ಬಸವೇಶ್ವರ ನಗರದ ನಿವಾಸಿಗಳು ಭಕ್ತಿವಂತರು, ಸಂಸ್ಕಾರವಂತರು ಕಳೆದ 18 ವರ್ಷಗಳಿಂದ ಶರಣೆ ದಾನಮ್ಮತಾಯಿಯ ಪುರಾಣ ಪ್ರವಚನ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ.
ಗದಗ: ಪುರಾಣ ಪ್ರವಚನ ಶ್ರವಣದಿಂದ ಮನ ಪರಿವರ್ತನೆಗೊಳ್ಳುವ ಜತೆಗೆ ಸರ್ವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಅದಮ್ಯ ಶಕ್ತಿ ಪುರಾಣ ಪ್ರವಚನಕ್ಕೆ ಇದೆ ಎಂದು ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.ಇಲ್ಲಿಯ ಬಸವೇಶ್ವರ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ವರದಾನೇಶ್ವರಿ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆದ ಶರಣೆ ದಾನಮ್ಮತಾಯಿಯ 19ನೇ ವರ್ಷದ ಪ್ರವಚನ ಮಾಲಿಕೆಯ ಮಹಾಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಬಸವೇಶ್ವರ ನಗರದ ನಿವಾಸಿಗಳು ಭಕ್ತಿವಂತರು, ಸಂಸ್ಕಾರವಂತರು ಕಳೆದ 18 ವರ್ಷಗಳಿಂದ ಶರಣೆ ದಾನಮ್ಮತಾಯಿಯ ಪುರಾಣ ಪ್ರವಚನ ನಡೆಸಿಕೊಂಡು ಬಂದಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮಗಳಿಗೆ ಭಕ್ತರು ಪಾಲ್ಗೊಳ್ಳುವರು. ಆದರೆ ನಗರ ಪ್ರದೇಶದಲ್ಲಿ ಟಿವಿಯ ಭರಾಟೆಯಲ್ಲಿ ಪುರಾಣ ಪ್ರವಚನ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವುದು ವಿಶೇಷ ಎಂದರು.ಅಧ್ಯಕ್ಷತೆ ವಹಿಸಿದ್ದ ಪುರಾಣ ಸಮಿತಿ ಅಧ್ಯಕ್ಷೆ ಶಾರದಾ ಹಚಡದ, ಗೌರವಾಧ್ಯಕ್ಷೆ ಶೈಲಜಾ ಕೊಡೇಕಲ್, ಹಿರಿಯ ಟ್ರಸ್ಟಿ ರಾಚಪ್ಪ ಮಿಣಜಗಿ, ಶಿವಬಸಪ್ಪ ಯಂಡಿಗೇರಿ ಮಾತನಾಡಿದರು.
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ರಚಿಸಿದ ದಾನಮ್ಮದೇವಿ ಪುರಾಣವನ್ನು ನಂದಿಕೇಶ್ವರದ ವೀರೇಶ್ವರ ಶಾಸ್ತ್ರಿಗಳಿಂದ ಸಾಗಿ ಬಂದ ಪುರಾಣ ಪ್ರವಚನಕ್ಕೆ ಮೃತ್ಯುಂಜಯ ಹಿರೇಮಠ, ಹೇಮಂತಕುಮಾರ ಹಿರೇಮಠ ಸಂಗೀತ ಸಾಥ್ ನೀಡಿದರು.ಈ ವೇಳೆ ಭಕ್ತಿಸೇವೆ ವಹಿಸಿಕೊಂಡ ದಾನಿಗಳು, ಸೇವಾಕರ್ತರನ್ನು ಸನ್ಮಾನಿಸಲಾಯಿತು. ಶಿವಕುಮಾರ ಬೇವಿನಮರದ, ಶಂಭು ಕಾರಕಟ್ಟಿ ಇದ್ದರು. ಕಾರ್ಯದರ್ಶಿ ಸುರೇಖಾ ಪಿಳ್ಳಿ ನಿರೂಪಿಸಿದರು. ಕುಬಸದ ವಂದಿಸಿದರು.