ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರಿ ಕ್ಷೇತ್ರ ಹೆಬ್ಬಾಗಿಲು

| Published : Nov 21 2024, 01:04 AM IST

ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕಾರಿ ಕ್ಷೇತ್ರ ಹೆಬ್ಬಾಗಿಲು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿರುವ ಸಹಕಾರಿ ಸಂಘಗಳು ಮತ್ತು ರೈತರಿಗಾಗಿ ಸ್ಥಾಪಿಸಿರುವಂತಹ ವ್ಯವಸಾಯ ಸೇವಾ ಸಹಕಾರ ಸೊಸೈಟಿ, ಬ್ಯಾಂಕು ಗ್ರಾಮಗಳ ಅಭಿವೃದ್ದಿಗೆ ತಮ್ಮದೇಯಾದ ಕೊಡುಗೆ ನೀಡಿವೆ

ಮುಂಡರಗಿ: ಗ್ರಾಮೀಣ ಪ್ರದೇಶದ ರೈತರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕಾದರೆ ಸಹಕಾರಿ ಕ್ಷೇತ್ರ ಹೆಬ್ಬಾಗಿಲು ಎಂದು ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಹೇಳಿದರು.

ಅವರು ಬುಧವಾರ ಪಟ್ಟಣದ ಕೆಸಿಸಿ ಬ್ಯಾಂಕಿನ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ, ಬೆಂಗಳೂರು ಗದಗ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರಿ ಇಲಾಖೆ ಗದಗ, ಕೆಸಿಸಿ ಬ್ಯಾಂಕ್ ಧಾರವಾಡ, ಕೆಎಂಎಫ್ ಧಾರವಾಡ, ಗದಗ ಉಪವಿಭಾಗ ಹಾಲು ಉತ್ಪಾದಕರ ಸಹಕಾರ ಸಂಘ ನಿ, ಬ್ಯಾಲವಾಡಗಿ ಹಾಗೂ ಮುಂಡರಗಿ ತಾಲೂಕಿನ ಎಲ್ಲ ಸಹಕಾರ ಸಂಘ, ಬ್ಯಾಂಕುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 71ನೇ ಸಹಕಾರ ಸಪ್ತಾಹ 2024 ಹಾಗೂ ಉತ್ತಮ ವಿಶ್ವನಿರ್ಮಾಣ ಹಾದಿಗಾಗಿ ಹಾಗೂ ಸುಸ್ತಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಸಹಕಾರಿ ಸಂಘಗಳು ಮತ್ತು ರೈತರಿಗಾಗಿ ಸ್ಥಾಪಿಸಿರುವಂತಹ ವ್ಯವಸಾಯ ಸೇವಾ ಸಹಕಾರ ಸೊಸೈಟಿ, ಬ್ಯಾಂಕು ಗ್ರಾಮಗಳ ಅಭಿವೃದ್ದಿಗೆ ತಮ್ಮದೇಯಾದ ಕೊಡುಗೆ ನೀಡಿವೆ. ಗ್ರಾಮಗಳ ಅಭಿವೃದ್ಧಿಗೆ ಸಹಕಾರಿ ಸಂಘಗಳು ತಾಯಿ ಬೇರುಗಳಿದ್ದಂತೆ. ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎನ್ನುವ ಮೂಲ ತತ್ವದೊಂದಿಗೆ ಸಹಕಾರ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಏಷಿಯಾ ಖಂಡದಲ್ಲಿಯೇ ಪ್ರಪ್ರಥಮವಾಗಿ 1904ರಲ್ಲಿ ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದಲ್ಲಿ ಸಿದ್ದನಗೌಡ ಪಾಟೀಲ ಈ ಸಂಘ ಸ್ಥಾಪಿಸಿದರು. ಈ ಹಿಂದೆ ಇದ್ದೂ ಇಲ್ಲದಂತಿದ್ದ ಈ ಕ್ಷೇತ್ರವನ್ನು ಎಸ್.ಎಸ್. ಪಾಟೀಲ ಸಹಕಾರ ಸಚಿವರಾದ ಮೇಲೆ ಬಹಳಷ್ಟು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಚೈತನ್ಯ ತುಂಬಿದರು. ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದಲ್ಲಿ ಸಹಕಾರ ಇಲಾಖೆಯ ಪ್ರತ್ಯೇಕ ಸಚಿವಾಲಯ ರಚಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವ ಹೈನುಗಾರರು ಸಹಕಾರ ಸಂಘಗಳೊಂದಿಗೆ ವ್ಯವಹರಿಸಬೇಕು. ತಾವು ಹೈನುಗಾರಿಕೆ ಮಾಡುವವರಿಗೆ ಸಾಲ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರು, ಹೈನುಗಾರರು ತಮ್ಮ ನಿತ್ಯದ ವ್ಯವಹಾರಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡುವ ಬದಲು ಸಹಕಾರಿ ಸಂಘಗಳಿಗೆ ಸಂಬಂದಿಸಿದ ಬ್ಯಾಂಕು ಹಾಗೂ ಸೊಸೈಟಿಗಳಲ್ಲಿ ಮಾಡುವುದರಿಂದ ನಿಮಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿವೆ. ಆದರಿಂದ ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ. ಇಂದು ಸಹಕಾರ ಕ್ಷೇತ್ರ ಹೆಚ್ಚು ವೇಗವಾಗಿ ಬೆಳೆಯುತ್ತಿದ್ದು, ರೈತರು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಧಾರವಾಡ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿರೇಶ ತರಲಿ ಮಾತನಾಡಿ, ಹಸುಗಳಿಗೆ ಕಾಲಕಾಲಕ್ಕೆ ಬರುವ ಕಾಯಿಲೆಗಳಿಗೆ ತಕ್ಷಣವೇ ಲಸಿಕೆ ಹಾಕಿಸುವುದರಿಂದ ಪಶುಪಾಲನೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಗೋವು ಇರುವ ಗ್ರಾಮ ಅದು ಸ್ವರ್ಗಕ್ಕೆ ಸಮ. ಕೃಷಿ ಭೂಮಿ ಹೆಚ್ಚು ಫಲವತ್ತೆಯಾಗಲು ಹಸುವಿನ ಪಾತ್ರ ಪ್ರಮುಖವಾಗುತ್ತದೆ. ಅವುಗಳ ಸಗಣೆಗೊಬ್ಬರದಿಂದ ಭೂಮಿ ಹೆಚ್ಚು ಫಲವತ್ತಾಗುತ್ತವೆ. ಕೆಎಂಎಫ್ ನಿಂದ ಹಸು ಸಾಕಾಣಿಕೆಗೆ ಎಲ್ಲ ರೀತಿಯ ಅನುಕೂಲತೆ ಕಲ್ಪಿಸಲಾಗುತ್ತಿದೆ ಎಂದರು.

