ಸಾರಾಂಶ
ಕೊಪ್ಪಳ:
ಇಲ್ಲಿಯ ಶ್ರೀ ರಾಘವೇಂದ್ರ ಮಠದ ಆಡಳಿತವು ಮಂತ್ರಾಲಯ ಮಠದ ವ್ಯಾಪ್ತಿಗೆ ಬರುತ್ತದೆ ಎಂದು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರಿಗಳು ಬುಧವಾರ ಆಶೀರ್ವಚನದ ಸಂದರ್ಭದಲ್ಲಿ ಹೇಳಿದ್ದ ಮಾತು, ಇಲ್ಲಿಯ ಭಕ್ತರನ್ನು ಕೆರಳಿಸಿದ್ದು, ಶ್ರೀಗಳು ವಾಸ್ತವ್ಯ ಮಾಡಿದ್ದ ಭಕ್ತರೊಬ್ಬರ ನಿವಾಸಕ್ಕೆ ಮಧ್ಯರಾತ್ರಿ ತೆರಳಿದ ಭಕ್ತರ ದಂಡು ಪ್ರತಿಭಟನೆ ನಡೆಸಿ ಮಂತ್ರಾಲಯ ಮಠಕ್ಕೆ ಕೊಪ್ಪಳ ರಾಘವೇಂದ್ರ ಮಠ ಬಿಟ್ಟುಕೊಡುವ ಮಾತೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದರಿಂದ ಮುನಿಸಿಕೊಂಡ ಶ್ರೀಗಳು ಗುರುವಾರ ಪುನಃ ಕೊಪ್ಪಳ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದರೂ ಮಠದೊಳಗೆ ಪ್ರವೇಶಿಸದೇ ಬೇಸರದಿಂದಲೇ ವಾಪಸ್ ತೆರಳಿದರು. ಕೊಪ್ಪಳ ಶ್ರೀ ರಾಘವೇಂದ್ರ ಮಠದಲ್ಲಿಯೇ ಶ್ರೀಗಳ ಗುರುವಾರದ ಪೂಜೆ ನಿಗದಿಯಾಗಿದ್ದರೂ ಸಹ ಮಾಡದೆ ಆನೆಗೊಂದಿಗೆ ತೆರಳಿ, ಅಲ್ಲಿನ ರಾಘವೇಂದ್ರ ಮಠದಲ್ಲಿ ಪೂಜೆ ಮಾಡಿಕೊಂಡು ಮಂತ್ರಾಲಯಕ್ಕೆ ತೆರಳಿದ್ದಾರೆ.ಏನಿದು ವಿವಾದ:
ಕೊಪ್ಪಳದಲ್ಲಿರುವ ಶ್ರೀರಾಘವೇಂದ್ರ ಮಠವು ಯಾವುದೇ ಮಠದ ಸುಪರ್ದಿಗೆ ಇರಲಿಲ್ಲ. ಇದನ್ನು ಸ್ವತಂತ್ರವಾಗಿಯೇ ಇಲ್ಲಿದ್ದ ಭಕ್ತರೇ ಆಡಳಿತ ನಡೆಸುತ್ತಾ ಬಂದಿದ್ದರು. ಶ್ರೀ ಜಗನ್ನಾಥ (ಜಗ್ಗಣ್ಣ ) ಎನ್ನುವವರೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮೊದಲ ಬಾರಿಗೆ ಬುಧವಾರ ಕೊಪ್ಪಳ ಶ್ರೀರಾಘವೇಂದ್ರ ಮಠಕ್ಕೆ ಆಗಮಿಸಿದ್ದ ಮಂತ್ರಾಲಯದ ಶ್ರೀಗಳು, ಉಪದೇಶ ನೀಡುವ ವೇಳೆ ಇಲ್ಲಿನ ಶ್ರೀರಾಘವೇಂದ್ರ ಮಠವೂ ಮಂತ್ರಾಲಯ ಮಠದ ಅಧೀನದ ಮಠವಾಗಿದೆ. 