ಸಾರಾಂಶ
ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನೂ ಅರಿವು ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಷ್ಟಗಿಮಾನವ ಕಳ್ಳ ಸಾಗಾಣಿಕೆಯು ಒಂದು ದೊಡ್ಡ ಜಾಲವಾಗಿದ್ದು, ಸಾರ್ವಜನಿಕರು ಕಾನೂನಿನ ಬಗ್ಗೆ ಅರಿವು ಪಡೆದುಕೊಂಡು ಇದರ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಯೊಂದಿಗೆ ಜೊತೆಗೆ ಕೈಜೋಡಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯ ಅಂಗವಾಗಿ ಕಾನೂನೂ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ದೇಶದ ಜನರಲ್ಲಿ ಕಾನೂನಿನ ಅರಿವು ಸಮಸ್ಯೆ ಬಹಳ ಇದೆ. ಜನರಲ್ಲಿ ಕಾನೂನಿನ ಬಗ್ಗೆ ಅರಿವೇ ಇಲ್ಲ. ನೂರಕ್ಕೆ ಹತ್ತು ಜನವಾದರೂ ಕಾನೂನು ಅರಿಯುವುದು ಅವಶ್ಯ ಇದೆ. ಜನರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಭಾಗಿಯಾಗಬೇಕು. ವೇಶ್ಯಾವಾಟಿಕೆ, ಭಿಕ್ಷಾಟನೆ ಹೀಗೆ ಹತ್ತು ಹಲವು ಕಾರಣಗಳಿಗಾಗಿ ಮಾನವ ಕಳ್ಳ ಸಾಗಾಣಿಕೆ ಹೆಚ್ಚಾಗಿ ನಡೆಯುತ್ತದೆ. ಆದ್ದರಿಂದ ಸಾರ್ವಜನಿಕರು ಇದರ ಬಗ್ಗೆ ಎಚ್ಚೆತ್ತುಕೊಂಡು ಇಂಥಹ ಪ್ರಕರಣ ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ತಿಳಿಸಬೇಕು ಎಂದರು.
ಸಿಪಿಐ ಯಶವಂತ ಬಿಸನಳ್ಳಿ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ವಿಸ್ತಾರದ ಜಾಲ ಹರಡಿಕೊಂಡಿದ್ದು, ಕಣ್ಣ ಮುಂದೆ ನಡೆಯುತ್ತಿದ್ದರು ಸಹಿತ ಕಂಡು ಹಿಡಿಯಲು ಆಗುತ್ತಿಲ್ಲ. ಸಾರ್ವಜನಿಕರು ಮಾಹಿತಿ ನೀಡಿದಾಗ ಮಾತ್ರ ನಮಗೆ ತಿಳಿಯುತ್ತದೆ. ಆದ್ದರಿಂದ ಕಾನೂನು ತಿಳುವಳಿಕೆ ಅತ್ಯವಶ್ಯಕವಾಗಿದೆ. ಎಲ್ಲರೂ ಕಾನೂನು ತಿಳಿದಾಗ ಮಾತ್ರ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದರು.ಪಿಎಸ್ಐ ಹನಮಂತಪ್ಪ ತಳವಾರ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ಘೋರ ಸಮಸ್ಯೆಯಾಗಿ ಕಾಡುತ್ತಿದೆ. ವಾಣಿಜ್ಯ, ಲೈಂಗಿಕ, ಮಹಿಳೆಯರ ಶೋಷಣೆ ಇತರ ಉದ್ದೇಶಗಳಿಗಾಗಿ ಕಳ್ಳಸಾಗಾಣಿಕೆ ಆಗುತ್ತಿದ್ದು, ಲಕ್ಷಾಂತರ ಜನ ಈ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದು, ಭಾರತೀಯರು ಮದ್ಯಪ್ರಾಚ್ಯಕ್ಕೆ ಮಾರಾಟವಾಗುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಮುಖ್ಯವಾದ ಕಾರಣ ಶಿಕ್ಷಣದ ಕೊರತೆ, ಅರಿವಿನ ಕೊರತೆ, ಆರ್ಥಿಕ ತೊಂದರೆ, ಬಡತನ ಹೀಗೆ ಅನೇಕ ಕಾರಣಗಳಿಂದ ಮಾನವ ಕಳ್ಳಸಾಗಾಣಿಕೆ ಕಂಡುಬರುತ್ತಿದೆ. ಆದ್ದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳಿಯ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದರು.
ಈ ಸಂದರ್ಭ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ಸರ್ಕಾರಿ ಸಹಾಯಕ ಅಭಿಯೋಜಕ ರಾಯನಗೌಡ ಎಲ್., ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ ದೊಡ್ಡಮನಿ, ಮೈನುದ್ದೀನ ವಕೀಲರು ಸೇರಿದಂತೆ ಅನೇಕರು ಇದ್ದರು.