ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಡೆಂಘೀ ಜ್ವರ ನಿಯಂತ್ರಣ ಕೇವಲ ಆರೋಗ್ಯ ಇಲಾಖೆ ಕರ್ತವ್ಯವಲ್ಲ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಹೇಳಿದರು.ಪಟ್ಟಣದ ಇಸ್ಮಾಯಿಲ್ ಬಡಾವಣೆಯ ನಮ್ಮ ಕ್ಲಿನಿಕ್ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡೇಂಘೀ ಜ್ವರ ನಿಯಂತ್ರಣ ಕುರಿತು ಮನೆ ಮನೆಗೆ ಕರಪತ್ರ ಹಂಚುವ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಏಳು ತಾಲೂಕುಗಳಿಗೆ ಹೋಲಿಸಿದರೆ ಮದ್ದೂರು ತಾಲೂಕಿನಲ್ಲಿ ಡೆಂಘೀ ಜ್ವರ ನಿಯಂತ್ರಣದಲ್ಲಿದೆ. ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವ ಪರಿಣಾಮ ರೋಗ ನಿಯಂತ್ರಣದಲ್ಲಿದೆ ಎಂದರು.ಡೆಂಘೀ ಜ್ವರ ನಿಯಂತ್ರಣಕ್ಕೆ ಕೇವಲ ಸರ್ಕಾರ ಅಥವಾ ಆರೋಗ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಮಾತ್ರವಲ್ಲದೇ ಸಾರ್ವಜನಿಕರೂ ಡೆಂಘೀ ನಿಯಂತ್ರಣಕ್ಕೆ ಚಿಂತನೆ ನಡೆಸಬೇಕು. ಈ ರೋಗ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಸಾವು- ನೋವು ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಣಾಮಕಾರಿಯಾಗಿ ರೋಗ ನಿಯಂತ್ರಣಕ್ಕೆ ಕ್ರಮವಹಿಸುವುದು ಒಂದೇ ಪ್ರಮುಖ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು. ನಂತರ ಶಾಸಕ ಉದಯ್ ಅವರು ರಾಮ್ ರಹೀಂ ನಗರ ಮತ್ತು ಸಿದ್ಧಾರ್ಥ ನಗರ ಬಡಾವಣೆಗಳಿಗೆ ಅಧಿಕಾರಿಗಳೊಂದಿಗೆ ಪಾದಯಾತ್ರೆ ಮೂಲಕ ಮನೆಮನೆಗಳಿಗೆ ಭೇಟಿ ನೀಡಿ ಕರಪತ್ರ ಹಂಚುವ ಮೂಲಕ ಡೆಂಘೀ ರೋಗ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಕೋರಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮೋಹನ್, ಡೆಂಘೀ ಮತ್ತು ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತರಾಜು, ನೋಡಲ್ ಅಧಿಕಾರಿ ಡಾ.ಬೆಟ್ಟಸ್ವಾಮಿಗೌಡ, ತಾಲೂಕು ಆರೋಗ್ಯ ಅಧಿಕಾರಿ ಡಾ.ರವೀಂದ್ರ ಬಿ. ಗೌಡ, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ, ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ತಮ್ಮೇಗೌಡ, ಪುರಸಭೆ ಸದಸ್ಯರಾದ ಎಂ.ಬಿ. ಸಚಿನ್, ಕಮಲ್, ಅಜ್ ಲಾನ್ ಖಾನ್, ಮಾಜಿ ಉಪಾಧ್ಯಕ್ಷ ಮನ್ಸೂರ್ ಖಾನ್, ಮುಖಂಡರಾದ ಪೈರೂಜ್ ಹಾಗೂ ಆರೋಗ್ಯಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.----
ಜಿಲ್ಲೆ, ರಾಜ್ಯಕ್ಕೆ ಯೋಜನೆ ದೊರಕಿಸಲು ಎಚ್ ಡಿಕೆ ವಿಫಲ: ಉದಯ್ಕನ್ನಡಪ್ರಭ ವಾರ್ತೆ ಮದ್ದೂರುಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆ ಮತ್ತು ರಾಜ್ಯಕ್ಕೆ ಯಾವುದೇ ಯೋಜನೆ ದೊರಕಿಸುವಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ತಮ್ಮ ಪ್ರಭಾವ ಎಷ್ಟಿದೆ ಎನ್ನುವುದನ್ನು ತೋರ್ಪಡಿಸಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ವ್ಯಂಗ್ಯವಾಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದ ಜನರು ಬಹು ನಿರೀಕ್ಷೆ ಗಳೊಂದಿಗೆ ಎಚ್. ಡಿ. ಕುಮಾರಸ್ವಾಮಿ ಅವರನ್ನು ಅತ್ಯಧಿಕ ಬಹುಮತಗಳಿಂದ ಆಯ್ಕೆ ಮಾಡಿದ್ದಾರೆ. ಅವರು ರಾಜ್ಯಕ್ಕೆ ಮತ್ತು ಜಿಲ್ಲೆಗೆ ಯಾವುದೇ ಯೋಜನೆಗಳನ್ನು ದೊರಕಿಸಿಕೊಡದೇ ಜನರ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಕುಮಾರಸ್ವಾಮಿ ಸೇರಿ 19 ಮಂದಿ ಸಂಸದರು ರಾಜ್ಯದಿಂದ ಆಯ್ಕೆಯಾಗಿದ್ದಾರೆ. ಈ ಸಂಸದರು ರಾಜ್ಯದ ಯೋಜನೆಗಳಿಗೆ ಕೊಡುಗೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಜಿಲ್ಲೆಗೆ ಬೃಹತ್ ಕೈಗಾರಿಕೆ ಸ್ಥಾಪನೆ, ಮೈ ಶುಗರ್ ಅಭಿವೃದ್ಧಿಗೆ ವಿಶೇಷ ಅನುದಾನ, ರೈಲು ಮಾರ್ಗ ಅಥವಾ ರಾಷ್ಟ್ರೀಯ ಹೆದ್ದಾರಿ ಸೇರಿ ಯಾವುದೇ ಒಂದು ಕೊಡುಗೆ ನೀಡಬಹುದಾಗಿತ್ತು. ಆದರೆ, ಈ ಯಾವುದೇ ಯೋಜನೆಗಳ ಬಗ್ಗೆ ಕನಿಷ್ಠ ಕಾಳಜಿ ಇಲ್ಲ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ ಎಂದು ಆರೋಪಿಸಿದರು.ಎನ್ ಡಿಎ ಸರ್ಕಾರ ರಚನೆಗೆ ಜೆಡಿಯು ಮತ್ತು ಟಿಡಿಪಿ ಪಕ್ಷಗಳು ಬೆಂಬಲ ನೀಡಿವೆ ಎಂಬ ಕಾರಣಕ್ಕೆ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಬಿಜೆಪಿ ಸರ್ಕಾರವು ತಮ್ಮ ಬಜೆಟ್ ನಲ್ಲಿ ಕೋಟಿ ಕೋಟಿ ಅನುದಾನ ನೀಡುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.
ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಜಿಎಸ್ ಟಿ ಸೇರಿದಂತೆ ಯಾವುದೇ ತೆರಿಗೆಗಳ ಸಂಗ್ರಹದಿಂದ ರಾಜ್ಯಕ್ಕೆ ನಮ್ಮ ಪಾಲು ನೀಡುತ್ತಿರುವುದು ದುರಂತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.