ಬ್ಯಾಲಹಳ್ಳಿ ಗೋವಿಂದಗೌಡರು ಹತ್ತು ವರ್ಷ ಬ್ಯಾಂಕ್‌ಗಾಗಿ ಶ್ರಮಿಸಿರುವುದಾಗಿ ಹೇಳುತ್ತಾರೆ. ಅವರ ಸೇವೆಯನ್ನು ಗೌರವಿಸುತ್ತೇವೆ.

ಹಣಕಾಸು ವ್ಯವಹಾರಗಳ ಸಮಗ್ರ ಪರಿಶೀಲನೆಯಾಗಲಿ । ನ್ಯಾಯಾಲಯಗಳಲ್ಲಿರುವ ಪ್ರಕರಣ ಇತ್ಯರ್ಥಕ್ಕೆ ಸಹಕಾರ ಅಗತ್ಯ: ಅನಿಲ್‌ಕುಮಾರ್

ಕನ್ನಡಪ್ರಭ ವಾರ್ತೆ ಕೋಲಾರ

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಹಣಕಾಸು ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಯಬೇಕು. ತನಿಖೆಗಳಿಗೆ ತಡೆಯಾಜ್ಞೆ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥ ಆಗಬೇಕು. ಬ್ಯಾಂಕ್‌ನ ಹಿತದೃಷ್ಟಿಯಿಂದ ಮಾಜಿ ಅಧ್ಯಕ್ಷರೂ ಆಗಿರುವ ಹಾಲಿ ನಿರ್ದೇಶಕ ಬ್ಯಾಲಹಳ್ಳಿ ಗೋವಿಂದಗೌಡರು ತನಿಖೆಗೆ ಸಹಕರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್‌ಕುಮಾರ್ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ನಡೆದಿವೆ. ಆಡಳಿತ ಮಂಡಳಿ ಚುನಾವಣೆ, ವ್ಯವಸ್ಥಾಪಕ ನಿರ್ದೇಶಕರು (ಎಂಡಿ), ವಿಶೇಷಾಧಿಕಾರಿಗಳ ನೇಮಕ, ಲೋಕಾಯುಕ್ತ ತನಿಖೆ, ಸಿಒಡಿ ತನಿಖೆ, ರಿಆಡಿಟ್ ಹಾಗೂ ಹಣಕಾಸು ವ್ಯವಹಾರಗಳ ತನಿಖೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿವೆ. ಕೆಲವು ಪ್ರಕರಣಗಳಲ್ಲಿ ತಡೆಯಾಜ್ಞೆ ನೀಡಲಾಗಿದ್ದು, ಇನ್ನು ಕೆಲವು ವಿಚಾರಣೆ ಹಂತದಲ್ಲಿವೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಣಕಾಸು ಅಕ್ರಮಗಳ ಆರೋಪಗಳ ತನಿಖೆಗೂ ತಡೆಯಾಜ್ಞೆ ತಂದಿದ್ದಾರೆ. ಈ ಪ್ರಕರಣ ಇತ್ಯರ್ಥ ಹಾಗೂ ತನಿಖೆಗೆ ಸಹಕಾರ ಅಗತ್ಯವಾಗಿದೆ ಎಂದರು.

ತನಿಖೆಯಿಂದ ಸತ್ಯಾಂಶ ಹೊರಬರಲಿ:

ಬ್ಯಾಲಹಳ್ಳಿ ಗೋವಿಂದಗೌಡರು ಹತ್ತು ವರ್ಷ ಬ್ಯಾಂಕ್‌ಗಾಗಿ ಶ್ರಮಿಸಿರುವುದಾಗಿ ಹೇಳುತ್ತಾರೆ. ಅವರ ಸೇವೆಯನ್ನು ಗೌರವಿಸುತ್ತೇವೆ. ಆದರೆ, ಆ ಅವಧಿಯಲ್ಲಿ ಹಣಕಾಸು ವ್ಯವಹಾರಗಳಲ್ಲಿ ಅಥವಾ ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ಲೋಪಗಳಾಗಿದ್ದರೆ ಅವುಗಳೂ ತನಿಖೆಯಿಂದ ಹೊರಬರಬೇಕು. ಅಕ್ರಮಗಳು ನಡೆದಿವೆಯೇ ಎಂಬುದನ್ನು ದಾಖಲೆಗಳ ಆಧಾರದಲ್ಲಿ ಪರಿಶೀಲಿಸಬೇಕು. ಅದಕ್ಕೆ ಸಹಕಾರ ಕೊಡಬೇಕು ಎಂದು ಹೇಳಿದರು.

