ಸಾರಾಂಶ
ಚಿತ್ರದುರ್ಗದಲ್ಲಿ ಸಂಚಾರಿ ಪೊಲೀಸರ ಹೊಸ ಪಾಲಿಸಿ । ದಿಕ್ಕೆಟ್ಟ ವಾಹನ ಸವಾರರುಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಶಾಸಕ ವೀರೇಂದ್ರ ಪಪ್ಪಿ ರಸ್ತೆ ಅಗಲೀಕರಣ ಶತ ಸಿದ್ಧವೆಂಬ ಫರ್ಮಾನು ಹೊರಡಿಸಿದ್ದಾರೆ. ಅಚ್ಚರಿ ಎಂದರೆ ರಸ್ತೆ ಅಗಲೀಕರಣದ ಪ್ರಸ್ತಾಪದ ನಡುವೆಯೂ ವ್ಯಾಪಾರಿಗಳು ಮತ್ತಷ್ಟು ಬೀದಿಗೆ ಬಂದು ತಮ್ಮ ವಹಿವಾಟು ವಿಸ್ತರಿಸಿಕೊಂಡಿದ್ದು ಸುಗಮ ಸಂಚಾರಕ್ಕೆ ಮತ್ತಷ್ಟು ಸಂಚಕಾರ ತಂದಂತಾಗಿದೆ. ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಇಂತಹದ್ದೊಂದು ತೀರ್ಮಾನ ಕೈಗೊಂಡಿತಾ ಎಂಬ ಅನುಮಾನಗಳು ಮೂಡಿವೆ.
ಚಿತ್ರದುರ್ಗ ನಗರದ ಕಿರಿದಾದ ರಸ್ತೆಗಳ ಅಂಚಿಗೆ ಮಹಲುಗಳು ಲಗ್ಗೆ ಇಟ್ಟಿದ್ದು ವಾಹನ ನಿಲುಗಡೆಗೆ ರಸ್ತೆ ಅರ್ಧ ಭಾಗವ ಕಬಳಿಸುತ್ತಿವೆ. ಮಹಲುಗಳಿಗೆ ಧಾವಿಸುವ ಜನತೆ ತಮ್ಮ ವಾಹನಗಳ ನಿಲ್ಲಿಸಲು ಸೂಕ್ತ ಜಾಗವಿಲ್ಲದ ಕಾರಣ ರಸ್ತೆ ಆಕ್ರಮಿಸುತ್ತಿದ್ದಾರೆ. ಇದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಉಮಾಪತಿ ಕಲ್ಯಾಣ ಮಂಟಪದ ಸಮೀಪ ಇರುವ ವಿಶಾಲ್ ಮಾರ್ಟ್ ನೆಲಮಹಡಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಅಲ್ಲಿ ಅವಕಾಶ ಕಲ್ಲಿಸಲಾಗುತ್ತಿಲ್ಲ. ಹಾಗಾಗಿ ದ್ವಿಚಕ್ರ ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದಾರೆ.ಚಿತ್ರದುರ್ಗ ನಗರಠಾಣೆ ಪಕ್ಕದಲ್ಲಿಯೇ ಕಳೆದ 2 ದಿನಗಳ ಹಿಂದೆ ಸ್ಕೌಟ್ಸ್ ಕಟ್ಟಡದಲ್ಲಿ ಪ್ರಸಾದಂ ಹೋಟೆಲ್ ಆರಂಭವಾಗಿದೆ. ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲಿಯೇ ಈ ಹೋಟೆಲ್ ಇದ್ದು ನಗರದ ಹೃದಯ ಭಾಗದಲ್ಲಿ ಇರುವುದರಿಂದ ಹೆಚ್ಚು ರಶ್ ಆಗಿದೆ. ಈ ಹೋಟೆಲ್ ಗೆ ಆಗಮಿಸುವ ಮಂದಿ ತಮ್ಮ ವಾಹನಗಳ ರಸ್ತೆ ಮೇಲೆ ನಿಲ್ಲಿಸುತ್ತಿದ್ದಾರೆ. ಗಾಂಧಿ ವೃತ್ತದ ಕಡೆಯಿಂದ ಅಂಬೇಡ್ಕರ್ ಪ್ರತಿಮೆ ದಾಟಿಕೊಂಡು ಬರುವ ವಾಹನಗಳು ಏನಾದರೂ ತುಸು ನಿಯಂತ್ರಣ ತಪ್ಪಿದರೆ ನೇರವಾಗಿ ರಸ್ತೆ ಬದಿಯಲ್ಲಿ ನಿಂತ ವಾಹನಗಳ ಮೇಲೆ ನುಗ್ಗುವ ಅಪಾಯವಿದೆ. ಇಲ್ಲಿಯೇ ಅವೈಜ್ಞಾನಿಕ ಡಿವೈಡರ್ ಗೆ ಯೂಟರ್ನ್ ನೀಡಲಾಗಿದೆ. ಹೊಸ ಹೋಟೆಲ್ ಮುಂಭಾಗ ವಾಹನಗಳು ನಿಲ್ಲುವುದರಿಂದ ಯೂಟರ್ನ್ ಕಷ್ಟವಾಗಿದೆ.