1971ರಲ್ಲಿಯೇ ಇದನ್ನು ಮಂತ್ರಾಲಯ ಮಠಕ್ಕೆ ಬರೆದುಕೊಡಲಾಗಿದೆ. ಈ ಹಿಂದೆಯೂ ಈ ಮಠ ಸ್ಥಾಪಿಸುವ ವೇಳೆಯಲ್ಲಿಯೂ ನಮ್ಮ ಗುರುಗಳೇ ಬಂದು ಆಶೀರ್ವಾದ ಮಾಡಿದ್ದಾರೆ ಮತ್ತು ಅಲ್ಲಿಂದಲೇ ಮಂತ್ರಾಕ್ಷತೆ ತಂದು, ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಿದ್ದರು. ಶ್ರೀಗಳು ಮಾತನಾಡುವ ವೇಳೆ ಮತ್ತು ಮಾತನಾಡಿದ ನಂತರವೂ ಭಕ್ತರು ಸುಮ್ಮನೇ ಇದ್ದರು. ಬಳಿಕ ಮಂತ್ರಾಲಯ ಶ್ರೀಗಳು ಸ್ಥಳೀಯರೊಬ್ಬರ ಮನೆಯಲ್ಲಿ ರಾತ್ರಿ ವಾಸ್ತವ್ಯ ಮಾಡಲು ತೆರಳಿದ್ದರು. ತಡರಾತ್ರಿ ಶ್ರೀರಾಘವೇಂದ್ರ ಮಠದಲ್ಲಿ ಜಮಾಯಿಸಿದ ಭಕ್ತರು ರೊಚ್ಚಿಗೆದ್ದು, ಮಂತ್ರಾಲಯ ಶ್ರೀಗಳು ತಂಗಿದ್ದ ಮನೆಗೆ ತೆರಳಿ ಪ್ರತಿಭಟನೆಯ ಘೋಷಣೆ ಕೂಗಿದರು. ಶ್ರೀಗಳು ಆಡಿದ್ದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಇದು ದೊಡ್ಡ ಅವಾಂತರಕ್ಕೆ ಕಾರಣವಾಯಿತು.ಮಧ್ಯರಾತ್ರಿಯ ವರೆಗೂ ಗಲಾಟೆ ಜೋರಾಯಿತು. ಕೊನೆಗೆ ಮಂತ್ರಾಲಯ ಶ್ರೀಗಳೇ ಆಚೆ ಬಂದು, ಪ್ರತಿಭಟನೆ ನಿರತ ಭಕ್ತರಿಗೆ ತಿಳಿ ಹೇಳಿದರು. ನಾವೇನು ಕೊಪ್ಪಳ ಶ್ರೀರಾಘವೇಂದ್ರ ಮಠವನ್ನು ಕಬಳಿಸಲು ಬಂದಿಲ್ಲ ಎಂದು ಹೇಳಿದ ಮೇಲೆಯೇ ಪರಿಸ್ಥಿತಿ ತಿಳಿಯಾಯಿತಾದರೂ ಪರಸ್ಪರ ದೋಷಾರೋಪಗಳು ನಡೆದವು. ಕೊಪ್ಪಳ ಮಠವನ್ನು ಶ್ರೀಮಂತ್ರಾಲಯ ಮಠಕ್ಕೆ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎನ್ನುವ ಒಂದು ಗುಂಪು ಮತ್ತು ಇದು ಮಂತ್ರಾಲಯ ಮಠದ ಆಸ್ತಿಯೇ ಎನ್ನುವ ಮತ್ತೊಂದು ಗುಂಪಿನ ನಡುವೆ ಮಾತಿನ ಚಕಮಕಿ ನಡೆಯಿತು.
