ಕನ್ನಡ ಸಾಹಿತ್ಯ ಸಮ್ಮೇಳನಗಳ ಕುರಿತ ವಿವಾದಗಳು ಹೊಸದೇನಲ್ಲ: ಡಾ.ಮಹೇಶ್‌ ಜೋಶಿ

| Published : Oct 18 2024, 12:01 AM IST

ಕನ್ನಡ ಸಾಹಿತ್ಯ ಸಮ್ಮೇಳನಗಳ ಕುರಿತ ವಿವಾದಗಳು ಹೊಸದೇನಲ್ಲ: ಡಾ.ಮಹೇಶ್‌ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯಸರ್ಕಾರ ಮುಂದಿನ ಸೋಮವಾರ 10 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಿದೆ. ಸಮ್ಮೇಳನ ಹತ್ತಿರ ಮಾಡಿಕೊಂಡು ಉಳಿದ 20 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ಕುರಿತು ವಿವಾದಗಳು ಉಂಟಾಗುತ್ತಿರುವುದು ಇದೇ ಮೊದಲೇನಲ್ಲ. ಹತ್ತು ಹಲವಾರು ವಿವಾದಗಳು ಹಿಂದೆಯೂ ಸೃಷ್ಟಿಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್‌ ಜೋಶಿ ಹೇಳಿದರು.

1943ರಿಂದಲೂ ವಿವಾದಗಳು ಸೃಷ್ಟಿಯಾಗುತ್ತಲೇ ಬಂದಿವೆ. ಸಾಹಿತ್ಯ ಸಮ್ಮೇಳನಕ್ಕೆ ದ.ರಾ.ಬೇಂದ್ರೆ ಅಧ್ಯಕ್ಷರಾಗಿ ಆಯ್ಕೆಯಾದಾಗ ಪ್ರಗತಿಶೀಲ ಸಾಹಿತ್ಯಕ್ಕೆ ಅವಕಾಶ ನೀಡಲಿಲ್ಲವೆಂಬ ಕೂಗು ಶ್ರೀರಂಗ ಅವರಿಂದ ಕೇಳಿಬಂದಿತ್ತು. 1970ರಲ್ಲಿ ಡಾ.ದೇ.ಜವರೇಗೌಡರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದಾಗ ಕಿರಿ ವಯಸ್ಸಿನಲ್ಲೇ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತೆಂಬ ಕಾರಣಕ್ಕೆ ಕಾರ್ಯಕಾರಿ ಸಮಿತಿ ಒಪ್ಪಿಗೆ ಪಡೆಯದೆ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ಏಕಪಕ್ಷೀಯ, ಸ್ವಜಾತಿ, ಪಕ್ಷಪಾತಿಯಾಗಿ ಆಯ್ಕೆ ಮಾಡಿದ್ದರೆಂಬ ಆರೋಪಗಳು ಕೇಳಿಬಂದಿದ್ದವು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1990ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ.ಆರ್‌.ಸಿ.ಹಿರೇಮಠ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಅವರು ಸಂಶೋಧಕರೆಂದೂ, ಬರಹಗಾರರಲ್ಲವೆಂದೂ ಪರ್ಯಾಯ ಸಮ್ಮೇಳನ ನಡೆಸಲಾಗಿತ್ತು. ಹಾವೇರಿಯಲ್ಲಿ 86ನೇ ಸಮ್ಮೇಳನಾಧ್ಯಕ್ಷರಾಗಿ ಡಾ.ದೊಡ್ಡರಂಗೇಗೌಡರನ್ನು ಆಯ್ಕೆ ಮಾಡಿದಾಗ ಅವರು ಕೇವಲ ಗೀತರಚನಕಾರರು. ಕನ್ನಡ ಸಾಹಿತ್ಯಕ್ಕೆ ಅವರ ಪ್ರಮುಖ ಕೊಡುಗೆ ಇಲ್ಲ ಎಂಬ ಆಕ್ಷೇಪ ಕೇಳಿಬಂದಿತ್ತು . ಹೀಗೆ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವಾರು ವಿವಾದಗಳು ಹಿಂದೆಯೂ ಸೃಷ್ಟಿಯಾಗಿದ್ದವು ಎಂದರು.

ವಿವಾದಕ್ಕೆ ನಾನು ಕಾರಣನಲ್ಲ:

