ಕೊಪ್ಪಳ ನಗರದಲ್ಲಿ ಗುರುವಾರ ನೂತನ ಜೆಡಿಎಸ್‌ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮುಖರ ಸಭೆ ನಡೆಯಿತು. ಜೆಡಿಎಸ್‌ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಮಾರ್ಗದರ್ಶನ ನೀಡಿದರು.

ಕೊಪ್ಪಳ: ಅಧಿಕಾರ ಲಾಲಸೆಯಲ್ಲಿ ತೊಡಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಕಾಂಗ್ರೆಸ್ ವೈಫಲ್ಯವನ್ನು ಜನರಿಗೆ ಮನವರಿಕೆ ಮಾಡಿ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದಲ್ಲಿ ಗುರುವಾರ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ನಾಯಕತ್ವ ಬದಲಾವಣೆ ವಿಷಯ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಮಣ್ಣುಪಾಲು ಮಾಡಿದ್ದಾರೆ. ಅಧಿಕಾರಿಗಳ ಮೇಲಿನ ನಿಯಂತ್ರಣವನ್ನು ಸರ್ಕಾರ ಕಳೆದುಕೊಂಡಿದ್ದು, ಎಲ್ಲ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಜೆಡಿಎಸ್ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನದಂದು ಪಕ್ಷದ ಪ್ರಥಮ ಗೆಲುವು ಕೊಪ್ಪಳದಿಂದಲೇ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಕೊಪ್ಪಳದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಅತ್ಯುತ್ತಮ ಮೈತ್ರಿ ಹೊಂದಿದೆ. ದುರಾಡಳಿತದಲ್ಲಿ ತೊಡಗಿರುವ ಕಾಂಗ್ರೆಸ್‌ಗೆ ಕಣ್ಣು -ಕಿವಿ ಇಲ್ಲದಾಗಿದೆ. ಕಳೆದ 13 ವರ್ಷ ಶಾಸಕ ಸ್ಥಾನದಲ್ಲಿರುವ ರಾಘವೇಂದ್ರ ಹಿಟ್ನಾಳ್ ಮತದಾರರಿಂದ ಗೇಟ್ ಪಾಸ್ ಪಡೆದು ಇನ್ನೆರಡು ವರ್ಷಗಳಲ್ಲಿ ಮನೆಗೆ ಹೋಗಲಿದ್ದಾರೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಅನುಮಾನ ಎಂದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಸದಸ್ಯತ್ವ ನೋಂದಣಿ ಗುರಿ ಹಾಕಿಕೊಳ್ಳಲಾಗಿದೆ. ಮಹಿಳಾ ವಿಭಾಗ ಸಶಕ್ತವಾಗಿದ್ದು, 500 ಮಹಿಳೆಯರ ವಿವಿಧ ತಂಡಗಳು ರಚನೆಯಾಗಿವೆ ಎಂದರು.

ಈ ಕಾರ್ಯಕ್ರಮಕ್ಕೂ ಮೊದಲು ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್ಎ - 2 ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಶಿವಶಂಕರ ರೆಡ್ಡಿ ವಿಶೇಷ ಸಮಗ್ರ ಪರಿಷ್ಕರಣೆಯ ಮಹತ್ವ, ಅದರ ಉದ್ದೇಶಗಳನ್ನು, ಕಾನೂನು ಚೌಕಟ್ಟುಗಳನ್ನು ಹಾಗೂ ಅನುಸರಿಸಬೇಕಾದ ವಿಧಾನಗಳ ಕುರಿತು ತರಬೇತಿ ನೀಡಿದರು.

ಜೆಡಿಎಸ್ ತಾಲೂಕು ಗೌರವಾಧ್ಯಕ್ಷ ಈಶಪ್ಪ ಮಾದನೂರ, ಜಿಲ್ಲಾ ಜೆಡಿಎಸ್ ಗೌರವ ಅಧ್ಯಕ್ಷ ದೇವಪ್ಪ ಕಟ್ಟಿಮನಿ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನನಗೌಡ್ರ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ ಸೊರಟೂರ, ರಾಜ್ಯ ಮುಖಂಡ ಶರಣಪ್ಪ ಕುಂಬಾರ, ಶರಣಪ್ಪ ಜಡಿ, ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ನಗರ ಘಟಕದ ಗೌರವಾಧ್ಯಕ್ಷೆ ರತ್ನಮ್ಮ ಹಿರೇಮಠ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಲಾ ಮೇದಾರ, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ರಮೇಶ್ ಡಂಬ್ರಳ್ಳಿ, ತಾಲೂಕು ಅಧ್ಯಕ್ಷ ವೀರೇಶಗೌಡ್ರ ದಳಪತಿ, ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸಿರಾಜ್ ಬಿಜಾಪುರ, ಜಿಲ್ಲಾ ಸಹ ವಕ್ತಾರ ಯಮನಪ್ಪ ಕಟಗಿ, ಯಲಬುರ್ಗಾ ತಾಲೂಕು ಅಧ್ಯಕ್ಷರಾದ ಬಸವರಾಜ ಗುಳಗುಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಪಕ್ಷದ ಮುಖಂಡ ಶೆಟ್ಟೆಪ್ಪ ಹೊಸಳ್ಳಿ, ಮುಖಂಡ ಶಂಕ್ರಪ್ಪ ಕೊಳ್ಳಿ ಹಾಜರಿದ್ದರು.