ಹುನಗುಂದ ಪಟ್ಟಣದ ಬಸವಮಂಟಪದಲ್ಲಿ73ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮನ್ನು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಅವರು ಸಹಕಾರ ಸಂಘ ಪ್ರಾರಂಭಿಸಿ ಗ್ರಾಮೀಣ ಭಾಗದ ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಬೆನ್ನೆಲುಬಾಗಿ ಶಕ್ತಿ ನೀಡಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.ಪಟ್ಟಣದ ಬಸವಮಂಟಪದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಹುನಗುಂದ-ಇಲಕಲ್ಲ ತಾಲೂಕಿನ ಎಲ್ಲ ವಿವಿಧ ಸಹಕಾರ ಸಂಘಗಳು, ಬ್ಯಾಂಕಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರಕ್ಕೆ ನೂರ ವರ್ಷದ ಇತಿಹಾಸವಿದೆ. ಸಹಕಾರಿ ಸಂಘಗಳಲ್ಲಿ ಕಡಿಮೆ ಬಡ್ಡಿಯಲ್ಲಿ ರೈತರಿಗೆ ಬಡವರಿಗೆ ಸಾಲವನ್ನು ಜಾತಿ, ಮತ, ಪಂಥ ಎನ್ನದೆ ಎಲ್ಲರಿಗೂ ಸಂಘಗಳು ಸಾಲ ನೀಡುತ್ತಿವೆ. ಗ್ರಾಮೀಣ ಮಟ್ಟದಲ್ಲಿ ರೈತರು, ಬಡವರ ಬೆನ್ನುಲುಬಾಗಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ನಮ್ಮ ಅವಧಿಯಲ್ಲಿ ಹುನಗುಂದ-ಇಳಕಲ್ಲ ತಾಲೂಕಿನಲ್ಲಿ 11 ಪಿಕೆಪಿಎಸ್ ಸಂಘಗಳನ್ನು ಆರಂಭಿಸಲಾಗಿದೆ. ಶ್ರೀಘ್ರವೇ ಇನ್ನೆರಡು ಆರಂಭವಾಗಲಿವೆ. ನಮ್ಮ ತಂದೆ ರೈತರಾಗಿ ಸಹಕಾರಿ ಕ್ಷೇತ್ರದಿಂದಲ್ಲೇ ರಾಜಕಾರಣಿಯಾಗಿ, ಸಂಘದ ಅಧ್ಯಕ್ಷನಾಗಿ, ಸಚಿವನಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ನಾನು ಸಹ ಹಾವರಗಿ ಪಿಕೆಪಿಎಸ್ ಅಧ್ಯಕ್ಷನಾಗಿ ಸಚಿವನಾಗಿದ್ದೇನೆ. ಸಿದ್ದರಾಮಯ್ಯ ಸರ್ಕಾರದ ಅವರಧಿಯಲ್ಲಿ ಪಿಕೆಪಿಎಸ್ ಸಂಘದಲ್ಲಿ ರೈತರಿಗೆ ಶೇ.3ರಷ್ಟು ಬಡ್ಡಿಯಲ್ಲಿ ಸಾಲ ನೀಡಲಾಯಿತು. ಇದೀಗ 10 ಲಕ್ಷದವರೆಗೆ ಬಡ್ಡಿ ರಹಿತ ಕೃಷಿ ಸಾಲ ನೀಡಲಾಗಿದೆ. ಹಾಲು ಉತ್ಪನ್ನ ಸಂಘಕ್ಕೆ ಸಹಾಯಧನ ನೀಡಲಾಗುತ್ತದೆ. ಮಹಿಳೆಯರಿಗೆ ಸಹಕಾರಿ ಕ್ಷೇತ್ರಕ್ಕೆ ಉದ್ಯೋಗ ಕಲ್ಪಿಸಿ ಆರ್ಥಿಕ ನೆರವು ನೀಡಲಾಗಿದೆ. ರೈತರಿಗೆ ಈ ವರ್ಷದ ಆಯವ್ಯಯದಲ್ಲಿ 38ಲಕ್ಷ್ಮ ರೈತರಿಗೆ ₹30 ಸಾವಿರ ಕೋಟಿ ಸಾಲ ಹಣ ಸಹಕಾರಿ ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ, ಸಹಕಾರಿ ಸಂಘದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋದರೆ ಸಂಘಗಳು ಬೆಳವಣೆಗೆ ಹೊಂದಲು ಸಾಧ್ಯ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದ್ಯಾಮಣ್ಣ ಆರ್. ಗಾಳಿ ,ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಸಹಕಾರ ಮಹಾಮಂಡಳಿಯ ನಿರ್ದೇಶಕ ಕಾಶಿನಾಥ ಹುಡೇದ, ಮಹಾಂತೇಶ ಅವಾರಿ ಮಾತನಾಡಿದರು.ರಾಜ್ಯ ಪತ್ತಿನ ಸಹಕಾರ ಮಹಾಮಂಡಳ ನಿರ್ದೇಶಕ, ಆರ್.ಪಿ.ಕಲಬುರ್ಗಿ, ಶಿವಕುಮಾರ ಬಾದವಾಡಗಿ, ಸಂಗಣ್ಣ ಹಂಡಿ, ಸುರೇಶ ಹಾದಿಮನಿ, ನೀಲಪ್ಪ ತಪೇಲಿ, ಸಾಂತಪ್ಪ ಸಾಂತಗೇರಿ, ವೀರಯ್ಯ ಭದ್ರಗೌಡ, ಜೈನಸಾಬ ಹಗೇದಾಳ,ಶೇಖರಪ್ಪ ಬಾದವಾಡಗಿ, ಉಪನಿಂಬಧಕ ದಾನಯ್ಯ ಹಿರೇಮಠ, ಸಾಹಾಯಕ ನಿಂಬಧಕಿ ಎ.ಎಸ್. ರೇಣುಕಾ, ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಬಾಡಗಿ, ಡಿಸಿಸಿ ಬ್ಯಾಂಕ ವ್ಯವಸ್ಥಾಪಕ ಬಿ.ಎಸ್. ಪಾಟೀಲ, ಬಸವೇಶ್ವರ ಬ್ಯಾಂಕ ವ್ಯವಸ್ಥಾಪಕ ಎಸ್.ಬಿ. ಚಳಗೇರಿ, ಮಂಜುನಾಥ ಶಿರಗುಪ್ಪಿ, ವಿಜಯ ಡಂಬಳ ಸೇರಿ ಸಹಕಾರಿ ಸಂಘದ ಪದಾಧಿಕಾರಿಗಳು ಇದ್ದರು.