ಸಾರಾಂಶ
ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ನಡೆಯುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸದಾ ಕಾರ್ಯಶೀಲವಾಗಿರುತ್ತದೆ. ಇಲಾಖೆಯೊಂದಿಗೆ ಆಟೋಚಾಲಕರು ಸಹ ಕೈಜೋಡಿಸಿದಲ್ಲಿ ಅಪರಾಧ ತಡೆಗೆ ನೆರವಾಗಲಿದೆ. ಆಟೋಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುತ್ತಾ ಸಾರ್ವಜನಿಕರ ಸೇವೆಯಲ್ಲಿ ತೊಡಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ನಡೆದ ಸೌಲಭ್ಯಗಳ ವಿತರಣೆ ಹಾಗೂ ಆಟೋಚಾಲಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಚಾಲಕರಿಗೆ ಗುರುತಿನ ಚೀಟಿ
ಜಿಲ್ಲೆಯಲ್ಲಿ ಆಟೋ ಚಾಲಕರು ಸಂಚಾರಿನಿಯಮಗಳನ್ನು ಪಾಲಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ವಾಹನ ನಿಲ್ದಾಣಗಳನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾ ಸಾರ್ವ ಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿರುವುದಕ್ಕಾಗಿ ಇಲಾಖೆ ವತಿಯಿಂದ ಅಭಿನಂದಿಸುತ್ತೇನೆ. ಇದೇ ಮೊದಲ ಬಾರಿಗೆ ಆಟೊ ಚಾಲಕರ ಸಂಘದಿಂದ ಚಾಲಕರಿಗೆ ಗುರುತಿನ ಚೀಟಿ ನೀಡಲಾಗುತ್ತಿದೆ. ಚಾಲಕರ ಹಿಂಭಾಗದ ಸೀಟಿನಲ್ಲಿ ಚಾಲಕರ ಪೋಟೋ ಮಾಹಿತಿಯುಳ್ಳ ಕಾರ್ಡನ್ನು ಪ್ರಯಾಣಿಕರಿಗೆ ಕಾಣುವಂತೆ ಹಾಕಬೇಕು ಎಂದರು.ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆಯುವ ಹಾಗೆ ನಿಮ್ಮ ಆರೋಗ್ಯ ಮತ್ತು ಕುಟುಂಬ ಮಕ್ಕಳ ಬಗ್ಗೆ ಕಾಳಜಿವಹಿಸಿ. ನಿಮ್ಮಂತೆ ಮಕ್ಕಳನ್ನೂ ಆಟೋ ಚಾಲಕರನ್ನಾಗಿ ಮಾಡುವ ಬದಲು ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಆಟೋ ಚಾಲಕರ ಸಂಘಕ್ಕೆ ಕೊಡುಗೆ
ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಮಾತನಾಡಿ, ಆಟೋ ಚಾಲಕರ ಮತ್ತು ಮಾಲಿಕರ ಸಂಘವು ಉತ್ತಮವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಬೆವರನ್ನು ನಂಬಿ ಬದುಕುತ್ತಿರುವ ನೀವು ದಿನದ 24 ಗಂಟೆಯೂ ನಾಗರಿಕರಿಗೆ ಉತ್ತಮ ಸೇವೆ ನೀಡುವ ಸಾರಥಿಗಳಾಗಿದ್ದಿರಿ. ನಿಮ್ಮ ಸಂಘವು ಉಜ್ವಲವಾಗಿ ಬೆಳೆಯಲಿ, ಆಟೋ ಚಾಲಕರ ಕುಟುಂಬಗಳಿಗೆ ಆಸರೆ ಯಾಗಿ ನಿಲ್ಲಲಿ ಎನ್ನುವ ಮಹದೋದ್ದೇಶದಿಂದ 1 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದೇನೆ ಎಂದು ಘೋಷಿಸಿದರು. ಹಗಲು ರಾತ್ರಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿರುವ ನೀವು ಆಕಸ್ಮಿಕವಾಗಿ ಅಕಾಲಿಕ ಮರಣಕ್ಕೆ ತುತ್ತಾರೆ, ನೊಂದ ಕುಟುಂಬಕ್ಕೆ ಕನಿಷ್ಟ 1 ಲಕ್ಷ ಹಣವನ್ನು ನೀಡುವಷ್ಟರ ಮಟ್ಟಿಗೆ ಸಂಘಟನೆ ಯನ್ನು ಬಲಗೊಳಿಸುವ ಕೆಲಸ ಮಾಡಬೇಕು. ಅಕಾಲಿಕ ಮರಣಕ್ಕೆ ತುತ್ತಾಗುವ ಕುಟುಂಬದ ಮಕ್ಕಳ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದರು.
ಎಸ್ಪಿ ಚೌಕ್ಸೆಗೆ ಸನ್ಮಾನ
ಕಾರ್ಯಕ್ರಮದಲ್ಲಿ ಗುರುತಿನ ಚೀಟಿ, ವಿಮಾ ಸೌಲಭ್ಯ,ಪ್ರತಿಭಾ ಪುರಸ್ಕಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾನಸ ಆಸ್ಪತ್ರೆಗಳ ನಿರ್ಧೇಶಕ ಡಾ.ಮಧುಕರ್,ಕರ್ನಾಟಕ ರಾಜ್ಯ ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್,ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನ ಅಜ್ಮಿ ,ಸಮಾಜ ಸೇವಕ ಹೋಟೆಲ್ ರಾಮಣ್ಣ, ಹಿರಿಯ ಆಟೋ ಮೆಕ್ಯಾನಿಕ್ ನಜೀರ್ ಮತ್ತಿತರರು ಮಾತನಾಡಿದರು.ಈ ವೇಳೆ ಜಿಲ್ಲಾ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಜಿಲ್ಲಾಧ್ಯಕ್ಷ ಎನ್.ಬಾಲಕೃಷ್ಣ(ಮೋಬೈಲ್ ಬಾಬು), ಗೌರವಾಧ್ಯಕ್ಷ ಡಾಂಬು ಶ್ರೀನಿವಾಸ್, ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ, ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕಲೀಲ್, ಖಜಾಂಚಿ ಸಾದಿಕ್ ಪಾಷ, ಜಂಟಿ ಕಾರ್ಯದರ್ಶಿ ಆರ್.ಆನಂದ್, ವಿ.ಪ್ರಕಾಶ್, ತಾ.ಸಂಚಾಲ ಕೆ.ಮುನಿರಾಜು, ಎನ್.ಮಂಜುನಾಥ್, ಸದಸ್ಯರಾದ ಕೆಂಚೇಗೌಡ, ನಾರಾಯಣಸ್ವಾಮಿ, ರಮೇಶ್, ಸುಬಾನ್, ರಿಜ್ವಾನ್ ಅಹ್ಮದ್, ನರಸಿಂಹ ಮೂರ್ತಿ ಮತ್ತಿತರರು ಇದ್ದರು.