ಮುಂಡರಗಿ ಆರ್‌ಎಫ್‌ಒ ಮಂಜುನಾಥ ಆರ್. ಮೇಗಲಮನಿ ಮಾತನಾಡಿ, ಮೌಢ್ಯ, ಕಂದಾಚಾರಕ್ಕೆ ಒಳಗಾಗಿ ಅರಣ್ಯಕ್ಕೆ ಬೆಂಕಿ ಹಚ್ಚಬೇಡಿ. ಕಪ್ಪತ್ತಗುಡ್ಡ ಸರ್ಕಾರದ ಆಸ್ತಿ ಎಂದು ಭಾವಿಸದೆ ನಮ್ಮೆಲ್ಲರ ಆಸ್ತಿ ಎಂದು ಭಾವಿಸಿ ಕಾಪಾಡಬೇಕು ಎಂದರು.

ಡಂಬಳ: ಪರಿಸರ ಉಳಿಸಿ ಬೆಳೆಸಬೇಕಾದರೆ ಜನತೆಯ ಸಹಕಾರ ಮುಖ್ಯ ಎಂದು ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮಿಗಳು ತಿಳಿಸಿದರು.

ಡಂಬಳ ಹೋಬಳಿಯ ಡೋಣಿ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗದಗ ಪ್ರಾದೇಶಿಕ ವಿಭಾಗ, ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ವಾಲಿಬಾಲ್ ಪಂದ್ಯಾವಳಿ, ಕಾಡ್ಗಿಚ್ಚು ತಡೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯದ 7ಕೋಟಿ ಕನ್ನಡಿಗರು ಕಪ್ಪತ್ತಗುಡ್ಡದತ್ತ ನೋಡುತ್ತಿದ್ದಾರೆ. ಕಪ್ಪತ್ತಗುಡ್ಡ ಸಸ್ಯ ಸಂಪತ್ತನ್ನು ಸುತ್ತಮುತ್ತಲಿನ ಗ್ರಾಮಸ್ಥರು ರಕ್ಷಣೆಗಾಗಿ ರಕ್ಷಕರಂತೆ ಕೆಲಸ ಮಾಡಬೇಕಾಗಿದೆ ಎಂದರು.

ಮುಂಡರಗಿ ಆರ್‌ಎಫ್‌ಒ ಮಂಜುನಾಥ ಆರ್. ಮೇಗಲಮನಿ ಮಾತನಾಡಿ, ಮೌಢ್ಯ, ಕಂದಾಚಾರಕ್ಕೆ ಒಳಗಾಗಿ ಅರಣ್ಯಕ್ಕೆ ಬೆಂಕಿ ಹಚ್ಚಬೇಡಿ. ಕಪ್ಪತ್ತಗುಡ್ಡ ಸರ್ಕಾರದ ಆಸ್ತಿ ಎಂದು ಭಾವಿಸದೆ ನಮ್ಮೆಲ್ಲರ ಆಸ್ತಿ ಎಂದು ಭಾವಿಸಿ ಕಾಪಾಡಬೇಕು. 400ಕ್ಕೂ ಹೆಚ್ಚು ಔಷಧೀಯ ಸಸ್ಯ ಸಂಪತ್ತು, 23ಕ್ಕೂ ಹೆಚ್ಚು ವನ್ಯಪ್ರಾಣಿಗಳ ಸಂಪತ್ತು ಇವೆ. ಇವುಗಳೆಲ್ಲವೋ ನಮ್ಮ ಸಂಪತ್ತು ಎಂದು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಕಪ್ಪತ್ತಗುಡ್ಡ ಬೆಂಕಿ ಹಚ್ಚುವುದರಿಂದ ಔಷಧೀಯ ಸಸ್ಯ ಸಂಪತ್ತು ಮತ್ತು ಪ್ರಾಣಿಗಳು ಸಾವು ಆಗುತ್ತದೆ. ಇದು ನಿಮ್ಮ ಕುಟುಂಬದ ಸದಸ್ಯರ ಸಾವು ಇದ್ದಹಾಗೆ. ಆ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಬೇಡಿ. ಕಪ್ಪತ್ತಗುಡ್ಡ ಎಂದರೆ ದ್ರೋಣಗಿರಿ, ಕಪ್ಪತ್ತಗಿರಿ, ಸುವರ್ಣಗಿರಿ ಆಗಿದ್ದು, ಇದನ್ನು ಉಳಿಸಿದರೆ ಮುಂದಿನ ಪೀಳಿಗೆ ಉಳಿಸಲು ಸಾಧ್ಯ. ಅತ್ಯಮೂಲ್ಯ ಸಂಪತ್ತನ್ನು ಉಳಿಸಲು ಅರಣ್ಯ ಇಲಾಖೆಯ ಜತೆಗೆ ಎಲ್ಲ ಜನತೆಯ ಸಹಕಾರ ಬಹಳ‌ ಮುಖ್ಯ ಎಂದರು.