ರದ್ಧಾದ ಕಾರ್ಯಕ್ರಮ:ಗುರುವಾರ ಕೊಪ್ಪಳ ಶ್ರೀರಾಘವೇಂದ್ರ ಮಠದಲ್ಲಿ ಮಂತ್ರಾಲಯ ಶ್ರೀಗಳ ಸಾಮೂಹಿಕ ಪಾದಪೂಜೆ ಹಾಗೂ ಮಂತ್ರಾಲಯ ಶ್ರೀಗಳಿಂದ ಮೂಲರಾಮದೇವರ ಪೂಜಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸುಬುಧೇಂದ್ರ ತೀರ್ಥ ಶ್ರೀಗಳು ಕೊಪ್ಪಳ ಶ್ರೀರಾಘವೇಂದ್ರ ಮಠಕ್ಕೆ ಆಗಮಿಸಿದರೂ ಮಠದೊಳಗೆ ಹೋಗಲಿಲ್ಲ ಮತ್ತು ಪೂಜೆ ಮಾಡಿಕೊಳ್ಳಲಿಲ್ಲ. ಬದಲಾಗಿ ಹೊರಗೆ ನಿಂತುಕೊಂಡು, ನಮಸ್ಕಾರ ಮಾಡಿ, ಎಲ್ಲ ಕಾರ್ಯಕ್ರಮಗಳನ್ನು ಕಾರಣಾಂತರಳಿಂದ ರದ್ದು ಮಾಡಿರುವುದಾಗಿ ಹೇಳಿ, ತೆರಳಿದರು. ಬಳಿಕ ಆನೆಗೊಂದಿಗೆ ತೆರಳಿ, ಅಲ್ಲಿ ಮೂಲರಾಮದೇವರ ಪೂಜೆ ನೆರವೇರಿಸಿದರು.ಕೊಪ್ಪಳ ಶ್ರೀರಾಘವೇಂದ್ರಮಠವನ್ನು ನಾವು ಕಬ್ಜಾ ಪಡೆಯುವ ಬಯಕೆ ಇಲ್ಲ. ಇಲ್ಲಿ ಸುಸೂತ್ರವಾಗಿ ನಡೆದುಕೊಂಡು ಹೋಗುವುದು ಹೋಗಲಿ, ನಾವು ಯಾರನ್ನು ಸಹ ಬದಲಾಯಿಸುವುದಿಲ್ಲ. ಆದರೂ ಭಕ್ತರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಕೊಪ್ಪಳ ಶ್ರೀರಾಘವೇಂದ್ರಮಠವನ್ನು ಮಂತ್ರಾಲಯ ಮಠಕ್ಕೆ ಬರೆದು ನೀಡಿರುವ ದಾಖಲೆಗಳು ನಮ್ಮ ಮಠದಲ್ಲಿವೆ. ಆದರೂ ಸಹ ನಾವು ಭಕ್ತರೊಂದಿಗೆ ಚರ್ಚೆ ಮಾಡಿ, ಅವರ ಇಷ್ಟದಂತೆಯೇ ತೀರ್ಮಾನ ಮಾಡುತ್ತೇವೆ. ಆತಂಕ ಬೇಡ ಎಂದು ಶ್ರೀಸುಬುಧೇಂದ್ರ ತೀರ್ಥ ಶ್ರೀಗಳು ಹೇಳಿದ್ದಾರೆ. ಇದು ನಮ್ಮ ಶ್ರೀರಾಘವೇಂದ್ರಮಠದ ಆಂತರಿಕ ಸಮಸ್ಯೆಯಾಗಿದೆ. ಇದನ್ನು ನಮ್ಮ ನಮ್ಮಲ್ಲಿಯೇ ಇತ್ಯರ್ಥ ಮಾಡಿಕೊಳ್ಳುತ್ತೇವೆ. ಕೊಪ್ಪಳ ಶ್ರೀರಾಘವೇಂದ್ರ ಮಠ ಯಾರ ಸುಪರ್ದಿಗೆ ಇರದೆ, ಸ್ವತಂತ್ರವಾಗಿ ಇರಬೇಕು ಎಂದು ಕೊಪ್ಪಳ ಶ್ರೀರಾಘವೇಂದ್ರ ಮಠದ ಉಸ್ತುವಾರಿ ಜಗನ್ನಾಥ ಹೇಳಿದ್ದಾರೆ.ಭಕ್ತರಿಗೆ ಪುಣ್ಯ ಧಾರೆ ಎರೆದ ರಾಯರು:
ಶ್ರೀರಾಘವೇಂದ್ರ ರಾಯರು ತಾವೇ ಪಡೆದಿದ್ದಕ್ಕಿಂತ ತಮ್ಮ ಪುಣ್ಯದ ಮೂಲಕ ಭಕ್ತರು ಕೇಳಿದ್ದನ್ನು ಧಾರೆ ಎರೆದಿದ್ದಾರೆ ಎಂದು ಮಂತ್ರಾಲಯದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹೇಳಿದರು.ನಗರದ ರಾಘವೇಂದ್ರ ಮಠಕ್ಕೆ ಪ್ರಥಮ ಬಾರಿಗೆ ಆಗಮಸಿದ್ದ ಅವರು, ಭಕ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಉಪದೇಶ ನೀಡಿದರು.
