹೊಸೂರು, ದೇವೇಂದ್ರ ಬಿಸ್ವಾಗರ, ಶ್ರೀಶೈಲ ಪಾಟೀಲ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಜ್ಯೋತಿ ಪಾಟೀಲ, ಸದಾಶಿವ ಚಿಕ್ಕಟ್ಟಿ, ಸುರೇಖಾ ತಾಂಬಟ, ಸದಾಶಿವ ಮುದಗೌಡರ, ಅಪ್ಪಾಸಾಹೇಬ ತಾಂಬಟ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.