ಸಾರಾಂಶ
ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಸ್ವೀಪ್ ಸಮಿತಿ ಸಭೆ ನಡೆಯಿತು. ಈ ಸಂದರ್ಭ ಮತದಾನ ಬಗ್ಗೆ ಅರಿವು ಮೂಡಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಉಡುಪಿ ಜಿಲ್ಲೆಗೆ ಬೇರೆ ಜಿಲ್ಲೆಯಿಂದ ವಲಸೆ ಬಂದ ಕಾರ್ಮಿಕರು ಮನವೊಲಿಸಿ, ಅವರ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಕಡ್ಡಾಯವಾಗಿ ಮತ ಚಲಾಯಿಸಲು ಅರಿವು ಮೂಡಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಹೇಳಿದರು.ಅವರು ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಸ್ವೀಪ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಏ. 26 ರಂದು ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯಲಿದೆ. ಮತದಾರರು ಅಂದು ಮತದಾನ ಕೇಂದ್ರಗಳಿಗೆ ತೆರಳಿ ಯಾವುದೇ ಆಸೆ - ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಜಾಗೃತಿ ಮೂಡಿಸುವುದು ಸ್ವೀಪ್ ಸಮಿತಿಯ ಮುಖ್ಯ ಧ್ಯೇಯವಾಗಿದೆ. ಪ್ರತಿಯೊಬ್ಬ ಅಧಿಕಾರಿಗಳು ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದರು.ಮತದಾರರು ಮತದಾನ ಕೇಂದ್ರಗಳಿಗೆ ಬಂದಾಗ ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಗಮನ ಹರಿಸಬೇಕು ಎಂದ ಅವರು, ಬಿ.ಎಲ್.ಓ. ಗಳು ಪ್ರತಿಯೊಬ್ಬ ಮತದಾರರಿಗೂ ಮತದಾನ ಮಾಡಲು ಅನುಕೂಲವಾಗುವ ರೀತಿಯಲ್ಲಿ ಮತದಾನ ಕ್ರಮ ಸಂಖ್ಯೆಯ ಚೀಟಿಯನ್ನು ಮನೆಮನೆಗೂ ವಿತರಿಸಬೇಕು ಜೊತೆಗೆ ಮತದಾನ ಯಂತ್ರದ ಬಳಕೆಯ ಬಗ್ಗೆಯೂ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ಬಾರಿ ಕಡಿಮೆ ಮತದಾನ ಆಗಿರುವ ಸ್ಥಳಗಳನ್ನು ಸಮೀಕ್ಷೆ ಮಾಡಿ, ಕಡಿಮೆ ಮತದಾನ ಆಗಿರುವ ಕಾರಣ ಗುರುತಿಸುವುದರೊಂದಿಗೆ, ಮತದಾನ ಪ್ರಮಾಣ ಹೆಚ್ಚಿಸಲು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಮತ ಚಲಾಯಿಸುವವರ ಸಂಖ್ಯೆ ಹೆಚ್ಚಿಸಲು ಕ್ರಮ ವಹಿಸಬೇಕು ಎಂದರು.ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿ.ಪಂ. ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಯೋಜನಾ ನಿರ್ದೇಶಕ ಕರೀಂ ಆಸಾದಿ, ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.