ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುತೋಟಗಾರಿಕಾ ಬೆಳೆಗಾರರಿಗೆ, ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ,ಮಾಹಿತಿಯನ್ನು ಒದಗಿಸುವ ಸಲುವಾಗಿ 1984 ರಲ್ಲಿ ತೋಟಗಾರಿಕಾ ಇಲಾಖೆ ನಿರ್ದೇಶಕ ದಿ.ಮರಿಗೌಡರು ಪ್ರಾರಂಭಿಸಿದ ಫಲಪುಷ್ಪ ಪ್ರದರ್ಶನ ಇಂದಿಗೂ ನಡೆದುಕೊಂಡು ಬರುತಿದ್ದು,ರಾಜ್ಯದಲ್ಲಿ ತೋಟಗಾರಿಕಾ ಬೆಳೆಗಳ ವಿಸ್ತೀರ್ಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ತೋಟಗಾರಿಕಾ ಸಂಘದ ಜಂಟಿ ಕಾರ್ಯದರ್ಶಿ ಆರ್.ಕಾಮರಾಜು ಅಭಿಪ್ರಾಯಪಟ್ಟಿದ್ದಾರೆ. ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ -2025ರ ಸಮರೋಪ ಭಾಷಣ ಮಾಡಿದ ಅವರು, ಕಳೆದ ಮೂರು ದಿನಗಳಿಂದ ತೋಟಗಾರಿಕಾ ಇಲಾಖೆಯ ಆವರಣ ಒಂದು ಜನಾರ್ಕ್ಷಣೆಯ ಕೇಂದ್ರವಾಗುವುದರ ಜೊತೆಗೆ, ಮಕ್ಕಳಿಗೆ, ಯುವಜನರಿಗೆ ಮಾಹಿತಿ ಒದಗಿಸುವ ಶಿಕ್ಷಣ ಕೇಂದ್ರವಾಗಿಯೂ ಬಳಕೆಯಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಅಭಿನಂದಿಸುವುದಾಗಿ ತಿಳಿಸಿದರು.ರಾಜ್ಯದಲ್ಲಿಯೇ ಬಾಗಲಕೊಟೆಯನ್ನು ಹೊರತು ಪಡಿಸಿದರೆ, ತುಮಕೂರು ತೋಟಗಾರಿಕಾ ಬೆಳೆಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಮಲೆನಾಡು, ಕರಾವಳಿಯ ಬೆಳೆಯಾಗಿದ್ದ ಅಡಿಕೆ ಬಯಲು ಸೀಮೆಯ ಬಹುತೇಕ ಭೂಮಿಯನ್ನು ಆವರಿಸಿರುವುದನ್ನು ನೋಡಿದರೆ ಒಂದು ಕಡೆ ಖುಷಿಯಾದರೂ, ಇಂದಿನ ಬೆಲೆ ಸ್ಥಿರವಾಗಿ ಇಲ್ಲದಿದ್ದರೆ ಏನೋ ಎಂಭ ಭಯ ಕಾಡುತ್ತಿದೆ. ತೆಂಗು, ಅಡಿಕೆ, ಮಾವು, ಸಪೋಟ, ದಾಳಿಂಬೆ, ಡ್ರಾಗನ್ ಪ್ರೂಟ್ ಸೇರಿದಂತೆ ಹಲವು ರೀತಿಯ ಹಣ್ಣುಗಳನ್ನು ತುಮಕೂರು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗಲಿ. ಆ ಮೂಲಕ ಯುವಜನರು ಕೃಷಿಯತ್ತ ಮರಳುವಂತಾಗಲಿ ಎಂದು ಆರ್.ಕಾಮರಾಜು ನುಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ನಟರಾಜು ಮಾತನಾಡಿ, ಮೂರುದಿನಗಳ ಈ ಫಲಪುಷ್ಪ ಪ್ರದರ್ಶನ ಅತ್ಯಂತ ಯಶಸ್ವಿಯಾಗಿದೆ. ನಮ್ಮ ಮಕ್ಕಳಿಗೆ ತೋಟಗಾರಿಕಾ ಬೆಳೆಗಳನ್ನು ಪರಿಚಯಿಸುವ ಅಗತ್ಯವಿದೆ. ಹಾಗಾಗಿ ಇಂತಹ ವಸ್ತು ಪ್ರದರ್ಶನಗಳಿಗೆ ಮಕ್ಕಳನ್ನು ಕರೆ ತರುವ ಕೆಲಸವನ್ನು ಶಾಲಾ ಆಡಳಿತ ಮಂಡಳಿ ಮಾಡಬೇಕು. ಇದರಿಂದ ಮಕ್ಕಳಿಗೆ ನಾವು ತಿನ್ನುವ ವಸ್ತುಗಳ ಹೇಗೆ ಉತ್ಪತ್ತಿಯಾಗುತ್ತವೆ ಎಂಬ ಮಾಹಿತಿಯ ಜೊತೆಗೆ, ಅದರ ಹಿಂದಿನ ಶ್ರಮ ಅರ್ಥವಾಗುತ್ತದೆ. ಕಾರ್ಯಕ್ರಮ ಆಯೋಜಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು.ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರೇಷ್ಮೆ ಇವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿವೆ. ಕೃಷಿ ಕೈಕೊಟ್ಟರೆ ಉಳಿದವುಗಳು ಕೈಹಿಡಿಯುವ ಕೆಲಸ ಮಾಡುತ್ತೇವೆ. ಹಾಗಾಗಿ ರೈತನನ್ನು ಅನ್ನದಾತ ಎಂದು ಕರೆಯಲಾಗುತ್ತಿದೆ. ಮೂರು ದಿನಗಳ ಕಾಲ ನಡೆದ ಫಲಪುಷ್ಪ ಪ್ರದರ್ಶನದಲ್ಲಿ ಒಂದೇ ಸೂರಿನ ಅಡಿ ಸಾರ್ವಜನಿಕರಿಗೆ ಮನರಂಜನೆಯ ಜೊತೆಗೆ, ಮಾಹಿತಿ, ಮಾರ್ಗದರ್ಶನ ದೊರೆಯುತ್ತಿರುವುದು ಸಂತೋಷದ ವಿಚಾರ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ಇಂದು ಯುವಕರು, ಅದರಲ್ಲಿಯೂ ವಿದ್ಯಾವಂತ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಎಲ್ಲರೂ ಪಟ್ಟಣದ ವ್ಯಾಮೋಹ ಹೆಚ್ಚಾಗಿ, ವಲಸೆ ಹೋಗುತ್ತಿದ್ದು, ಕರೋನ ಸಂದರ್ಭದಲ್ಲಿ, ಕೆಲವರು ಕೃಷಿಗೆ ಮರಳಿದ್ದನ್ನು ಕಾಣಬಹುದು. ಮಕ್ಕಳಿಗೆ ಇಂತಹ ಪ್ರದರ್ಶನಗಳನ್ನು ತೋರಿಸುವುದರಿಂದ ಕೃಷಿಯ ಹಿಂದಿನ ಪರಿಶ್ರಮ ಹಾಗೂ ಅದರ ವಿವಿಧ ಹಂತಗಳ ಪರಿಚಯವಾಗುತ್ತದೆ. ಅಲ್ಲದೆ ಶಾಲಾ ಕಾಲೇಜಗಳ, ಖಾಸಗಿ ಉದ್ಯಾನವನಗಳನ್ನು ಗುರುತಿಸಿ, ಅಭಿನಂದಿಸುವ ಮೂಲಕ ಮತ್ತಷ್ಟು ಜನರು ಇಂತಹ ಗಾರ್ಡನ್‌ಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ. ಇಂತಹ ವಸ್ತುಪ್ರದರ್ಶನ ಮೂರು ದಿನಗಳಿಗೆ ಬದಲಾಗಿ ಕನಿಷ್ಠ ಒಂದು ವಾರ ಮಾಡಿದರೆ ಹೆಚ್ಚು ಜನರು ನೋಡಿ ಉಪಯೋಗ ಪಡೆದುಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.ಇದೇ ವೇಳೆ ಮೂರು ದಿನಗಳ ತೋಟಗಾರಿಕಾ ಫಲಪುಷ್ಪ ಪ್ರದರ್ಶನಕ್ಕಾಗಿ ದುಡಿದ ಕೃಷಿ, ತೋಟಗಾರಿಕೆ ಮತ್ತು ಇತರೆ ಇಲಾಖೆಗಳ ಮುಖ್ಯಸ್ಥರುಗಳನ್ನು, ಮಳಿಗೆ ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡಿದ ವಿವಿಧ ರೈತ ಉತ್ಪಾದಕ ಸಂಘಟನಗಳ ಮುಖಂಡರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರಮೇಶ್, ತೋಟಗಾರಿಕಾ ಉಪನಿರ್ದೇಶಕರಾದ ಶಾರದಮ್ಮ, ಹಿರಿಯ ತೋಟಗಾರಿಕಾ ನಿದೇರ್ಶಕರಾದ ರೂಪ ಎನ್.ಎಸ್, ಜಿಲ್ಲಾ ತೋಟಗಾರಿಕೆ ಸಂಘದ ಪದಾಧಿಕಾರಿಗಳಾದ ಪಿ.ಕೃಷ್ಣಪ್ಪ, ಆರ್.ಕಾಮರಾಜು, ಸ್ನೇಕ್ ನಂದೀಶ್, ನಿರ್ದೇಶಕರಾದ ಕೆ.ಎನ್. ಶಿವಶಂಕರ್,ಜಯಣ್ಣ, ಟಿ.ಎಚ್ ಪ್ರಸನ್ನಕುಮಾರ್, ವೈ.ಕೆ.ನಾಗಭೂಷಣ್, ಜಗಜ್ಯೋತಿ ಸಿದ್ದರಾಮಯ್ಯ, ಎಚ್.ಆರ್.ನಾಗೇಶ, ಕೆ.ಎಂ.ವಾಸು, ನವೀನ್‌ಗೌಡ, ಎಂ.ವೆಂಕಟೇಶ್, ಟಿ.ಪಿ.ಶ್ರೀಧರ್, ಗೀತಾಜಿನೇಂದ್ರ ಮತ್ತಿತರರು ಉಪಸ್ಥಿತರಿದ್ದರು.