ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.

ಗದಗ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ ಫೆ. 18ರಂದು ನಗರದ ವಿವೇಕಾನಂದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮಾವೇಶವನ್ನು ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಿರ್ವಹಿಸಿ ಯಶಸ್ವಿಗೊಳಿಸಲು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ ಏರ್ಪಡಿಸುವ ಕುರಿತು ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಕಾರ್ಯಕ್ರಮದ ಸ್ಥಳವು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು.

ಪಂಚ ಗ್ಯಾರಂಟಿ ಯೋಜನೆಗಳ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಬಿಂಬಿಸುವ ಮಳಿಗೆಗಳನ್ನು(ಸ್ಟಾಲ್‌ಗಳನ್ನು) ಸ್ಥಾಪಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಸಮಾವೇಶ ಕಾರ್ಯಕ್ರಮವು ಯಾವುದೇ ಲೋಪ ದೋಷಗಳಿಲ್ಲದಂತೆ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಜರುಗುವಂತೆ ನೋಡಿಕೊಳ್ಳಬೇಕು ಎಂದರು. ಸಭೆಯಲ್ಲಿ ಬ್ಯಾನರ್‌ ಅಳವಡಿಕೆ, ಕಲಾ ತಂಡಗಳ ಆಯ್ಕೆ, ಊಟ ಉಪಹಾರದ ವ್ಯವಸ್ಥೆ, ಸೂಕ್ತ ಬಂದೋಬಸ್ತ್, ತುರ್ತು ವೈದ್ಯಕೀಯ ಸೇವೆ, ಫಲಾನುಭವಿಗಳ ಯಶೋಗಾಥೆ, ಸಾರಿಗೆ ವ್ಯವಸ್ಥೆ, ಎಲ್‌ಇಡಿ ಅಳವಡಿಕೆ, ವೇದಿಕೆ ವ್ಯವಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮ ಕುರಿತಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.ಈ ವೇಳೆ ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ, ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಮಲ್ಲೂರ ಬಸವರಾಜ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.