ಸಾರಾಂಶ
ಕಾರಟಗಿ: ಕನಕಗಿರಿ ಕ್ಷೇತ್ರದ ಕ್ಯಾಂಪ್‌ಗಳನ್ನು ಸರ್ಕಾರದ ನಿಯಮಾವಳಿಯಂತೆ ಜನರ ಬೇಡಿಕೆ ಅನ್ವಯ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಅವರು ತಾಲೂಕಿನ ಚಳ್ಳೂರು, ಚಳ್ಳೂರು ಕ್ಯಾಂಪಿನಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆ ಅಭಯಹಸ್ತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾರಟಗಿ ತಾಲೂಕಿನ ೧೩ ಕ್ಯಾಂಪ್‌ಗಳಲ್ಲಿ ೧೨ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗಿದೆ. ನಿಮ್ಮ ಬೇಡಿಕೆಯನ್ನು ಈಡೇರಿಸುವುದು ನನ್ನ ಜವಾಬ್ದಾರಿ. ನಿವಾಸಿಗಳು ಭತ್ತದ ಕಟಾವು ಕಾರ್ಯ ಮುಗಿದ ಬಳಿಕ ಸರ್ವೇ, ಕಂದಾಯ ಕಡತಗಳ ಪರಿವರ್ತನೆ ಕೆಲಸ ಮಾಡುವಂತೆ ಮನವಿ ಮಾಡಿದ್ದರಿಂದ ಇದೊಂದೇ ಕ್ಯಾಂಪ್ ಕಂದಾಯ ಗ್ರಾಮವಾಗಿ ಪರಿವರ್ತನೆಯಾಗುವುದು ಬಾಕಿ ಇದೆ ಎಂದರು.ಆರ್‌ಡಿ ಇಲಾಖೆಯ ಅಧಿಕಾರಿಗಳಿಗೆ ಕ್ಯಾಂಪ್‌ನ ಎಸ್ಸಿ, ಎಸ್ಟಿ, ಜನರಲ್ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ವಿಶೇಷವಾಗಿ ಕಾಳಜಿ ವಹಿಸಿ ಆದಷ್ಟು ಬೇಗ ಕಾಮಗಾರಿಗಳನ್ನು ಪ್ರಾರಂಭಿಸುವ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ಎಂದರು.ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಾಗಿ ಕ್ಷೇತ್ರದ ಗ್ರಾಪಂ ಕೇಂದ್ರ ಸ್ಥಾನಕ್ಕೆ ಬರುವ ಊರುಗಳಿಗೆ ಭೇಟಿ ನೀಡಿ, ಜನ ಸಂಪರ್ಕ ಸಭೆ ಆಯೋಜಿಸಿ, ಗ್ರಾಮಸ್ಥರ ಅಹವಾಲುಗಳಿಗೆ ಸ್ಥಳದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಇತ್ಯರ್ಥ ಮಾಡಲು ಈ ಜನ ಸಂಪರ್ಕ ಹಮ್ಮಿಕೊಳ್ಳಲಾಗಿದೆ ಎಂದರು.ಕಾರಟಗಿಯಿಂದ ಚಳ್ಳೂರುವರೆಗೆ ರಸ್ತೆ ನಿರ್ಮಾಣ, ಚಳ್ಳೂರು-ಸೋಮನಾಳ, ಚಳ್ಳೂರು ಕ್ಯಾಂಪ್‌ನ ಕಂದಾಯ ಗ್ರಾಮಕ್ಕೆ ತಹಶೀಲ್ದಾರ್ ಅವರನ್ನು ಗ್ರಾಮಕ್ಕೆ ಕಳಿಸಿರುವೆ. ಕೃಷಿ ಚಟುವಟಿಕೆ ಇರುವ ಕಾರಣ ವಿಳಂಬವಾಗಿದೆ. ಆದಷ್ಟು ಬೇಗ ಅಧಿಕಾರಿಗಳನ್ನು ಕಳಿಸಿ ಪರಿಹಾರ ಕೊಡಿಸುವೆ ಎಂದು ಭರವಸೆ ನೀಡಿದರು.