ರೈತ ಸಂಘದ ಅಧ್ಯಕ್ಣ ಶಂಕರಗೌಡ ಜಾಯನಗೌಡರ, ಎಸ್‌ಸಿ ಘಟಕದ ಅಧ್ಯಕ್ಷ ಸೋಮಣ್ಣ ಹೈತಾಪುರ, ಕಪ್ಪತ್ತಗುಡ್ಡ ಸಂರಕ್ಷಣೆ ವೇದಿಕೆಯ ಅಧ್ಯಕ್ಷ ಭರಮಪ್ಪ ಕಿಲಾರಿ ಮಾತನಾಡಿ, ಒಂದು ಗಿಡ ಬಂದು ತನ್ನ ಜೀವಿತಾವಧಿಯಲ್ಲಿ ₹12 ಲಕ್ಷ ಸೇವೆ ನೀಡುತ್ತದೆ. ನಮ್ಮ ಹೃದಯ ಬಡಿತ ನಿರಂತರವಾಗಿ ಬಡಿದುಕೊಳ್ಳಲು ಆಮ್ಲಜನಕ ನೀಡುವ ಗಿಡದಿಂದ ಮಾತ್ರ ಸಾಧ್ಯ. ಪ್ರಾಣಿ, ಪಕ್ಷಿಗಳು ಜನತೆಯ ಕೊಂಡಿಯಾಗಿ ಆಹಾರ ಉತ್ಪಾದನೆ ಕೊಂಡಿಯಾಗಿ ಕೆಲಸ ಮಾಡುತ್ತವೆ ಎಂದರು.

ಯುವ ಕವಿ ಸಿದ್ದು ಸತ್ಯಣ್ಣವರ ಮಾತನಾಡಿದರು. ಡಂಬಳ ಹೋಬಳಿಯ ಗ್ರಾಮಗಳ 485 ಕುರಿ ಕಾಯುವವರಿಗೆ ಹೊಟ್ಟೆಚೀಲ, ಬ್ಯಾಟರಿ, ಸ್ಟೀಲ್ ನೀರಿನ ಬಾಟಲ್ ವಿತರಿಸಲಾಯಿತು. ಕೃಷಿಯಲ್ಲಿ ಅರಣ್ಯ ಸಾಧಕರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 35ಕ್ಕೂ ಸಾಧಕರಿಗೆ, ಯೋಗಾಸನದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮುಂಡರಗಿ ತಾಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಕಪ್ಪತ್ತಗುಡ್ಡದಿಂದ ಆಗುವ ಪರಿಸರದ ಲಾಭಗಳ ಕುರಿತಾದ ಮಾಹಿತಿ ಬೋರ್ಡ್ ವಿತರಿಸಲಾಯಿತು. 25ಕ್ಕೂ ಹೆಚ್ಚು ವಾಲಿಬಾಲ್ ತಂಡಗಳಿಗೆ ಟೀ ಶಟ್೯ ವಿತರಣೆ, ಬೈಕ್, ಕಾರುಗಳಿಗೆ ಕಪ್ಪತ್ತಗುಡ್ಡದ ಹೆಸರಿನಲ್ಲಿ ಪ್ರಾಣಿಗಳ ಭಾವಚಿತ್ರಗಳುಳ್ಳ ಸ್ಟಿಕ್ಕರ್, ಭಿತ್ತಿಪತ್ರ ವಿತರಿಸಲಾಯಿತು. ಕಲಾವಿದ ನಿಂಗಪ್ಪ ಗುಡ್ಡದ ಸಂಗಡಗರಿಂದ ಕಪ್ಪತ್ತಗುಡ್ಡದ ಕುರಿತು ಜಾನಪದ ಹಾಡುಗಳನ್ನು ಹಾಡಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಠದ, ಗ್ಯಾರಂಟಿ ಸಮಿತಿ ಸದಸ್ಯರಾದ ರಾಮಣ್ಣ ಮೇಗಲಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಅಳವಂಡಿ, ಲಕ್ಷ್ಮಿ ಸೊಗಟಿ, ಕಾಶಪ್ಪ ಅಳವಂಡಿ, ಗ್ರಾಪಂ ಮಾಜಿ ಅಧ್ಯಕ್ಷ ರಮೇಶ ಪವಾರ, ಗೌಸಿದ್ಧಯ್ಯ ಹಳ್ಳಿಕೇರಿಮಠ, ನಿಂಗನಗೌಡ ಹರ್ತಿ, ಹನಮಪ್ಪ ಗೋಡಿ, ಕಾಶಪ್ಪ ಹೊನ್ನೂರ, ಸಿದ್ಧನಗೌಡ ಪಾಟೀಲ, ಸತ್ಯಪ್ಪ ಚಲವಾದಿ, ಮಹಾದೇವಪ್ಪ ಗುಂಜಿ, ಭರಮಗೌಡ ಪಾಟೀಲ, ಈಶಪ್ಪ ಓಲಿ, ಮಳ್ಳಪ್ಪ ಜೋಂಡಿ, ನೂರಾರು ಕುರಿಗಾಯಿಗಳು, ಯುವಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು. ಅರಣ್ಯಾಧಿಕಾರಿ ಮೈಲಾರಪ್ಪ ಮಡಿವಾಳರ ವಂದಿಸಿದರು.