ಕಾರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಗುರುವಾರ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಜಿಲ್ಲೆಯಲ್ಲಿ ಜೂ. 30ರಿಂದ ಜು. 29ರ ವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯೂಮರೇಷನ್ ಫಾರ್ಮ್‌ಗಳನ್ನು ನೀಡುವ ಮತ್ತು ಅವುಗಳನ್ನು ಸಂಗ್ರಹಿಸುವ ಕಾರ್ಯದ ಯಶಸ್ಸಿಗೆ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು ಅಗತ್ಯ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಮತಗಟ್ಟಿ ಅಧಿಕಾರಿಗಳು ಪ್ರಿ ಫಿಲ್ಡ್ ಎನ್ಯೂಮರೇಷನ್ ಫಾರ್ಮ್‌ಗಳನ್ನು ನೀಡಲು ಒಂದು ಬಾರಿ ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲು ಮೂರು ಬಾರಿ ಮತದಾರರ ಮನೆಗೆ ಭೇಟಿ ನೀಡಲಿದ್ದು, ಬಿಎಲ್‌ಒಗಳು ತಮ್ಮ ಮನೆಗೆ ಬಂದಾಗ ಫಾರ್ಮ್‌ಗಳನ್ನು ಭರ್ತಿ ಮಾಡಿ ಅವರಿಗೆ ಮರಳಿ ನೀಡುವುದು ಅತ್ಯಂತ ಕಡ್ಡಾಯವಾಗಿದೆ. ಫಾರ್ಮ್‌ನ್ನು ಮರಳಿ ನೀಡದಿದ್ದರೆ, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ. ಎನ್ಯುಮರೇಷನ್ ಅರ್ಜಿಯ ಪ್ರತಿಗಳಿಗೆ ಬಿ.ಎಲ್.ಓ. ಮತ್ತು ಮತದಾರರು ಅಥವಾ ಅವರ ಕುಟುಂಬದ ಸದಸ್ಯರು ಕಡ್ಡಾಯವಾಗಿ ಸಹಿ ಮಾಡಬೇಕಾಗುತ್ತದೆ ಹಾಗೂ ತಮ್ಮ ಇತ್ತೀಚಿನ ಕಲರ್ ಭಾವಚಿತ್ರವನ್ನು ನೀಡಬೇಕು. ಎನ್ಯುಮರೇಷನ್ ಫಾರಂ ಜತೆಯಲ್ಲಿ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಇದುವರೆಗೆ 6,13,031 ಪುರುಷರು, 6,17,001 ಮಹಿಳೆಯರು, 5 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 12,30,037 ಮತದಾರರಿದ್ದು, ಪೂರ್ವ ತಯಾರಿಗಾಗಿ ಮತದಾರರ ವಿವರಗಳನ್ನು ಹೋಲಿಸಿ ಶೇ. 93.47 (ಮ್ಯಾಫಿಂಗ್ ಮಾಡಿದ್ದು) ಖಚಿತಪಡಿಸಿಕೊಳ್ಳಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ 1,445 ಬಿ.ಎಲ್.ಓ. ಮತ್ತು 144 ಬಿ.ಎಲ್.ಓ. ಸೂಪರ್ ವೈಸರ್‌ಗಳನ್ನು ನೇಮಕ ಮಾಡಲಾಗಿದೆ. ಈಗಾಗಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಬೂತ್ ಮಟ್ಟದ 2,822 ಏಜೆಂಟರನ್ನು ನೇಮಕ ಮಾಡಿದ್ದಾರೆ ಎಂದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗದಂತೆ ಜಾಗೃತಿ ವಹಿಸಲಾಗುವುದು. ಸಾರ್ವಜನಿಕರಿಗೆ ಎನ್ಯುಮರೇಷನ್ ಫಾರಂ ಭರ್ತಿ ಮಾಡುವುದು ಸೇರಿದಂತೆ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆ ಕುರಿತಂತೆ ಯಾವುದೇ ಗೊಂದಲಗಳಿದ್ದರೆ ತಮ್ಮ ಮತಗಟ್ಟೆ ವ್ಯಾಪ್ತಿಯ ಬಿ.ಎಲ್.ಓ.ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ರಾಜಕೀಯ ಪಕ್ಷದ ಪ್ರತಿನಿಧಿಗಳು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ. ಶಂಭುಶೆಟ್ಟಿ, ತಾಲೂಕು ಉಪಾಧ್ಯಕ್ಷ ಬಾಬು ಶೇಟ್, ಜೆ.ಡಿ.ಎಸ್. ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಸಿಪಿಐ(ಎಂ) ನ ಶ್ಯಾಮ, ಶಾಂತಾರಾಮ ನಾಯಕ್ ಇದ್ದರು.