ಕ್ಯಾಂಪ್‌ನಲ್ಲಿ ರುದ್ರಭೂಮಿಗೆ ಅಭಿವೃದ್ಧಿ, ಹೊಸದಾಗಿ ಅಂಗನವಾಡಿ ಕೊಠಡಿ ನಿರ್ಮಾಣ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಇದಕ್ಕೂ ಮುನ್ನ ಚೆಳ್ಳೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಚಳ್ಳೂರಿನಿಂದ ಕಾರಟಗಿ ಮುಖ್ಯ ರಸ್ತೆ ಅಭಿವೃದ್ಧಿ, ನರೇಗಾದಡಿ ಭೋಜನಾಲಯ, ಮೈದಾನ ಅಭಿವೃದ್ಧಿ, ವಿಕಲಚೇತನರ ಮೂಲಸೌಕರ್ಯ, ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಹೊಸ ಕೊಠಡಿ, ಗ್ರಾಪಂ ಮಹಿಳಾ ಒಕ್ಕೂಟದ ಎನ್‌ಆರ್‌ಎಲ್‌ಎಂ ಕಟ್ಟಡಕ್ಕೆ ಮೂಲಸೌಕರ್ಯ, ಚಳ್ಳೂರು, ಚಳ್ಳೂರು ಕ್ಯಾಂಪ್, ಇನ್ನಿತರ ಪ್ರಮುಖ ರಸ್ತೆಗಳ ಅಭಿವೃದ್ಧಿ, ಗ್ರಾಮಕ್ಕೆ ಹೊಸ ಕಾಲೇಜ್, ಸ್ಮಶಾನ ಅಭಿವೃದ್ಧಿ, ಗ್ರಾಮದ ಈಚಲ ಮರದಮ್ಮ, ತಾಯಮ್ಮ ದೇವಿ, ವಾಲ್ಮೀಕಿ ದೇವಸ್ಥಾನ ಅಭಿವೃದ್ಧಿ ಕಾಮಗಾರಿ, ಎಸ್ಸಿ, ಎಸ್ಟಿ ಜನರಿಗೆ ಭೂಮಿ ಹಂಚಿಕೆ, ೧೩ ಜನರಿಗೆ ಹಕ್ಕುಪತ್ರ ಹಂಚಿಕೆ, ಸಾರ್ವಜನಿಕ ಸ್ಮಶಾನದ ಹದ್ದುಬಸ್ತು, ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ತಾಂತ್ರಿಕ ಸಮಸ್ಯೆ ಕುರಿತಂತೆ ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳಿಗೆ ಸ್ಥಳದಲ್ಲಿ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸುವಲ್ಲಿ ಮುಂದಾದರು.ಈ ಸಂದರ್ಭದಲ್ಲಿ ತಹಶೀಲ್ದಾರ ಎಂ.ಕುಮಾರಸ್ವಾಮಿ, ತಾಪಂ ಇಒ ಲಕ್ಷ್ಮೀದೇವಿ ಇದ್ದರು. ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಸಜ್ಜನ್ ಕಾರ್ಯಕ್ರಮ ನಿರ್ವಹಿಸಿದರು.ಚಳ್ಳೂರು ಗ್ರಾಮಸ್ಥರು ನಿರೀಕ್ಷೆಯಂತೆ ಸರ್ಕಾರಿ ಶಾಲೆ ಒತ್ತುವರಿ ವಿಷಯವು ಸಭೆಯಲ್ಲಿ ಪ್ರಸ್ತಾಪವಾಯಿತು. ಗ್ರಾಮದ ಯುವಕರು ಶಾಲೆಯ ಸಮಸ್ಯೆ ಬಗೆಹರಿಸುವಂತೆ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮದ ಹಿರಿಯರು ಮತ್ತು ಶಾಲೆ ಉಳಿಸುವ ಹೋರಾಟ ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.