ಅಳ್ನಾವರ ಸಹಕಾರ ಕ್ಷೇತ್ರದ ಚನ್ನಬಸವರಾಜ ಚೌರಿ, ವೈ.ಎಸ್.ಪಾಟೀಲ ಸೇರಿದಂತೆ ಅನೇಕರು ಮಾತನಾಡಿದರು. ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಎಸ್.ಎಸ್. ಕಬಾಡೆ ಸಹಕಾರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಯಿಲೆಯಿಂದ ಸಾವಿಗೀಡಾದ ಹಸುವಿನ ಮಾಲೀಕರಿಗೆ ಪರಿಹಾರದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಹಾಲಪ್ಪ ಕಬ್ಬೇರಹಳ್ಳಿ, ಸಿದ್ದನಗೌಡ ಪಾಟೀಲ, ತಿಪ್ಪಣ್ಣ ಭಜಮ್ಮನವರ, ಯಂಕಪ್ಪ ಹುಳಕಣ್ಣವರ, ವೀರಣ್ಣ ತುಪ್ಪದ, ಅಶೋಕ ಖಟವಟೆ, ಬಿ.ಆರ್. ನಿಡಗುಂದಿ, ಎಸ್.ಬಿ. ಆಲದಕಟ್ಟಿ, ಡಾ. ಪ್ರಸನ್ ಪಟ್ಟೇದ, ಸಿ.ಎಸ್. ಕಲ್ಲನಗೌಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಕರಿಯಪ್ಪನವರ ನಿರೂಪಿಸಿ, ರವಿ ಕಲ್ಲನಗೌಡರ ವಂದಿಸಿದರು.