ಸಾರಾಂಶ
ಛತ್ರಪತಿ ಶಿವಾಜಿ ತಂದೆ ಬೋಂಸ್ಲೆರ 361ನೇ ಪುಣ್ಯರಾಧನೆ
ಕನ್ನಡಪ್ರಭ ವಾರ್ತೆ ಚನ್ನಗಿರಿಹಿಂದೂ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾಜೇ ಬೋಂಸ್ಲೆ ಅವರ ಸಮಾದಿ ನಮ್ಮ ರಾಜ್ಯದ ಹೊದಿಗೆರೆ ಗ್ರಾಮದಲ್ಲಿರುವುದು ನಮ್ಮ ಪೂರ್ವಜನ್ಮದ ಪುಣ್ಯವಾಗಿದ್ದು ಈ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ.ಮಾರುತಿರಾವ್ ಮೂಳೆ ಹೇಳಿದರು.
ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಗುರುವಾರ ಷಹಾಜಿರಾಜೇ ಬೋಂಸ್ಲೆ ಅವರ ಸಮಾಧಿ ಅವರಣದಲ್ಲಿ ಬೋಂಸ್ಲೆ ಸ್ಮಾರಕ ಅಭಿವೃದ್ದಿ ಮತ್ತು ಸೇವಾ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಬೋಂಸ್ಲೆ ಅವರ 361ನೇ ಪುಣ್ಯರಾಧನೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಈ ಸಮಾಧಿಯ ಸ್ಥಳ ಪ್ರಾಚ್ಯವಸ್ತು ಪುರಾತತ್ವ ಇಲಾಖೆಗೆ ಸೇರಿದ ಪ್ರದೇಶವಾಗಿದ್ದು ಈ ಸಮಾಧಿಯ ಸ್ಥಳದ ಅಭಿವೃದ್ದಿಗೆ ಕೇಂದ್ರ ಸರ್ಕಾರಕ್ಕೆ ಷಹಾಜಿಮಹಾರಾಜರ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಮಾಧಿ ಸ್ಥಳದ ಅಭಿವೃದ್ದಿಗೆ ಅನುಮತಿ ಪಡೆಯಬೇಕಾಗಿದೆ ಎಂದರು.ಜಿ.ಪಂ ಮಾಜಿ ಸದಸ್ಯ ಹೊದಿಗೆರೆ ರಮೇಶ್ ಮಾತನಾಡಿ, ಷಹಾಜಿಮಹಾರಾಜರು ಯಾವುದೇ ಆಸೆ, ಅಮಿಷಗಳಿಗೆ ಬಲಿಯಾಗದೆ ಈ ದೇಶದ ನೆಲ. ಜಲ, ಸಂಸ್ಕೃತಿಯನ್ನು ಕಾಪಾಡಿದಂತಹ ಮಹಾ ಪ್ರರಾಕ್ರಮಿಗಳಾಗಿದ್ದು ಇಂತಹ ಮಹಾವೀರರ ಸಮಾಧಿ ಸ್ಥಳ ಅಭಿವೃದ್ದಿ ಹೊಂದದೆ ಇರುವುದು ದುರಾದೃಷ್ಟಕರವಾಗಿದೆ. ನಾವು ಸಹ ಷಹಾಜಿ ಮಹಾರಾಜರನ್ನು ಪುಣ್ಯಸ್ಮರಣೆಯ ದಿನ ಮತ್ತು ಜಯಂತಿ ದಿನಗಳಲ್ಲಿ ಮಾತ್ರ ನೆನಪಿಸಿಕೊಳ್ಳುತ್ತಿದ್ದು ಇದು ಆಗಬಾರದು, ನಿರಂತರವಾಗಿ ಈ ಸ್ಥಳಗಳಿಗೆ ಭೇಟಿ ನೀಡುತ್ತಿರಬೇಕು ಎಂದರು.
