ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಸಾರ್ವಜನಿಕ ಆಸ್ಪತ್ರೆಗೆ ಕರ್ನಾಟಕ ಆರೋಗ್ಯಇಲಾಖೆಯ ಮುಖ್ಯ ಜಾಗೃತಾಧಿಕಾರಿ ಶ್ರೀನಿವಾಸ್ ಗುರುವಾರ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಮೂಲಸೌಕರ್ಯ, ಸ್ವಚ್ಛತೆ ಹಾಗೂ ಕುಂದುಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿದರು.ಸಿಬ್ಬಂದಿಯ ಹಾಜರಾತಿ ಪುಸ್ತಕ, ಆಡಳಿತದ ಖರ್ಚು ವೆಚ್ಚದ ಕಡತಗಳನ್ನು ಪರಿಶೀಲಿಸಿದರು. ನಂತರ ವಾರ್ಡ್ ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿ ಅವರಿಗೆ ವಿತರಿಸಿದ ಔಷಧಿಗಳನ್ನು ಪರಿಶೀಲಿಸಿದರು. ಔಷಧ ಉಗ್ರಾಣ ಪರಿಶೀಲಿಸಿ, ಔಷಧಗಳನ್ನು ರೋಗಿಗಳಿಗೆ ಸಮರ್ಪಕವಾಗಿ ವಿತರಣೆ ಮಾಡುವಂತೆ ಸೂಚಿಸಿದರು. ಖಾಸಗಿ ಔಷಧ ಅಂಗಡಿಗಳಲ್ಲಿ ಖರೀದಿಸಲು ರೋಗಿಗಳಿಗೆ ಚೀಟಿ ಬರೆದುಕೊಟ್ಟಿದ್ದು ಕಂಡುಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದಾಗಿ ವೈದ್ಯರಿಗೆ ಎಚ್ಚರಿಕೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಹರ್ಷಗುಪ್ತ ಮತ್ತು ತಾಲೂಕಿನ ನೋಡಲ್ ಅಧಿಕಾರಿ ವರಪ್ರಸಾದ್ ರೆಡ್ಡಿ ಅವರ ಮಾರ್ಗದರ್ಶನದಂತೆ ಇಂದು ಆಸ್ಪತ್ರೆಗೆ ಭೇಟಿ ನೀಡಿದ್ದೇವೆ. ಸರ್ಕಾರವು ಆಸ್ಪತ್ರೆಗಳಿಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಸಾರ್ವಜನಿಕರು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ತಿಳಿಸುತ್ತೇನೆ. (ಎಬಿಆರ್ ಕೆ)ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಂಬ ಸ್ಕೀಂನ ಕಾರ್ಡ್ ಅನ್ನು ಪಡೆದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದರೆ ಸಾಕು, ಸಂಪೂರ್ಣ ಉಚಿತ ಚಿಕಿತ್ಸೆಯನ್ನು ಸರ್ಕಾರವೇ ಭರಿಸುತ್ತದೆ. ಒಂದು ವೇಳೆ ನಿಮ್ಮ ಬಳಿ ಎಬಿಆರ್ ಕೆ ಕಾರ್ಡ್ ಇಲ್ಲದಿದ್ದಲ್ಲಿ ಆಸ್ಪತ್ರೆಗೆ ಬರುವಾಗ ಆಧಾರ್‌ಕಾರ್ಡ್ ಮತ್ತು ತಮ್ಮ ಬಿಪಿಎಲ್ ರೇಷನ್‌ಕಾರ್ಡ್ ತಂದಲ್ಲಿ ನಿಮಗೆ ಸಂಪೂರ್ಣ ಉಚಿತ ಚಿಕಿತ್ಸೆ ಅನ್ವಯಿಸುತ್ತದೆ ಎಂದು ತಿಳಿಸಿದರು.ಸೇವಾ ಕಾರ್ಯಕ್ಕೆ ಒತ್ತು ನೀಡಿ:
