ಸಾರಾಂಶ
ದೊಡ್ಡಬಳ್ಳಾಪುರ: ಪೌರಕಾರ್ಮಿಕರಿಗೆ ನಗರಸಭೆಯಿಂದ ವಿತರಿಸಿರುವ ಕುಕ್ಕರ್‌ಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಹಲವು ಸದಸ್ಯರು ನಗರಸಭೆ ಸಾಮಾನ್ಯಸಭೆಯಲ್ಲಿ ದನಿಯೆತ್ತಿದ ಪರಿಣಾಮ ಕಾವೇರಿದ ಚರ್ಚೆ ನಡೆಯಿತು.
ನಗರದಲ್ಲಿನ ಸ್ವಚ್ಛತೆ ನಿರ್ಲಕ್ಷ್ಯ, ವಿದ್ಯಾರ್ಥಿ ವೇತನ ರದ್ದಾಗಿರುವುದು, ನಮ್ಮ ತೆರಿಗೆ ನಮ್ಮ ಹಕ್ಕು ಕುರಿತಂತೆ ವಿವಿಧ ವಿಷಯಗಳ ಬಗ್ಗೆ ಏರುದನಿಯ ಚರ್ಚೆ ನಡೆದರೂ, ಯಾವುದೇ ವಿಷಯಗಳು ತಾರ್ಕಿಕ ಅಂತ್ಯವನ್ನು ಕಾಣದೆ ಕೇವಲ ಚೆರ್ಚೆಯಲ್ಲಿ ಮುಕ್ತಾಯವಾದವು.ನಗರಸಭೆ ಅಧ್ಯಕ್ಷೆ ಸುಧಾರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಎಚ್.ಎಸ್. ಶಿವಶಂಕರ್ ಮಾತನಾಡಿ, ಯಾವುದೇ ರೀತಿಯ ಕೋಟೇಷನ್ ಪಡೆಯದೆ, ಟೆಂಡರ್ ಸಹ ಕರೆಯದೆ ಪೌರಕಾರ್ಮಿಕರಿಗೆ ಸುಮಾರು ₹6 ಲಕ್ಷ ವೆಚ್ಚಮಾಡಿ ಕುಕ್ಕರ್ ಖರೀದಿಸಲಾಗಿದೆ. ಇದೇ ನಿಯಮ ಇತರೆ ಖರೀದಿಗಳು, ಕಾಮಗಾರಿಗಳಿಗು ಅನ್ವಯವಾಗಬೇಕು. ಅಧ್ಯಕ್ಷರ ಅಪ್ಪಣೆ ಮೇರೆಗೆ ಖರೀದಿಗಳು ನಡೆಯುವುದಾದರೆ ಸದಸ್ಯರ ಅನುಮತಿ ಏಕೆ ಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿ ಗೂಡಿಸಿದ ಸದಸ್ಯರಾದ ಪ್ರಭಾ, ಎಂ.ಜಿ.ಶ್ರೀನಿವಾಸ್, ಬಂತಿವೆಂಕಟೇಶ್, ಆನಂದ್, ಹೆಚ್ಚಿನ ಮೊತ್ತದ ಯಾವುದೇ ವಸ್ತುಗಳ ಖರೀದಿಗೆ ಕೇವಲ ಕೋಟೆಷನ್ ಪಡೆದು ಖರೀದಿ ಮಾಡುವ ನಿಯಮ ನಗರಸಭೆಯ ನಿಯಮಗಳಿಗೆ ವಿರುದ್ಧವಾಗಿದೆ. ಇವುಗಳು ಮತ್ತೆ ಮರುಕಳಿಸದಂತೆ ಕ್ರಮ ವಹಿಸಬೇಕು ಎಂದರು.
ರಸ್ತೆ ಬದಿಗಳಲ್ಲಿ ಕಸದ ರಾಶಿ ಹಾಕುವುದನ್ನು ತಪ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕಸದ ರಾಶಿಗಳಿಂದಾಗಿ ಸಾರ್ವಜನಿಕರು ಮೂಗುಮುಚ್ಚಿಕೊಂಡು ಒಡಾಡುವಂತಾಗಿದೆ ಎಂದು ಎಂದು ದೂರಿದ ಸದಸ್ಯ ಟಿ.ಎನ್.ಪ್ರಭುದೇವ್, ನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಸ್ಥಳ ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಬಾಡಿಗೆ ಕಟ್ಟಡದಲ್ಲಿ ಗ್ರಂಥಾಲಯ ನಿರ್ವಹಿಸುವಂತಾಗಿದೆ. ನಗರಸಭೆ ವತಿಯಿಂದ ಸೂಕ್ತ ಸ್ಥಳ ನೀಡುವ ಮೂಲಕ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಗ್ರಂಥಾಲಯ ಬಳಕೆಯಾಗುವಂತೆ ಮಾಡಬೇಕಿದೆ ಎಂದರು.ಸ್ವಚ್ಛತೆಯ ವಿಚಾರದಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ವಾರ್ಡ್‌ಗಳಲ್ಲಿ ಸ್ವಚ್ಛತೆ ಇಲ್ಲದೆ ಜನರಿಗೆ ಉತ್ತರ ಹೇಳುವುದೇ ಕಷ್ಟವಾಗಿದೆ ಎಂದು ಸದಸ್ಯರಾದ ಇಂದ್ರಾಣಿ, ನಾಗಮಣಿ, ಸುಮಿತ್ರ ಅವರು ಪರಿಸರ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ತೆರಿಗೆ ನಮ್ಮ ಹಕ್ಕು:ಹತ್ತಾರು ವರ್ಷಗಳಿಂದಲು