ಸಮ್ಮೇಳನಾಧ್ಯಕ್ಷರಾಗಿ ಸಾಹಿತಿಗಳಾಗಬೇಕೋ, ಸಾಹಿತ್ಯೇತರರು ಆಗಬೇಕೋ ಎಂಬ ಬಗ್ಗೆ ಸಾರ್ವಜನಿಕ ಸಲಹೆ, ಸೂಚನೆಗಳು, ಅಭಿಪ್ರಾಯಗಳು ಕೇಳಿಬಂದು ಸಾಮಾಜಿಕ ಜಾಲ ತಾಣಗಳಲ್ಲಿಯೂ ಹರಿದಾಡುತ್ತಿವೆ. ಆ ಹಿನ್ನೆಲೆಯಲ್ಲಿ ಸ್ಪಷ್ಟ ಚಿತ್ರಣ ಕೊಡುವುದು ಅನಿವಾರ್ಯವಾಗಿದೆ. ಈ ಚರ್ಚೆಯನ್ನು ಕನ್ನಡ ಸಾಹಿತ್ಯ ಪರಿಷತ್‌ ಆರಂಭಿಸಿಲ್ಲ. ವಿವಾದಕ್ಕೆ ನಾನೂ ಸಹ ಕಾರಣನಲ್ಲ. ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆಗೆ ನಾವು ಕಿವಿಯಾಗಿದ್ದೇವೆ, ಕಣ್ಣುಗಳನ್ನು ತೆರೆದು ನೋಡುತ್ತಿದ್ದೇವೆ. ಚರ್ಚೆಯಲ್ಲಿ ಬರುವ ವಿಷಯಗಳನ್ನು, ಸಂಗತಿಗಳನ್ನು ಒಪ್ಪಬಹುದು ಇಲ್ಲವೇ ನಿರಾಕರಿಸಬಹುದು ಎಂದು ಹೇಳಿದರು.

ಇಂತಹ ಚರ್ಚೆಗಳು ತೀವ್ರವಾಗಿ ನಡೆದಷ್ಟು ಉತ್ತಮ ಫಲಿತಾಂಶ ದೊರಕುತ್ತದೆ. ಹೊಸ ಬದಲಾವಣೆಗೆ ನಾಂದಿ ಹಾಡುತ್ತವೆ. ಚರ್ಚೆಗಳು ಪ್ರಜಾಸತ್ತೆಯ ಜೀವಾಳ. ಪ್ರಜಾಪ್ರಭುತ್ವದಡಿ ಚುನಾಯಿತ ಅಧ್ಯಕ್ಷನಾಗಿ ಸಾರ್ವಜನಿಕ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾಗುತ್ತದೆ. ಸಲಹೆ, ಸೂಚನೆಗಳು ಅಭಿಪ್ರಾಯಗಳನ್ನು ನೇರವಾಗಿ ಕಾರ್ಯರೂಪಕ್ಕೆ ತರದೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸ್ವಾಭಿಮಾನಕ್ಕೆ ಬೆಲೆ ಇಲ್ಲವೇ?:

ವಿವಿಧ ಕ್ಷೇತ್ರಗಳ ಸಾಧಕರಿಗೆ ಬೇರೆ ವೇದಿಕೆಗಳಲ್ಲಿ ಅವಕಾಶವಿದೆ. ಸಾಹಿತಿಗಳಿಗೆ ಇರುವುದು ಸಾಹಿತ್ಯ ಸಮ್ಮೇಳನ ಒಂದೇ. ಇನ್ನಾವುದೂ ಇಲ್ಲ ಎಂಬ ವಾದಕ್ಕೆ ಸಾಹಿತಿಗಳಿಗಾಗಿಯೇ ಜ್ಞಾನಪೀಠ ಪ್ರಶಸ್ತಿ ಇದೆ. ಕೇಂದ್ರ- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿವೆ. ನಮಗೆ ಯಾವ ಮನ್ನಣೆ ಇದೆ. ನಾಡು- ನುಡಿಗಾಗಿ, ಕನ್ನಡ ಸ್ವಾಭಿಮಾನಕ್ಕೆ ಹೋರಾಡುತ್ತಿರುವ ಸಂಘಟಕರು, ಹೋರಾಟಗಾರರು, ಪರಿಚಾರಕರಿಗೆ ಮನ್ನಣೆ ದೊರಕದೆ ಜನಪ್ರಿಯ ಸಾಹಿತಿಗಳನ್ನೇ ಪರಿಗಣಿಸಲಾಗುತ್ತಿದೆ ಎಂಬ ಆಪಾದನೆಯೂ ಕೇಳಿ ಬಂದಿದೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡ ಹೆಸರುಗಳು:

ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಡಾ.ಲತಾ ರಾಜಶೇಖರ್‌, ಡಾ.ರಾಮೇಗೌಡ (ರಾಗೌ) , ಡಾ.ನಾಗತೀಹಳ್ಳಿ ಚಂದ್ರಶೇಖರ್‌, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಇಂದಿರಾ ಕೃಷ್ಣಪ್ಪ, ಪ್ರೊ.ಮಾಲತಿ ಪಟ್ಟಣಶೆಟ್ಟಿ, ಪ್ರೊ.ಕೆ.ಎಸ್‌.ಭಗವಾನ್‌, ಎಚ್‌.ಡಿ.ದೇವೇಗೌಡ, ದೇವನೂರು ಮಹಾದೇವ, ಕುಂ.ವೀರಭದ್ರಪ್ಪ, ಗಿರೀಶ್‌ ಕಾಸರವಳ್ಳಿ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಜೆ.ಎಂ.ರಾಜಶೇಖರ್‌ ಎಂಬುವರು ತಮ್ಮ ಹೆಸರನ್ನು ತಾವೇ ಶಿಫಾರಸು ಮಾಡಿಕೊಂಡಿದ್ದಾರೆ. ನಾನು ಕನ್ನಡಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದೇನೆ. ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ನನ್ನನ್ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದಿರುವುದು ವಿಶೇಷವಾಗಿದೆ ಎಂದರು.