ರೋಗಿಗಳ ಸೇವೆ ಮಾಡುವುದೇ ವೈದ್ಯರ ಧರ್ಮ, ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಹೆಚ್ಚಿನವರು ಬಡ ಕುಟುಂಬದವರಾಗಿದ್ದು, ಅವರ ನೆರವಿಗೆ ವೈದ್ಯರು ಸಹಕರಿಸಬೇಕು, ವೈದ್ಯರು ರೋಗಿಗಳಿಗೆ ಸಹನೆ ಹಾಗೂ ವಿಶ್ವಾಸ ತುಂಬುವ ಕೆಲಸ ಮಾಡಬೇಕು, ಆಗ ರೋಗಿಗಳು ಶೀಘ್ರ ಗುಣಮುಖರಾಗಲು ಸಾಧ್ಯವಾಗುತ್ತದೆ. ಈ ಬಗ್ಗೆ ವೈದ್ಯರು ಹೆಚ್ಚಿನ ಗಮನಹರಿಸಬೇಕು ಎಂದರು.ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರ ಅರೋಗ್ಯದ ದೃಷ್ಟಿಯಿಂದ ಆಸ್ಪತ್ರೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಕಾರ್ಯನಿರ್ವಹಿಸುವ ಸಿಬ್ಬಂದಿ ಉಡಾಫೆ ತೋರಬಾರದು ಎಂಬ ಎಚ್ಚರಿಕೆ ನೀಡಿದ ಅವರು, ಆಸ್ಪತ್ರೆಯಲ್ಲಿ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ವೈದ್ಯ, ಸಿಬ್ಬಂದಿ ಸೇವೆ ಪರಿಶೀಲನೆ: ಅನಾರೋಗ್ಯದಿಂದ ಬಳಲುತ್ತಿರುವ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾಗದೆ ಸರಕಾರಿ ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದು, ಅಂತಹವರನ್ನು ವೈದ್ಯರು ಯಾವ ರೀತಿ ಉಪಚರಿಸುತ್ತಾರೆ ಎಂಬ ಕುರಿತು ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಈಗಾಗಲೇ ತಿಳಿವಳಿಕೆ ನೀಡಲಾಗಿದೆ ಎಂದು ಹೇಳಿದರು.ಸಾರ್ವಜನಿಕರಿಂದ ದೂರು:
ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್, ಆ್ಯಂಬುಲೆನ್ಸ್ ಸಹಿತ ಇನ್ನೂ ಕೆಲ ಸೇವೆಗಳು ಇಲ್ಲದಿರುವುದು, ಅನಾರೋಗ್ಯದಿಂದ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಜನರು ಅನೇಕ ದೂರುಗಳನ್ನು ಸಲ್ಲಿಸಿದರು.ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿ:
ಆಸ್ಪತ್ರೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾಥಮಿಕ ಅರೋಗ್ಯ ಕೇಂದ್ರಗಳ ಪ್ರಗತಿ ಪರೀಶೀಲನಾ ಸಭೆಗೆ ಭೇಟಿ ನೀಡಿದ ಜಾಗೃತಾಧಿಕಾರಿ ಶ್ರೀನಿವಾಸ್, ವೈದ್ಯರು, ಸಿಬ್ಬಂದಿ ತಮ್ಮ ಕುಂದು- ಕೊರತೆಗಳ ಮಾಹಿತಿಗಳನ್ನು ನೀಡಬೇಕಿದೆ. ನಿಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಕೂಡ ಗಮನಹರಿಸುತ್ತೇವೆ ಎಂದು ತಿಳಿಸಿದರು.ನಗರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಆಡಳಿತಾಧಿಕಾರಿ ಡಾ.ಲಕ್ಷ್ಮೀಕಾಂತ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಮೋಹನ್ ರೆಡ್ಡಿ, ತಾಲೂಕು ನೋಡಲ್ ಅಧಿಕಾರಿ ಸೇರಿ ಹಲವು ವೈದ್ಯರು ಮತ್ತು ಸಿಬ್ಬಂದಿ ಹಾಜರಿದ್ದರು.