ರಾಯರು ಕಲ್ಪವೃಕ್ಷವಿದ್ದಂತೆ. ಅವರು ಭಕ್ತರಿಗಾಗಿಯೇ ತಮ್ಮ ತ್ಯಾಗದ ಮೂಲಕ ಪುಣ್ಯವನ್ನು ಧಾರೆ ಎರೆದಿದ್ದಾರೆ. ಅವರು ಪಡೆದಿದ್ದಕ್ಕಿಂತ ಭಕ್ತರಿಗೆ ಕೊಟ್ಟಿದ್ದೇ ಹೆಚ್ಚು. ಸದಾ ಭಕ್ತರ ಹಿತ ಕಾಯುತ್ತಾರೆ ಎಂದು ಬಣ್ಣಿಸಿದರು.ರಾಯರು ಕೇವಲ ತಮ್ಮನ್ನರಿಸಿ ಬಂದ ಭಕ್ತರಿಗೆ ಅಷ್ಟೇ ಅಲ್ಲ, ಸಮಸ್ತ ಮನುಕುಲದ ಉದ್ಧಾರ ಮಾಡಿದ್ದಕ್ಕಾಗಿಯೇ ಅವರನ್ನು ವಿಶ್ವಗುರು ಎನ್ನಲಾಗುತ್ತದೆ ಎಂದರು.
ಕೊಪ್ಪಳ ರಾಘವೇಂದ್ರ ಮಠದಲ್ಲಿಯೂ ಅತ್ಯುತ್ತಮ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ಅವುಗಳನ್ನು ಇಲ್ಲಿರುವವರು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ಮೂಲಕ ಶ್ರೀಮಠದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಕೊಪ್ಪಳ ಶ್ರೀರಾಘವೇಂದ್ರ ಮಠವು ಮಂತ್ರಾಯಲಯದ ಮಠದ ಆಸ್ತಿಯಾಗಿದೆ. 1971ರಲ್ಲಿಯೇ ಇದನ್ನು ಮಂತ್ರಾಲಯ ಮಠಕ್ಕೆ ಬರೆದು ನೀಡಿದ ದಾಖಲೆಗಳು ನಮ್ಮಲ್ಲಿವೆ ಎಂದರು.ಸಮಾಜದ ಮುಖಂಡ ಶ್ಯಾಮಾಚಾರ್ ಬಂಡಿ ಮಾತನಾಡಿ, ಧರ್ಮ ಕಾರ್ಯದಿಂದಲೇ ಜಗತ್ತು ಬೆಳಗಲು ಸಾಧ್ಯವೇ ಹೊರತು, ಅಧರ್ಮದಿಂದ ಜಗತ್ತು ನಾಶವಾಗುತ್ತದೆ ಎಂದ ಅವರು, ಭಾರತವನ್ನು ಯಾರು ಎಷ್ಟೇ ಆಳಿದರೂ ಸಹ ಅದು ಸದೃಢವಾಗಿದ್ದು, ಸದೃಢವಾಗಿಯೇ ಬೆಳೆಯುತ್ತಿರುವುದು ಇಲ್ಲಿರುವ ಧರ್ಮಗಳಿಂದ ಎಂದರು.
ಕೊಪ್ಪಳ ರಾಯರ ಮಠದ ವ್ಯವಸ್ಥಾಪಕ ಜಗನ್ನಾಥ ಹುನಗುಂದ, ಪ್ರಧಾನ ಅರ್ಚಕ ಪಂಡಿತ್ ರಘುಪ್ರೇಮಾಚಾರ್ ಮುಳುಗುಂದ, ಸಮಾಜದ ಹಿರಿಯರಾದ ಎನ್. ವಾದಿರಾಜ್ ಆಚಾರ್, ಪವನ್ ಆಚಾರ್, ಪ್ರಾಣೇಶ್ ಮಾದಿನೂರು ಸೇರಿದಂತೆ ಅನೇಕರು ಇದ್ದರು.