ಬ್ಯಾಂಕ್‌ನ ಹಣಕಾಸು ವ್ಯವಹಾರಗಳ ಮರುಪರಿಶೀಲನೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ತನಿಖೆಯಿಂದ ಸತ್ಯಾಂಶ ಹೊರಬಂದರೆ ಬ್ಯಾಂಕ್‌ನ ವಿಶ್ವಾಸಾರ್ಹತೆ ಹೆಚ್ಚಲಿದೆ. ಆರೋಪಗಳ ಬಗ್ಗೆ ಸ್ಪಷ್ಟತೆ ದೊರೆಯುವುದರಿಂದ ಠೇವಣಿದಾರರು, ರೈತರು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಲ್ಲಿಯೂ ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ ಎಂದರು.

ಚಿಂತಾಮಣಿ ತಾಲ್ಲೂಕಿನ ಕೆಲವು ಮಹಿಳಾ ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ಸಾಲ ಮಂಜೂರಾಗಿರುವ ದಾಖಲೆಗಳಿದ್ದರೂ, ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂಬ ಆರೋಪಗಳಿವೆ. ಈ ಸಂಬಂಧ ಕೆಲವು ಮಹಿಳೆಯರು ಪೊಲೀಸ್ ಠಾಣೆಗಳಿಗೆ ತೆರಳಿ ದೂರು ನೀಡಿದ್ದಾರೆ. ಕೋಲಾರ ಶಾಖೆ ಸೇರಿದಂತೆ ವಿವಿಧ ಶಾಖೆಗಳಲ್ಲಿ ಹಣಕಾಸು ದುರುಪಯೋಗ ನಡೆದಿರುವ ಆರೋಪಗಳೂ ಕೇಳಿಬಂದಿವೆ ಎಂದು ಹೇಳಿದರು.

ಆಡಳಿತ ಮಂಡಳಿ ಚುನಾವಣೆ ವಿಳಂಬ:

ಬ್ಯಾಂಕ್‌ನ ಆಡಳಿತ ಮಂಡಳಿ ಚುನಾವಣೆ ವಿಳಂಬವಾಗಲು ಸಹಕಾರ ಕಾಯ್ದೆಯ ನಿಯಮಗಳು, ಅನರ್ಹ ಮತದಾರರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಮತ್ತು ಮಂಚೇನಹಳ್ಳಿ ತಾಲೂಕುಗಳಿಗೆ ನಿರ್ದೇಶಕ ಸ್ಥಾನ ಕಲ್ಪಿಸುವ ವಿಚಾರಗಳು ಕಾರಣವಾಗಿವೆ. ಈ ಸಂಬಂಧದ ಪ್ರಕರಣಗಳು ನ್ಯಾಯಾಲಯಗಳಲ್ಲಿರುವುದರಿಂದಲೂ ಚುನಾವಣೆ ಪ್ರಕ್ರಿಯೆಗೆ ವಿಳಂಬವಾಗಿತ್ತು ಎಂದು ವಿವರಿಸಿದರು.

ಚುನಾಯಿತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಬ್ಯಾಂಕ್‌ನ ಕಾರ್ಯನಿರ್ವಹಣೆಗೆ ಸೂಕ್ತ ಅವಕಾಶ ನೀಡಬೇಕು. ಹಿಂದಿನ ಆಡಳಿತ ಮಂಡಳಿಯ ಅವಧಿಯ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸುವುದರ ಜತೆಗೆ, ಹೊಸ ಆಡಳಿತ ಮಂಡಳಿಯೂ ಬ್ಯಾಂಕ್‌ನ ಹಿತಾಸಕ್ತಿ ಕಾಪಾಡಲು ಆದ್ಯತೆ ನೀಡಬೇಕು. ಪ್ರತಿಯೊಂದು ವಿಚಾರವೂ ನ್ಯಾಯಾಲಯದ ಮೆಟ್ಟಿಲೇರುವ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

ಬ್ಯಾಂಕ್‌ನಲ್ಲಿನ ಆರೋಪಗಳು, ತನಿಖೆಗಳು ಮತ್ತು ನ್ಯಾಯಾಲಯಗಳಲ್ಲಿರುವ ಪ್ರಕರಣಗಳ ಕುರಿತು ಮಾಧ್ಯಮಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮುಕ್ತ ಚರ್ಚೆ ನಡೆಯಬೇಕು. ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸಂಬಂಧಪಟ್ಟ ಎಲ್ಲರನ್ನು ಆಹ್ವಾನಿಸಿ ಚರ್ಚೆಗೆ ವೇದಿಕೆ ಕಲ್ಪಿಸಿದರೆ, ಸಮಸ್ಯೆಗಳ ಕುರಿತು ಸ್ಪಷ್ಟತೆ ದೊರೆಯುವುದರ ಜತೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆಂದಟ್ಟಿ ಶಿವಕುಮಾರ್, ಸುಗಟೂರು ಸೊಸೈಟಿ ಅಧ್ಯಕ್ಷ ಅಂಕತಟ್ಟಿ ಭಾಸ್ಕರ್ ಬಾಬು, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್, ಹಿರಿಯ ಕಾಂಗ್ರೆಸ್ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ ಮತ್ತು ಸೈಯದ್ ಆಫ್ಸರ್ ಇದ್ದರು.