ಜೆಸಿಆರ್ ಬಡಾವಣೆಯ 7ನೇ ಕ್ರಾಸ್‌ನಲ್ಲಿ ಗುರುವಾರದಿಂದ ಮೋರ್ ಸೂಪರ್ ಮಾರ್ಕೆಟ್ ಆರಂಭವಾಗಿದೆ. ಅಪಾಯಕಾರಿ ಯೂಟರ್ನ್ ಎಂಬ ಕಾರಣಕ್ಕೆ ಕಳೆದ ತಿಂಗಳು ಇಲ್ಲಿ ರಸ್ತೆ ಸುರಕ್ಷತಾ ಸಮಿತಿ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು 10 ಮೀಟರ್ ಡಿವೈಡರ್ ತೆರವುಗೊಳಿಸಿ ಸುಲಲಿತ ಯೂಟರ್ನ್ ಗೆ ಅವಕಾಶ ಮಾಡಿಕೊಟ್ಟಿದ್ದರು. ವಿಚಿತ್ರವಾದರೂ ಸತ್ಯ ಎನ್ನುವಂತೆ ಇದೇ ಯೂಟರ್ನ್‌ನಲ್ಲಿ ಮೋರ್ ಸೂಪರ್ ಮಾರ್ಕೆಟ್ ಆರಂಭವಾಗಿದ್ದು ಮಾರಾಟದ ವಸ್ತುಗಳೆಲ್ಲ ಬೀದಿಗೆ ಬಂದಿವೆ. ದ್ವಿಚಕ್ಕೆ ವಾಹನಗಳು ರಸ್ತೆ ಕಬಳಿಸಿರುವುದರಿಂದ ಯೂಟರ್ನ್ ಸಾಧ್ಯವಾಗದಂತಾಗಿದೆ. ಲೋಕೋಪಯೋಗಿ ಇಲಾಖೆ ಡಿವೈಡರ್ ತೆರವುಗೊಳಿಸಿದ ಕ್ರಮ ನಗೆ ಪಾಟಲಿಗೆ ಈಡಾಗಿದೆ.ವಿಪಿ ಬಡಾವಣೆಯ ಮೊದಲ ಕ್ರಾಸ್‌ನಲ್ಲಿ ಪ್ರದೀಪ್ ಆರ್ಕೆಡ್ ಇದ್ದು ಇಲ್ಲಿಯೂ ಕೂಡಾ ವಾಹನಗಳ ರಸ್ತೆ ಮೇಲೆ ನಿಲ್ಲಿಸಲಾಗುತ್ತಿದೆ. ಇಂತಹ ಕಡೆ ನೋ ಪಾರ್ಕಿಂಗ್ ಬೋರ್ಡ್ ನೆಟ್ಟಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದರೆ ಸಂಚಾರಿ ಪೊಲೀಸರು ಈ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲವೆಂಬ ದೂರುಗಳು ನಾಗರಿಕರಿಂದ ಕೇಳಿ ಬರುತ್ತಿವೆ. ರಸ್ತೆಗಳು ಇರುವುದು ಸಂಚಾರಕ್ಕೋ ಅಥವಾ ವ್ಯಾಪಾರ ಮಾಡಲೋ ಎಂಬ ಅನುಮಾನಗಳು ಕೋಟೆ ನಾಡಿಲ್ಲಿ ದಟ್ಟವವಾಗಿವೆ.