ಸಾರಾಂಶ
ಮಂಜುನಾಥ್ ಟಿ.ಎನ್.ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಇಲ್ಲಿಗೆ ಸಮೀಪದ ಬೇಟೋಳಿ ಗ್ರಾಮದ ರಾಮನಗರದ ಗ್ರಾಮೀಣ ಸಮಾಜ ಸೇವಕರೊಬ್ಬರು ಸ್ವಂತ ಹಣದಿಂದ ರಸ್ತೆಗೆ ಕಾಂಕ್ರಿಟ್ ಅಳವಡಿಸಿ ಗಮನ ಸೆಳೆದಿದ್ದಾರೆ.ಬೇಟೋಳಿಯ ಮಧು ಟಿ. ಆರ್. ವೃತ್ತಿಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು. ರಾಮನಗರ ನಿವಾಸಿ ಯಶೋಧಾ ಅವರ ಪುತ್ರ. ಮಧು ರಾಮನಗರ ಹೆಗ್ಗಳ ಶಾಲೆಯ ಸಮೀಪ ಪೈಸಾರಿಯಲ್ಲಿ ವಾಸವಿದ್ದಾರೆ. ಹಲವಾರು ಕುಟುಂಬಗಳು ಇಲ್ಲಿ ವಾಸವಾಗಿವೆ. ಮಧು ಮನೆಯ ಸಮೀಪವೇ ಸಾರ್ವಜನಿಕ ರಸ್ತೆಯೊಂದು ಇದ್ದು, ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ಜನರು ಸಂಚರಿಸುತ್ತಾರೆ. ಅದರಲ್ಲಿ ಶಾಲಾ ಮಕ್ಕಳೂ ಕೂಡ ತೆರಳುತ್ತಾರೆ.
ರಸ್ತೆಯ ಸಮೀಪದಲ್ಲಿ ಮೇಲಿನ ಭಾಗದಲ್ಲಿ ಬರೆಯೊಂದು ಇದ್ದು ಮಳೆಗಾಲದಲ್ಲಿ ಆ ಬರೆಯ ಮೂಲಕ ನೀರು ಕೊಚ್ಚಿ ಬಂದು ರಸ್ತೆ ಹೊಂಡವಾಗಿ ಕೆಸರು ತುಂಬಿರುತ್ತದೆ. ಇದರಿಂದ ಸಾರ್ವಜನಿಕರಿಗೂ ಕಷ್ಟವಾಗುತಿತ್ತು. ಗ್ರಾಮಸ್ಥರು ಹಲವು ಬಾರಿ ಸಮಸ್ಯೆ ಕುರಿತು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.ಈ ರಸ್ತೆಯ ಬಗ್ಗೆ ಗಮನ ಹರಿಸಿದ ಸ್ಥಳೀಯ ನಿವಾಸಿ ಸ್ವಂತ ಹಣದಲ್ಲಿ ಸಾರ್ವಜನಿಕ ರಸ್ತೆಗೆ ಅಂದಾಜು 50 ಅಡಿ ಕಾಂಕ್ರಿಟ್ ಅಳವಡಿಸಿದ್ದಾರೆ. ಸ್ವಂತ ಹಣದಲ್ಲಿ ಸಾಮಗ್ರಿಗಳನ್ನು ತಂದು ಕೂಲಿ ಕಾರ್ಮಿಕರಿಗೆ ಸಂಬಳ ನೀಡಿ ತಾವು ಕೆಲಸದಲ್ಲಿ ತೊಡಗಿ ಎಲ್ಲರಿಗೂ ಅನುಕೂಲವನ್ನು ಮಾಡಿದ್ದಾರೆ. ಇವರ ಈ ಸಾಮಾಜಿಕ ಕಾರ್ಯಕ್ಕೆ ಅಂದಾಜು 50 ಸಾವಿರ ರು. ವೆಚ್ಚವಾಗಿದೆ.
ಇವರ ಈ ಆಸಕ್ತಿಯಿಂದ ಮುಂದಿನ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಅನುಕೂಲವಾಗಿದೆ.ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ಮಧು ಮಾಡಿದ ಈ ಸೇವೆ ಊರವರ ಶ್ಲಾಘನೆಗೆ ಪಾತ್ರವಾಗಿದೆ.
---------------ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಆಗುತಿರಲಿಲ್ಲ. ವಿಶೇಷವಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗುತಿತ್ತು. ಇದನ್ನು ಮನಗಂಡು ನನ್ನದೇ ಹಣದಲ್ಲಿ ನನಗೆ ಕೈಲಾದಷ್ಟು ಕಾಂಕ್ರಿಟ್ ಅಳವಡಿಸಿದೆ. ಹಲವಾರು ಜನರು ಇದರ ಪ್ರಯೋಜನ ಪಡೆಯುವುದು ನೋಡಿದರೆ ನನಗೆ ಸಂತಸವಾಗುತ್ತದೆ. ಸಮಾಜಕ್ಕೆ ನನ್ನದೊಂದು ಸೇವೆ ಸಲ್ಲಿಸಿದ ತೃಪ್ತಿ ಇದೆ.
-ಮಧು ಟಿ.ಆರ್., ಕೂಲಿ ಕಾರ್ಮಿಕ.---------ಯಾರೂ ಮಾಡದ ಕಾರ್ಯವನ್ನು ಮಧು ಮಾಡಿರುತ್ತಾರೆ. ಅವರು ಇತರರಿಗೂ ಮಾದರಿಯಾಗಿದ್ದಾರೆ. ರಸ್ತೆಯಲ್ಲಿ ಮಳೆಗಾಲದಲ್ಲಿ ಸಂಚರಿಸಲು ಇದ್ದ ಆತಂಕ ದೂರವಾಗಿದೆ.
-ರತಿ, ಅಂಗನವಾಡಿ ಕಾರ್ಯಕರ್ತೆ, ರಾಮನಗರ, ಬೇಟೋಳಿ.----ಸ್ವಂತ ಹಣದಲ್ಲಿ ಸಾರ್ವಜನಿಕ ರಸ್ತೆಗೆ ಕಾಂಕ್ರಿಟ್ ಅಳವಡಿಸಿದ ಮಧು ಎಲ್ಲರ ಪ್ರಶಂಸೆಗೆ ಅರ್ಹರು. ಜೊತೆಗೆ ಸಾರ್ವಜನಿಕರಿಗೂ ರಸ್ತೆಯಲ್ಲಿ ಮುಕ್ತವಾಗಿ ಸಂಚರಿಸಲು ಅನುಕೂಲ ಮಾಡಿ ಕೊಟ್ಟಿರುತ್ತಾರೆ. ಅವರ ಸಾಮಾಜಿಕ ಕಾಳಜಿ ಎಲ್ಲರೂ ಮೆಚ್ಚುವಂತಹದ್ದು.
-ನಿತ್ಯಾನಂದ ಬಿ. ಬಿ., ರಾಮನಗರ ಬೇಟೋಳಿ ಗ್ರಾಮಸ್ಥ.