ಸಾರಾಂಶ
ಸಹಕಾರಿ ಕ್ಷೇತ್ರದ ಕ್ರೈಸ್ತ ನಾಯಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಉಡುಪಿಉತ್ತಮ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಯಕತ್ವವನ್ನು ಸಮಾಜಕ್ಕೆ ನೀಡಿದಾಗ ಜನರು ಕೂಡ ಅಂತಹ ನಾಯಕನ್ನು ಒಪ್ಪಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸರ್ವರೊಂದಿಗೆ ಬೆರೆತು ನಾಯಕತ್ವ ಗುಣಗಳನ್ನು ಬೆಳೆಸಲು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ ಎಂದು ಉಡುಪಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಕೆಥೋಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಆಯೋಜಿಸಿದ್ದ ಸಹಕಾರಿ ಕ್ಷೇತ್ರದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಕ್ರೈಸ್ತ ನಾಯಕರನ್ನು ಸನ್ಮಾನಿಸಿ ಮಾತನಾಡಿದರು.ಸಹಕಾರಿ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ ಹಲವಾರು ನಾಯಕರು ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ ಸಂಗತಿ. ಈ ಮೂಲಕ ಸಮಾಜದ ಜನರನ್ನು ನೇರವಾಗಿ ತಲುಪಿ ಅವರ ಅಗತ್ಯತೆಗಳಿಗೆ ಸ್ಪಂದಿಸುವ ಕೆಲಸ ಸಹಕಾರಿ ಕ್ಷೇತ್ರದ ನಿರ್ದೇಶಕರಿಂದ ನಡೆಯುತ್ತಿದೆ. ಎಲ್ಲ ಕ್ರೈಸ್ತ ಸಮುದಾಯದ ಸಹಕಾರಿಗಳು ಜೊತೆಯಾಗಿ ಒಂದೇ ಸೂರಿನಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕ್ರೈಸ್ತ ಸಹಕಾರಿಗಳ ಒಕ್ಕೂಟದ ರಚನೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಚಿಂತನೆ ನಡೆಸುವುದು ಅಗತ್ಯವಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಎಂಸಿಸಿ ಬ್ಯಾಂಕ್ ಮಂಗಳೂರು ಅಧ‍್ಯಕ್ಷ ಅನಿಲ್ ಲೋಬೊ ಮಾತನಾಡಿ, ಸಹಕಾರಿ ಕ್ಷೇತ್ರ ಹೊರಗಿನಿಂದ ನೋಡುವವರಿಗೆ ಸುಲಭದಾಯಕ ಎಂದು ಎನಿಸಿದರೂ ಅದರಲ್ಲಿ ಕರ್ತವ್ಯ ನಿರ್ವಹಣೆ ಅಷ್ಟೆ ಕಷ್ಟದಾಯಕವಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಿಗುವ ಸೌಲಭ್ಯಗಳು ಸಹಕಾರಿ ಸಂಸ್ಥೆಗಳಿಗೆ ಲಭಿಸುವುದಿಲ್ಲ. ಆದರೂ ಜನರ ಅಗತ್ಯತೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದರೊಂದಿಗೆ ಇದೊಂದು ಸೇವೆ ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ ಆತ್ಮತೃಪ್ತಿ ಸಿಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಸಹಕಾರಿ ಇಲಾಖೆಯಲ್ಲಿ ಕ್ರೈಸ್ತ ಸಮುದಾಯದ ಬಲವರ್ಧನೆ ಮಾಡುವ ಕುರಿತು ಸಲಹೆಗಳನ್ನು ನೀಡಿದರು.ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಾಗಿ ಹೊಸದಾಗಿ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್ ಕರ್ನೆಲಿಯೋ ವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಹಾಗೂ ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಆಧ್ಯಾತ್ಮಿಕ ನಿರ್ದೇಶಕರಾದ ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, 2025-26ನೇ ಸಾಲಿನ ಚುನಾಯಿತ ಕೇಂದ್ರಿಯ ಸಮಿತಿ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ನಿಕಟಪೂರ್ವ ಅಧ್ಯಕ್ಷ ಮೇರಿ ಡಿಸೋಜಾ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಚಾಲಕ ಎಲ್. ರೋಯ್ ಕಿರಣ್ ಕ್ರಾಸ್ತಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಒಲಿವಿಯಾ ಜೆ. ಡಿಮೆಲ್ಲೊ ವಂದಿಸಿದರು. ಡಾ.ಜೆರಾಲ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.