ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕನ್ನಡ ನಾಡು ನುಡಿ ಭಾಷೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಕರ್ನಾಟಕ ಸರ್ಕಾರದ ಆಶಯವು ಕೂಡ ಅದೇ ಆಗಿದೆ. ಜಿಲ್ಲೆಯಲ್ಲಿ ನಡೆಯುವ ಎಲ್ಲ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಕನ್ನಡಿಗರಾಗಿ ಸಹಕಾರ ನೀಡಿ ಎಂದು ವಿರಾಜಪೇಟೆ ಶಾಸಕ, ಜಿಲ್ಲಾ ಸಮ್ಮೇಳನದ ಗೌರವಾಧ್ಯಕ್ಷ ಎ.ಎಸ್ ಪೊನ್ನಣ್ಣ ನುಡಿದರು.ಪೊನ್ನಂಪೇಟೆ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಸಮ್ಮೇಳನಕ್ಕೆ ಸಹಕಾರ ಕೊಡಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜಿಲ್ಲೆಯಲ್ಲಿ ನಡೆಯುತ್ತಿರುವ ಸಮ್ಮೇಳನಗಳ ಕುರಿತು ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.ಪೊನ್ನಂಪೇಟೆ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾತನಾಡಿ ಕೋಳೆರ ದಯಾ ಚಂಗಪ್ಪ ಇಲ್ಲಿಯವರೆಗಿನ ಎಲ್ಲ ಕನ್ನಡ ಕಾರ್ಯಕ್ರಮಗಳಿಗೆ ಸರ್ಕಾರಿ ಅಧಿಕಾರಿಗಳು ನೀಡಿದ್ದಾರೆ. ಇದೇ ರೀತಿ ಸಹಕಾರವನ್ನು ಮುಂದೆಯೂ ನೀಡಬೇಕೆಂದು ಮನವಿ ಮಾಡಿದರು. ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಅಣ್ಣಳಮಾಡ ಲಾಲಾ ಅಪ್ಪಣ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ, ಹುದಿಕೇರಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಾನಂಗಡ ಅರುಣ ಇದ್ದರು.
ಸಭಾಂಗಣದಲ್ಲಿ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ವಿರಾಜಪೇಟೆ ತಹಸೀಲ್ದಾರರಾದ ಪ್ರವೀಣ್, ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಸಂಜನ, ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ಪೊನ್ನಂಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಶ್, ಪೊಲೀಸ್ ವೃತ್ತ ನಿರೀಕ್ಷಕರಾದ ಶಿವರುದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್, ವಾರ್ತಾಧಿಕಾರಿ ಚಿನ್ನಸ್ವಾಮಿ ಹಾಗೂ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಮೇ 20ರಂದು ಕಡಂಗದಲ್ಲಿ ಜರುಗಲಿದೆ. ಕೊಡಗು ಜಿಲ್ಲಾ ಸಮ್ಮೇಳನವು 29, 30 ರಂದು ಸುಂಟಿಕೊಪ್ಪದಲ್ಲಿ ಜರುಗಲಿದೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಹುದಿಕೇರಿಯಲ್ಲಿ ಜೂ.1 ರಂದು ನಡೆಯಲಿದೆ.
