ಆನಂದಗೌಡ ಪಾಟೀಲ ಶಾಲಾ ಮಕ್ಕಳಿಗೆ ಬಟ್ಟೆ ವಿತರಿಸಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಹಿಂದೆ ನಾವು ಸಾಕಷ್ಟು ಕಷ್ಟ ಪಟ್ಟು ಓದಿದ್ದೇವೆ. ಹೀಗಾಗಿ ಇಂದಿನ ಮಕ್ಕಳ ಓದಿಗಾಗಿ ನಮ್ಮಿಂದ ಒಂದಿಷ್ಟು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.

ಮುಂಡರಗಿ: ದುಡಿಮೆಯಲ್ಲಿ ಸಮಾಜಕ್ಕಾಗಿ ಒಂದಿಷ್ಟು ಹಣವನ್ನು ಖರ್ಚು ಮಾಡಬೇಕೆನ್ನುವ ಉದ್ದೇಶದಿಂದ ಬಿಜೆಪಿ ಮುಖಂಡ ಆನಂದಗೌಡ ಪಾಟೀಲ ಹಾಗೂ ಸಹೋದರರು ಅವರ ತಂದೆ ಶರಣ ಎಚ್.ಎಸ್. ಪಾಟೀಲರ ಹೆಸರಿನಲ್ಲಿ ಪ್ರತಿಷ್ಠಾನ ಪ್ರಾರಂಭಿಸಿ ಆ ಮೂಲಕ‌ ಪ್ರತಿ ವರ್ಷ 5 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಆ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಪ್ರಶಂಸೆ ವ್ಯಕ್ತಪಡಿಸಿದರು.ತಾಲೂಕಿನ ಕಲಕೇರಿ ಗ್ರಾಮದಲ್ಲಿ ಗುರುವಾರ ಶರಣ ಎಚ್.ಎಸ್. ಪಾಟೀಲ ಪ್ರತಿಷ್ಠಾನದಿಂದ ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರ‌ 92ನೇ ಜನ್ಮದಿನದ ಅಂಗವಾಗಿ ಗ್ರಾಮದ ಚೆನ್ನಮ್ಮ ತೋಟನಗೌಡ ಪಾಟೀಲ ಸರ್ಕಾರಿ ಹೆಣ್ಣುಮಕ್ಕಳ‌ ಶಾಲೆಯ ಮಕ್ಕಳಿಗೆ‌ ಬಟ್ಟೆ ವಿತರಿಸಿ ಮಾತನಾಡಿ, ಪ್ರತಿಷ್ಠಾನದಿಂದ ಈಗಾಗಲೇ ತಾಲೂಕಿನ ವಿವಿಧ ಶಾಲೆಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಎಂದರು.

ಆನಂದಗೌಡ ಪಾಟೀಲ ಶಾಲಾ ಮಕ್ಕಳಿಗೆ ಬಟ್ಟೆ ವಿತರಿಸಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ. ಹಿಂದೆ ನಾವು ಸಾಕಷ್ಟು ಕಷ್ಟ ಪಟ್ಟು ಓದಿದ್ದೇವೆ. ಹೀಗಾಗಿ ಇಂದಿನ ಮಕ್ಕಳ ಓದಿಗಾಗಿ ನಮ್ಮಿಂದ ಒಂದಿಷ್ಟು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಗೋವಿಂದರಾಜ ಕಾಲವಾಡ, ಚಿದಾನಂದ ಬಡಿಗೇರ, ದಾವಲಸಾಬ್ ಮಲಕಬಾಯಿ, ಪರಶುರಾಮ‌, ಶಿಕ್ಷಕರು‌, ಸಿಬ್ಬಂದಿ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶ್ರೀಕಾಂತ ಬಡಿಗೇರ ಸ್ವಾಗತಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮ‌ ನಡೆಸಿಕೊಟ್ಟರು.

ಪಿಎಂ ಕಿಸಾನ್‌ ಯೋಜನೆಗೆ ಇ- ಕೆವೈಸಿ ಕಡ್ಡಾಯ

ಗದಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನನಿಧಿ ಯೋಜನೆಯ ಪ್ರಯೋಜನ ಪಡೆಯಲು ಇ- ಕೆವೈಸಿ ಕಡ್ಡಾಯವಾಗಿದೆ.ಪ್ರತಿ 4 ತಿಂಗಳಿಗೊಮ್ಮೆ ₹2000ರಂತೆ 3 ಕಂತುಗಳಲ್ಲಿ ವಾರ್ಷಿಕವಾಗಿ ₹6000 ರೈತರ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರ ನೀಡುತ್ತದೆ.ಯೋಜನೆಯಡಿ ಸಹಾಯಧನ ಪಡೆಯಲು ಪ್ರತಿ ವರ್ಷವೂ ಬಯೋಮೆಟ್ರಿಕ ಇ-ಕೆವೈಸಿ ಮಾಡಿಸಿಕೊಳ್ಳವುದು ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸಿಕೊಳ್ಳಲು ಪ್ರಮುಖವಾಗಿ ಎರಡು ವಿಧಾನಗಳಿವೆ. ಬಯೋಮೆಟ್ರಿಕ್‌ ಆಧಾರಿತ ಇ- ಕೆವೈಸಿ, ಮುಖ ಗುರುತಿಸುವಿಕೆ ಆಧರಿತ ಇ- ಕೆವೈಸಿ, ಬಯೋಮೆಟ್ರಿಕ್‌ ಆಧರಿತ ಇ- ಕೆವೈಸಿ ಮಾಡಿಸಿಕೊಳ್ಳಲು ಹತ್ತಿರದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್, ಗ್ರಾಮ ಒನ್‌ಗೆ ತೆರಳಿ ಆಧಾರ ಕಾರ್ಡ್ ಅಥವಾ ಆಧಾರ್ ಸಂಖ್ಯೆ ನೀಡಬೇಕು.ಮುಖ ಗುರುತಿಸುವಿಕೆ ಆಧರಿತ ಇ- ಕೆವೈಸಿ ಕೃಷಿ ಇಲಾಖೆಗೆ ಸಂಬಂಧಪಟ್ಟ VNO ಆ್ಯಪ್ ಮೂಲಕ ಇ- ಕೆವೈಸಿ ಮಾಡಿಕೊಳ್ಳಬಹುದು. ರೈತರು ಬಯೋಮೆಟ್ರಿಕ್‌ ಆಧಾರಿತ ಅಥವಾ ಮೊಬೈಲ್ ಆ್ಯಪ್ ಮೂಲಕ ಇ- ಕೆವೈಸಿ ಪೂರ್ಣಗೊಳಿಸುವಂತೆ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.