ದಾರ್ಶನಿಕರು, ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸಬಾರದು. ಇವರು ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದವರಾಗಿದ್ದು ಅವರ ಜಯಂತಿ, ಪುಣ್ಯಸ್ಮರಣೆಗಳನ್ನು ಸಮಾಜದ ಎಲ್ಲಾ ವರ್ಗದ ಜನರು ಸೇರಿಕೊಂಡು ಆಚರಣೆ ಮಾಡಬೇಕು ಎಂದರು.ಈ ಸಮಾಧಿ ಸ್ಥಳದ ಅಭಿವೃದ್ದಿಗೆ ಈ ಹಿಂದೆ ನಾನು ಒಂದು ಲಕ್ಷ ರು. ಹಣವನ್ನು ದೇಣಿಗೆ ನೀಡಿದ್ದೆ. ಮತ್ತೆ ಅವಶ್ಯಕತೆ ಇದ್ದರೆ ಧನ ಸಹಾಯ ಮಾಡುವ ಜತೆಗೆ ರಾಜ್ಯದ ಲೋಕೋಪಯೋಗಿ ಇಲಾಖೆಯ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಇವರನ್ನು ಸಮಾಜ ಬಾಂಧವರು ಭೇಟಿ ಮಾಡಿದರೆ ಅವರಿಂದಲೂ ಅನುದಾನ ಕೊಡಿಸುವುದಾಗಿ ತಿಳಿಸಿದರು.
ತಾಲೂಕು ಕ್ಷತ್ರೀಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ.ಶಿವಾಜಿರಾವ್ ಜಾಧವ್ ಮಾತನಾಡಿ, ವೀರತ್ವಕ್ಕೆ ಹೆಸರಾಗಿದ್ದ ಷಹಾಜಿ ಮಹಾರಾಜರು ಸಾಮ್ರಾಜ್ಯದ ವಿಸ್ತರಣೆಯ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಬಂದಾಗ ಅಕಾಲಿಕ ಮರಣವನ್ನು ಹೊಂದಿದ ಸಂದರ್ಭದಲ್ಲಿ ಅವರನ್ನು ನಮ್ಮ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿಯೇ ಸಮಾಧಿ ಮಾಡಿದ್ದು ಅವರ ಸಮಾಧಿ ಸ್ಥಳದ ಅಭಿವೃದ್ದಿಗೆ ಇಂದಿನ ಯಾವ ರಾಜಕೀಯ ಪಕ್ಷಗಳ ನಾಯಕರು ಮುಂದೆ ಬರದೆ ಇರುವುದು ದುರಂತವಾಗಿದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಷಹಾಜಿರಾಜೆ ಬೌಂಸ್ಲೆ ಸ್ಮಾರಕ ಅಭಿವೃದ್ದಿ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ವೈ.ಮಲ್ಲೇಶ್ ರಾವ್ ಶಿಂಧೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ಷತ್ರಿಯ ಮರಾಠ ಸಮಾಜದ ಪ್ರಮುಖರಾದ ಮಾಲತೇಶ್ ರಾವ್ ಜಾದವ್, ಗೋಪಾಲ್ ರಾವ್ ಮಾನೆ, ಶ್ರೀನಿವಾಸ್ ರಾವ್ ಮಧನೆ, ಬಿ.ಕೆ.ದಿನೇಶ್, ಅಣ್ಣೊಜಿರಾವ್, ಬಿ.ಎಂ.ಕುಬೇಂದ್ರೋಜಿರಾವ್, ಎಂ.ಎಂ.ಮಂಜುನಾಥ್ ಜಾಧವ್, ಲತಾಮಂಜುನಾಥ್, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ ದಿವಾಕರ್, ಪುರಸಭೆಯ ಸದಸ್ಯ ಶ್ರೀಕಾಂತ್, ವಕೀಲ ರಾಮಚಂದ್ರರಾವ್ ಸೇರಿ ಮೊದಲಾದವರು ಹಾಜರಿದ್ದರು.