ರೈತರ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಹಕಾರ ಕ್ಷೇತ್ರ ನೆರವು: ಸಚಿವ ಕೆ.ಎನ್ ರಾಜಣ್ಣ

| Published : Nov 21 2024, 01:01 AM IST

ರೈತರ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಸಹಕಾರ ಕ್ಷೇತ್ರ ನೆರವು: ಸಚಿವ ಕೆ.ಎನ್ ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಆಂದೋಲನ ಸಾರ್ವಜನಿಕರ ಆಂದೋಲನವಾಗಿದೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ ಹಿಡಿದಿವೆ. ಪತ್ತಿನ ಸಹಕಾರಿ ವ್ಯವಸ್ಥೆ ಇಲ್ಲದೆ ಹೋದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ರೈತರಿಗೆ ಆರ್ಥಿಕ ಊರುಗೋಲಾಗಿ ಸಹಕಾರಿ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಹಕಾರ ಆಂದೋಲನ ಸಾರ್ವಜನಿಕರ ಆಂದೋಲನವಾಗಿದೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ರೈತರ ಸಂಕಷ್ಟ ಕಾಲದಲ್ಲಿ ಕೈ ಹಿಡಿದಿವೆ. ಪತ್ತಿನ ಸಹಕಾರಿ ವ್ಯವಸ್ಥೆ ಇಲ್ಲದೆ ಹೋದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ರೈತರಿಗೆ ಆರ್ಥಿಕ ಊರುಗೋಲಾಗಿ ಸಹಕಾರಿ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಸಹಯೋಗದಲ್ಲಿ ನೆಹರು ನಗರದ ಜೆ.ಎನ್.ಎಂ.ಸಿ. ಆವರಣದಲ್ಲಿರುವ ಡಾ.ಬಿ.ಎಸ್. ಜೀರಗೆ ಸಭಾಂಗಣದಲ್ಲಿ ಬುಧವಾರ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಹಕಾರ ಸಂಘಗಳು ಸಾಲ ನೀಡದೆ ಹೋದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಆರ್ಥಿಕವಾಗಿ ಹಿಂದುಳಿಯುತಿದ್ದವು. ರಾಜ್ಯದಲ್ಲಿ ಸಹಕಾರ ಕ್ಷೇತ್ರ ಪ್ರಗತಿಯತ್ತ ಸಾಗುತ್ತಿದ್ದು, ಇನ್ನಷ್ಟು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಸಹಕಾರ ರಂಗದಲ್ಲಿ ಸದಸ್ಯರ ಆಯ್ಕೆಯ ಮಾನದಂಡ ಬದಲಾಗಬೇಕಿದೆ. ಇನ್ನಷ್ಟು ಸುಲಭ ಮಾರ್ಗದಲ್ಲಿ ಸಹಕಾರ ಸಂಘಗಳ ಸದಸ್ಯರ ಆಯ್ಕೆ ನಿಯಮ ರೂಪಿಸಬೇಕು. ಜಮೀನು ಪಹಣಿ ಹೊಂದಿದ ರೈತರಿಗೆ ಸದಸ್ಯತ್ವ ದೊರೆಯುವ ನಿಟ್ಟಿನಲ್ಲಿ ಡಿಜಿಟಲ್ ಮೂಲಕ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಸಬೇಕು. ರೈತರಿಗೆ ಸುಲಭವಾಗಿ ಹೆಚ್ಚು ಸಾಲ ಸೌಲಭ್ಯ ನೀಡಲು ಸರಳೀಕರಣ ಮಾದರಿ ಅನುಸರಿಸಬೇಕು. ಈ ಪ್ರಕ್ರಿಯೆಯನ್ನು ಎಲ್ಲಾ ಸಹಕಾರಿ ಸಂಘಗಳು ನಿಯಮಾನುಸಾರ ಕಾನೂನು ಚೌಕಟ್ಟಿನಲ್ಲಿ ಜಾರಿಗೆ ತರಬೇಕು. ಜಿಲ್ಲೆಯ ಎಲ್ಲಾ ರೈತರಿಗೆ ವಿವಿಧ ಸಹಕಾರಿ ಬ್ಯಾಂಕಗಳಿಂದ ಸೌಲಭ್ಯ ಒದಗಿಸುವ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಉತ್ತರ ಕರ್ನಾಟಕದ ಭಾಗದ ಜನರು ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರಕಾರಿ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ. ರಾಜ್ಯದಲ್ಲಿ ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. ಜಿಲ್ಲೆಯಲ್ಲಿ ಮಹಾ ವಿದ್ಯಾಲಯವಾಗಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಸಹಕಾರ ಕ್ಷೇತ್ರವಿಲ್ಲದೆ ರಾಜ್ಯ, ದೇಶ ರೈತರ ಪ್ರಗತಿ ಸಾಧ್ಯವಿಲ್ಲ. ಸಾಲದ ನೆರವು ನೀಡದೆ ಹೋದರೆ ರೈತಾಪಿ ವರ್ಗಕ್ಕೆ ಆರ್ಥಿಕ ಕಷ್ಟವಾಗುತ್ತಿತ್ತು. ಹಾಲು ಮಾರಾಟ, ನೇಕಾರ, ರೈತರು, ಸೌಹಾರ್ದ, ಮಹಿಳಾ ಸೊಸೈಟಿ ಸೇರಿದಂತೆ ಎಲ್ಲ ವರ್ಗದಲ್ಲಿ ಸಹಕಾರ ಕ್ಷೇತ್ರ ಬೆಳೆದು ನಿಂತಿದೆ. ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿಯಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಬೇಕು. ಸಹಕಾರ ಸಂಘಗಳು ಜನರ ವಿಶ್ವಾಸ ಉಳಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ವಿಶೇಷ ಸಂಚಿಕೆ ಬಿಡುಗಡೆ: ಇದಕ್ಕೂ ಮುಂಚೆ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಸಪ್ತಾಹದ ಸಹಕಾರ ಕ್ಷೇತ್ರದ ಚಿಂತನ ಮಂಥನ, ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.

ಶಾಸಕ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ಲಕ್ಷ್ಮಣ ಸವದಿ, ಆಸೀಫ್ (ರಾಜು) ಸೇಠ್‌, ದುರ್ಯೋಧನ ಐಹೊಳೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಜಗದೀಶ ಕವಟಗಿಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಇತರರು ಉಪಸ್ಥಿತರಿದ್ದರು.

ಸಪ್ತಾಹಕ್ಕೆ ಪ್ರತಿಭಟನೆ ಬಿಸಿ: ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಪ್ರತಿಭಟನೆ ಬಿಸಿ ತಟ್ಟಿತು. ಕಾರ್ಯಕ್ರಮ ನಡೆಯುತ್ತಿದ್ದ ಜೀರಗೆ ಸಭಾಭವನದ ಎದುರಿಗೆ ಸಹಕಾರ ಕ್ಷೇತ್ರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಭ್ರಷ್ಟ ರಾಜಕಾರಣಿಗಳಿಂದಲೇ ಸಹಕಾರ ರಂಗ ಹಾಳಾಗುತ್ತಿದೆ. ರಾಜಕಾರಣಿಗಳನ್ನು ಸಹಕಾರ ರಂಗದಿಂದ ದೂರವಿಡಿ ಎಂಬ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.