ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅಡಕೆ, ಕಾಳುಮೆಣಸು, ರಬ್ಬರ್, ಚಾಕಲೇಟ್, ಕೊಬ್ಬರಿ ಬಳಿಕ ಈಗ ಸಾವಯವ ಗೊಬ್ಬರ ಉತ್ಪಾದನೆಯತ್ತ ಕರ್ನಾಟಕ-ಕೇರಳದ ಅಂತಾರಾಜ್ಯ ಸಹಕಾರ ಸಂಸ್ಥೆ ಕ್ಯಾಂಪ್ಕೋ ಹೆಜ್ಜೆ ಇರಿಸಿದೆ. ಅಡಕೆ ಕ್ಷೇತ್ರದ ಕೃಷಿಕರಿಗೆ ಅನುಕೂಲವಾಗಲು ಕ್ಯಾಂಪ್ಕೋ ಸಂಸ್ಥೆ ಸಾವಯವ ಗೊಬ್ಬರ ಉತ್ಪಾದನೆಗೆ ಮುಂದಾಗಿದೆ.ಮಂಗಳೂರು ಹೊರ ವಲಯದ ಅಡ್ಯಾರು ಗಾರ್ಡನ್‌ನಲ್ಲಿ ಶನಿವಾರ ನಡೆದ 51ನೇ ವಾರ್ಷಿಕ ಮಹಾಸಭೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಈ ವಿಚಾರ ತಿಳಿಸಿದರು.
ಕೃಷಿಕರಿಗೆ ಬೇಕಾದ ಪೋಷಕಾಂಶ ಗೊಬ್ಬರಗಳ ಕಚ್ಚಾವಸ್ತುಗಳನ್ನು ಪ್ರಸಕ್ತ ಕ್ಯಾಂಪ್ಕೋ ಹೊರಗಿನಿಂದ ಖರೀದಿಸಿ ಕ್ಯಾಂಪ್ಕೋ ಬ್ರಾಂಡ್‌ನಲ್ಲಿ ನೀಡುತ್ತಿದೆ. ಇನ್ನು ಮುಂದೆ ಸ್ವತಃ ಕ್ಯಾಂಪ್ಕೋ ಸಂಸ್ಥೆ ಸಾವಯವ ಗೊಬ್ಬರ ಉತ್ಪಾದಿಸುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಚಿತ್ರದುರ್ಗದ ಹಿರಿಯೂರಿನಲ್ಲಿ 18 ಎಕರೆ ಜಾಗ ಖರೀದಿಗೆ ನಿರ್ಧರಿಸಿದೆ. ಪ್ರಧಾನ ಮಂತ್ರಿಗಳ ಸಾವಯವ ಉತ್ಪನ್ನಗಳಿಗೆ ಒತ್ತು ನೀಡುವ ಉದ್ದೇಶವನ್ನು ಸಾಕಾರಗೊಳಿಸಲು ಕ್ಯಾಂಪ್ಕೋ ಬದ್ಧವಾಗಿದೆ ಎಂದರು.ಅಡಕೆ ಅಡಮಾನ ಯೋಜನೆ:
ಸದಸ್ಯ ಗ್ರಾಹಕರು ಅಡಕೆಯನ್ನು 2 ಕ್ವಿಂಟಾಲ್ ವರೆಗೆ ಅಡಮಾನವಾಗಿ ಕ್ಯಾಂಪ್ಕೋದಲ್ಲಿ ಇರಿಸಲು ಅವಕಾಶ ಇದೆ. ಹಿಂದೆ ಇದು 10 ಕ್ವಿಂಟಾಲ್ ಮಿತಿಯನ್ನು ಹೊಂದಿತ್ತು. ಸಾಮಾನ್ಯ ಅಡಕೆ ಬೆಳೆಗಾರರಿಗೆ ಅನುಕೂಲವಾಗಲು ಅದನ್ನು ಈಗ 200 ಕಿಲೋಗೆ ಮಿತಿ ನಿಗದಿಪಡಿಸಲಾಗಿದೆ. ಅಂತಹ ಗ್ರಾಹಕರಿಗೆ ಗರಿಷ್ಠ ಶೇ.60 ರಷ್ಟು ಮೊತ್ತವನ್ನು ಮಂಗಡ ಸಾಲದ ರೂಪದಲ್ಲಿ ನೀಡಲಾಗುವುದು. ಆದರೆ ಶೇ.30ರಷ್ಟು ಮುಂಗಡ ಸಾಲ ಕಡ್ಡಾಯ ಪಡೆಯಬೇಕು. ದರ ಹೆಚ್ಚಳವಾದಾಗ ಅಥವಾ ತಮಗೆ ಬೇಕೆನಿಸಿದಾಗ ಆ ಅಡಕೆಯನ್ನು ಮಾರಾಟ ಮಾಡಲು ಅವಕಾಶ ಇದೆ. ನೈಟ್ರೋಜನ್ ಸ್ಟೋರೇಜ್ ವ್ಯವಸ್ಥೆ ಮೂಲಕ ಅಡಕೆ ದಾಸ್ತಾನು ಹಾಗೂ ಅಡಮಾನ ಸೌಲಭ್ಯವನ್ನು ಎಲ್ಲ ಶಾಖೆಗಳಿಗೆ ವಿಸ್ತರಿಸಲು ಚಿಂತಿಸಲಾಗಿದೆ ಎಂದರು.ಅಡಕೆ ತೇವಾಂಶ ಅಧ್ಯಯನ:
ಪ್ರಸಕ್ತ ಅಡಕೆಗೆ ಇರುವ ಶೇ.7.1ರ ತೇವಾಂಶ ಪ್ರಮಾಣವನ್ನು ಶೇ.11ರ ವರೆಗೆ ನಿಗದಿಪಡಿಸುವುದಕ್ಕೆ ಸಂಬಂಧಿಸಿ ಅಡಕೆ ಮಹಾಮಂಡಲ 14.84 ಲಕ್ಷ ರು. ಮೊತ್ತವನ್ನು ಕಾಸರಗೋಡಿನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ(ಸಿಪಿಸಿಆರ್‌ಐ) ಬಿಡುಗಡೆ ಮಾಡಿದೆ. ಶೀಘ್ರವೇ ಅಧ್ಯಯನ ನಡೆಸಿ ಅಡಕೆಯಲ್ಲಿನ ಈಗಿನ ತೇವಾಂಶ ಪ್ರಮಾಣದ ಬಗ್ಗೆ ಸಂಶೋಧನಾ ವರದಿಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್ಎಐ) ಸಲ್ಲಿಸಲಿದೆ ಎಂದರು.ಕೃಷಿಕರಿಗೆ ನೆರವಾಗಲು ಕ್ಯಾಂಪ್ಕೋ ವತಿಯಿಂದ ಪುತ್ತೂರಿನಲ್ಲಿ ಅತ್ಯಾಧುನಿಕ ಮಾದರಿಯ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇದನ್ನು ಕ್ಯಾಂಪ್ಕೋದ ಎಲ್ಲ ಶಾಖೆಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.
ಜಿಎಸ್‌ಟಿ ತೆರಿಗೆ ಇಳಿಕೆ ಯತ್ನ:ಅಡಕೆ ಮೇಲೆ ಕೇಂದ್ರ ಸರ್ಕಾರ ಶೇ.18ರ ಜಿಎಸ್‌ಟಿ ತೆರಿಗೆ ವಿಧಿಸುತ್ತಿದೆ. ಇದನ್ನು ಶೇ. 5ಕ್ಕೆ ಇಳಿಕೆ ಮಾಡುವಂತೆ ಕೇಂದ್ರ ಹಣಕಾಸು ಸಚಿವರನ್ನು ಕ್ಯಾಂಪ್ಕೋ ನಿಯೋಗ ಜನಪ್ರತಿನಿಧಿಗಳ ಜೊತೆ ತೆರಳಿ ಮನವರಿಕೆ ಮಾಡಿದೆ. ಆದರೆ ಇತ್ತೀಚೆಗೆ ನಡೆದ ಜಿಎಸ್‌ಟಿ ಸಭೆಯಲ್ಲಿ ಈ ತೆರಿಗೆ ಇಳಿಕೆ ಮಾಡಿಲ್ಲ. ಹಾಗಾಗಿ ಮತ್ತೊಮ್ಮೆ ವಿತ್ತ ಸಚಿವರ ಮೇಲೆ ಒತ್ತಡ ತರುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ಕ್ಯಾಂಪ್ಕೋ ತನ್ನದೇ ಆದ ಆ್ಯಪ್‌ನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ಮಾರ್ಚ್ ವೇಳೆಗೆ ಸದಸ್ಯ ಗ್ರಾಹಕರಿಗೆ ಲಭ್ಯವಾಗಲಿದೆ. ಅದರಲ್ಲಿ ಕ್ಯಾಂಪ್ಕೋ ಉತ್ಪನ್ನಗಳ ದೈನಂದಿನ ಧಾರಣೆ, ಷೇರು ಮಾರುಕಟ್ಟೆ ವಿವರಗಳು ಅಪ್‌ಡೇಟ್ ಆಗಲಿವೆ ಎಂದರು.ಕೊಳೆರೋಗ ಪರಿಹಾರಕ್ಕೆ ಮನವಿ:
ಅಡಕೆ ಬೆಳೆಗೆ ಕೊಳೆರೋಗ ಮಾತ್ರವಲ್ಲ ಮಹಾಳಿ, ಎಲೆಚುಕ್ಕಿ ಮುಂತಾದ ರೋಗಗಳು ಬಾಧಿಸಿ ಬೆಳೆಗಾರರು ಕಂಗೆಟ್ಟಿದ್ದಾರೆ. ಈ ಬಾರಿ ಕೊಳೆರೋಗ ವ್ಯಾಪಕವಾಗಿ ಕಂಡುಬಂದಿದ್ದು, ಶೇ.40 ರ ವರೆಗೂ ಫಸಲು ನಷ್ಟ ಹೇಳಲಾಗುತ್ತಿದೆ. ಆದ್ದರಿಂದ ಅಡಕೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು.ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಎಸ್. ಆರ್.ಸತೀಶ್ಚಂದ್ರ, ದಯಾನಂದ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ.ಹೆಗ್ಡೆ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ್ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್ ಪಿ., ಜಯಪ್ರಕಾಶ್ ನಾರಾಯಣ, ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ರಾಘವೇಂದ್ರ ಎಚ್.ಎಂ., ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ಪ್ರಧಾನ ವ್ಯವಸ್ಥಾಪಕ ರೇಷ್ಮಾ ಮಲ್ಯ ಮತ್ತಿತರರು ಇದ್ದರು. -----
51.85 ಕೋಟಿ ರು. ಲಾಭ, ಶೇ.8 ಲಾಭಾಂಶ
2024-25ನೇ ಸಾಲಿನಲ್ಲಿ ಕ್ಯಾಂಪ್ಕೋ ಸಂಸ್ಥೆ 51.85 ಕೋಟಿ ರು. ಲಾಭ ದಾಖಲಿಸಿದ್ದು, 3,632 ಕೋಟಿ ರು.ಗಳ ವ್ಯವಹಾರ ದಾಖಲಿಸಿದೆ. ಸದಸ್ಯ ಗ್ರಾಹಕರಿಗೆ ಶೇ.8 ಲಾಭಾಂಶ ಪ್ರಕಟಿಸಿದೆ ಎಂದು ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.ಸದಸ್ಯ ಗ್ರಾಹಕರಿಗೆ ಅಡಕೆ ಕೇಜಿಗೆ 2 ರು., ಕೊಕ್ಕೋ ಹಸಿ ಬೀಜ ಕೇಜಿಗೆ 4 ರು. ಮತ್ತು ಒಣ ಕೋಕ್ಕೋ ಕೇಜಿಗೆ 6 ರು.ನಂತೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಕ್ಯಾಂಪ್ಕೋ ಸಿಬ್ಬಂದಿಗೆ ಶೇ.14ರ ಉದಾರ ಭತ್ಯೆ ನೀಡಲು ಸಮ್ಮತಿಸಲಾಗಿದೆ ಎಂದರು.
ಈ ಸಂಸ್ಥೆಯು 2,825.77 ಕೋಟಿ ರು. ಮೌಲ್ಯದ 65,675.39 ಮೆಟ್ರಿಕ್ ಟನ್ ಅಡಕೆ ಮಾರಾಟ ಮಾಡಿದೆ ಎಂದರು. ಪಾನ್‌ಮಸಾಲದಲ್ಲಿ ಶೇ.96 ಅಡಕೆ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಸರಿಯಲ್ಲ. ಅದನ್ನು ಸರಿಪಡಿಸಲು ಸರಿಯಾದ ದಾಖಲೆಗಳನ್ನು ಒದಗಿಸಲು ಸಿಪಿಸಿಆರ್‌ಐ ಸೇರಿದಂತೆ ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಸಂಶೋಧನೆ ನಡೆಯುತ್ತಿದೆ. ಪಾನ್‌ಮಸಾಲ(ಗುಟ್ಕಾ-ತಂಬಾಕು ಅಲ್ಲ)ದಲ್ಲಿ ಶೇ.96ರಷ್ಟು ಅಡಕೆಯೇ ಇದೆ. ಉಳಿದ ಶೇ.4 ಭಾಗ ಇತರೆ ಉತ್ಪನ್ನಗಳ ಮಿಶ್ರಣ ಇದೆ. ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ. ಇದೇ ವೇಳೆ ಪಾನ್‌ಮಸಾಲ ಮೇಲಿನ ಜಿಎಸ್‌ಟಿಯನ್ನು ಶೇ. 28ರಿಂದ ಶೇ.40ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಭವಿಷ್ಯದಲ್ಲಿ ಅಡಕೆ ಉತ್ಪನ್ನಗಳಿಗೂ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.---ಕ್ಯಾಂಪ್ಕೋ ಸಂಸ್ಥೆ ಬಗ್ಗೆ ಯಾರೂ ಮಿಥ್ಯಾರೋಪ ಮಾಡಬೇಡಿ. ಇದು ಬೆಳೆಗಾರರ ಹಿತರಕ್ಷಣಾ ಸಂಸ್ಥೆ. ಕ್ಯಾಂಪ್ಕೋ ಸಂಸ್ಥೆ ಇಲ್ಲದಿದ್ದರೆ ಬೆಳೆಗಾರರು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕ್ಯಾಂಪ್ಕೋ ಸಹಿತ ಸಹಕಾರಿ ಸಂಘಗಳಿಗೆ ಅಡಕೆ ಮಾರಾಟ ಮಾಡುವಾಗ ಬಿಲ್ ಕಡ್ಡಾಯ ಪಡೆದುಕೊಳ್ಳಿ, ಏನೇ ಸಮಸ್ಯೆಗಳು ಇದ್ದರೂ ಕ್ಯಾಂಪ್ಕೋ ಅಧಿಕಾರಿಗಳ ಗಮನಕ್ಕೆ ತರಬಹುದು.
-ಕಿಶೋರ್ ಕುಮಾರ್ ಕೊಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ ಮಂಗಳೂರು