ಮುಕುಂದರಾಜ್‌ಗೆ ಸವಾಲು:

ಸಹೃದಯರು, ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದರೆ ಇಂತಹ ಚರ್ಚೆಗೆ ಅವಕಾಶವಿರುತ್ತಿರಲಿಲ್ಲ ಎಂಬ ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್‌.ಎಲ್‌.ಮುಕುಂದರಾಜ್‌ ಮಾತಿಗೆ ತಿರುಗೇಟು ನೀಡಿದ ಡಾ.ಮಹೇಶ್‌ ಜೋಶಿ, ನಾನು ಸರ್ಕಾರದಿಂದ ನಾಮನಿರ್ದೇಶನಗೊಂಡ ಅಧ್ಯಕ್ಷನಲ್ಲ. ಚುನಾವಣೆಗೆ ಸ್ಪರ್ಧಿಸಿ ಪರಿಷತ್‌ ಸದಸ್ಯರಿಂದ ಆಯ್ಕೆಯಾದವನು. ನನ್ನೆದುರು ಸ್ಪರ್ಧಿಸಿದ 20 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಅವರಿಗೆ ಧೈರ್ಯವಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದರು.

ಪರಿಷತ್‌ ಅಧ್ಯಕ್ಷರಾಗಿದ್ದ ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿ, ಡಾ.ಮನುಬಳಿಗಾರ್‌ ಸೇರಿದಂತೆ ಇತರರೇನು ಸಾಹಿತಿಗಳಾಗಿದ್ದರೇ. ಮಾತನಾಡುವಾಗಿ ಜಾಗೃತರಾಗಿರಬೇಕು. ನಾವೇನೂ ಸಾಹಿತಿಗಳ ವಿರೋಧಿಗಳೇನಲ್ಲ. ಸಾಹಿತ್ಯೇತರರಿಂದ ಬಂದಿರುವ ಅಭಿಪ್ರಾಯಗಳನ್ನು ತೆರೆದಿಟ್ಟಿದ್ದೇವೆ. ಯಾವುದೂ ಅಂತಿಮ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಬೇಕೆಂಬ ನಿಬಂಧನೆಯೇನೂ ಇಲ್ಲ. ಇಲ್ಲಿಯವರೆಗೆ ನಡೆದಿರುವ ಸಮ್ಮೇಳನಗಳಲ್ಲೂ ಮಹಿಳಾ ಸಾಹಿತಿಗಳಿಗೆ ಸಮಾನ ಪ್ರಾಶಸ್ತ್ಯ ನೀಡಿಲ್ಲ. ಮೇಲ್ಜಾತಿಯವರಿಗೆ, ಶೋಷಿತ ಸಮುದಾಯದವರಿಗೆ, ಪ್ರಗತಿಪರ ಸಾಹಿತಿಗಳಿಗೆ ಸಮಾನವಾದ ಅವಕಾಶ ನೀಡಿಲ್ಲವೆಂಬ ಕೊಂಕು ಮಾತುಗಳೂ ಕೇಳಿಬಂದಿವೆ. ಹಾಗಾಗಿ ಸಾಹಿತ್ಯ ಪರಿಷತ್‌ಗೆ ಮಡಿವಂತಿಕೆ ಇರಬಾರದು. ಅದನ್ನು ಜನಸಾಮಾನ್ಯರ ಪರಿಷತ್ತಾಗಿಸಿದ್ದು, ಹೊಸತನಕ್ಕೆ ತೆರೆದುಕೊಳ್ಳುವಂತೆ ಮಾಡುವುದು ನಮ್ಮ ಆಶಯವಾಗಿದೆ ಎಂದರು.

ಮುಂದಿನವಾರ 10 ಕೋಟಿ ರು. ಬಿಡುಗಡೆ:

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯಸರ್ಕಾರ ಮುಂದಿನ ಸೋಮವಾರ 10 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಿದೆ. ಸಮ್ಮೇಳನ ಹತ್ತಿರ ಮಾಡಿಕೊಂಡು ಉಳಿದ 20 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಿದೆ ಎಂದ ಡಾ.ಮಹೇಶ್‌ ಜೋಶಿ, ಸಮ್ಮೇಳನದ ಕಾರ್ಯಚಟುವಟಿಕೆಗಳು ಯಾವುದೇ ಗೊಂದಲಗಳಿಲ್ಲದೆ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ, ಸುಗಮವಾಗಿ ನಡೆಯುತ್ತಿವೆ. ಹಾವೇರಿ ಮಾದರಿಯಲ್ಲೇ ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ, ವ್ಯವಸ್ಥಿತವಾಗಿ ನಡೆಸಲು ನಿಶ್ಚಯಿಸಲಾಗಿದೆ ಎಂದು ಹೇಳಿದರು.