ಬಡ ವಿದ್ಯಾರ್ಥಿಗಳಿಗೆ ನಗರಸಭೆ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹಾಗೆಯೇ ಬಡವರ ಆರೋಗ್ಯಕ್ಕು ಕನಿಷ್ಠ ಮೊತ್ತದ ನೆರವು ನೀಡಲಾಗುತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಇದಕ್ಕೆ ಅವಕಾಶ ಇಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ನಮ್ಮ ತೆರೆಗೆ ಹಣವನ್ನು ನಾವು ಖರ್ಚು ಮಾಡುವುದಕ್ಕೆ ಅಧಿಕಾರ ಇಲ್ಲ ಅಂದಮೇಲೆ ನಮ್ಮ ತೆರಿಗೆಯ ಮೇಲೆ ನಮಗೆ ಹಕ್ಕು ಇಲ್ಲವೆ ಎಂದು ಸದಸ್ಯರಾದ ಎಂ.ಜಿ.ಶ್ರೀನಿವಾಸ್, ಟಿ.ಎನ್.ಪ್ರಭುದೇವ್ ಪೌರಾಯುಕ್ತರನ್ನು ಪ್ರಶ್ನಿಸಿದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಪೌರಾಯುಕ್ತ ಕೆ.ಪರಮೇಶ್, ಸದಸ್ಯರ ಸಲಹೆಯಂತೆ ಬಜೆಟ್‌ನಲ್ಲಿ ಹಣ ಮೀಸಲಿಡುವ ಮೂಲಕ ವಿದ್ಯಾರ್ಥಿ ವೇತನಕ್ಕೆ ಅವಕಾಶ ಕಲ್ಪಿಸಲಾಗುವುದು. ನಗರದಲ್ಲಿ ಎಷ್ಟು ವಾಣಿಜ್ಯ ಮಳಿಗೆ, ಮನೆಗಳ ಖಾತೆಗಳು ಇವೆ, ಇವುಗಳಿಂದ ಎಷ್ಟು ತೆರಿಗೆ ವಸೂಲಿ ಬಾಕಿ ಇದೆ. ಬರಬೇಕಿರುವ ತೆರಿಗೆಯ ಬಾಕಿ ಎಷ್ಟು ಎನ್ನುವ ಲೆಕ್ಕವೇ ನಗರಸಭೆಯಲ್ಲಿ ಇಲ್ಲದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಮಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಾರ್ವಜನಿಕರು ಪ್ರಶ್ನಿಸಿದರೆ ಉತ್ತರ ನೀಡುವುದಾದರು ಹೇಗೆ? ಖಾತೆದಾರರು ಕಟ್ಟುವ ತೆರಿಗೆ ಅಂಕಿ ಅಂಶಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದೇ ಕಂದಾಯ ವಿಭಾಗದ ಅಧಿಕಾರಿಗಳು ಮಾಡುವ ಕೆಲಸವಾದರು ಏನಿದೆ ಎಂದು ಪ್ರಶ್ನಿಸಿದ ಸದಸ್ಯ ಎಂ.ಜಿ.ಶ್ರೀನಿವಾಸ್, ನಗರಸಭೆಗೆ ನ್ಯಾಯುತವಾಗಿ ಬರಬೇಕಿರುವ ಕೋಟ್ಯಂತರ ರು. ತೆರಿಗೆ ಹಣ ನಷ್ಟವಾಗುತ್ತಿದೆ. ಸೂಕ್ತ ಅಂಕಿ ಅಂಶಗಳು ಗಣಕೀಕೃತವಾಗಬೇಕು. ನಮ್ಮಲ್ಲಿ ಸೂಕ್ತ ದಾಖಲಾತಿಯೇ ಇಲ್ಲದೆ ಖಾತೆದಾರರಿಂದ ತೆರಿಗೆ ವಸೂಲಿ ಮಾಡುವುದಕ್ಕೆ ಅರ್ಥವಾದರು ಇದೆಯೆ ಎಂದರು.ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ಮಾತನಾಡಿ, ಒಳಚರಂಡಿ ವ್ಯವಸ್ಥೆ ಜಾರಿಗೆ ಬಂದು ದಶಕಗಳೆ ಕಳೆದರೂ ಎಷ್ಟು ಸಂಪರ್ಕಗಳು ಇವೆ, ಇನ್ನು ಸಂಪರ್ಕ ಪಡೆಯದೇ ಇರುವ ಕುಟುಂಬಗಳು ಎಷ್ಟು, ವಾಣಿಜ್ಯ ಮಳಿಗೆಗಳ ಪರವಾನಗಿಯ ಮಾಹಿತಿ ನಗರಸಭೆಯಲ್ಲಿ ಇಲ್ಲ. ಈ ಎಲ್ಲವು ಸೂಕ್ತ ರೀತಿಯಲ್ಲಿ ನಿರ್ವಹಣೆಯಾದರೆ ಸರ್ಕಾರದ ಅನುದಾನ ಇಲ್ಲದೆಯೇ ನಮ್ಮ ತೆರಿಗೆ ಹಣದಲ್ಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಸಾಧ್ಯವಿದೆ ಎಂದರು. 1ಕೆಡಿಬಿಪಿ3-
ದೊಡ್ಡಬಳ್ಳಾಪುರ ನಗರಸಭೆ ಸರ್ವ ಸದಸ್ಯರ ಸಾಮಾನ್ಯ ಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಯಿತು.